ADVERTISEMENT

ವಿಜಯ್‌ ಮಲ್ಯ–ಗೋಪಿನಾಥ್‌ ವಿರುದ್ಧದ ತನಿಖೆ ರದ್ದು

​ಪ್ರಜಾವಾಣಿ ವಾರ್ತೆ
Published 1 ಮೇ 2024, 0:30 IST
Last Updated 1 ಮೇ 2024, 0:30 IST
ವಿಜಯ್‌ ಮಲ್ಯ
ವಿಜಯ್‌ ಮಲ್ಯ   

ಬೆಂಗಳೂರು: ‘ಕಿಂಗ್‌ ಫಿಷರ್‌ ಮತ್ತು ಏರ್‌ ಡೆಕ್ಕನ್ ವಿಲೀನ ಪ್ರಕ್ರಿಯೆಯಲ್ಲಿ ಮೋಸ ನಡೆದಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೇಶ ತೊರೆದಿರುವ ಉದ್ಯಮಿ ವಿಜಯ್ ಮಲ್ಯ ಹಾಗೂ ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್‌ ಜಿ.ಆರ್.ಗೋಪಿನಾಥ್ ವಿರುದ್ಧ, ‘ಗಂಭೀರ ವಂಚನೆಯ ತನಿಖಾ ಕಚೇರಿ‘ (ಸೀರಿಯಸ್ ಫ್ರಾಡ್‌ ಇನ್ವೆಸ್ಟಿಗೇಷನ್‌ ಆಫೀಸ್‌–ಎಸ್ಎಫ್ಐಒ) ನಡೆಸುತ್ತಿದ್ದ ತನಿಖಾ ಪ್ರಕ್ರಿಯೆಗಳನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಈ ಸಂಬಂಧ ಕ್ಯಾಪ್ಟನ್ ಜಿ.ಆರ್‌.ಗೋಪಿನಾಥ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ವಿಶೇಷ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡದೇ ಬಂಧನದ ವಾರಂಟ್‌ ಹೊರಡಿಸಿದೆ. ಇದು ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾದುದು. ಕಂಪೆನಿಗಳ ಕಾಯ್ದೆ–1956ರ ಅಡಿಯ ಆರೋಪವನ್ನು 2013ರ ಕಂಪನಿ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಲಾಗದು. ಈ ಕ್ರಮವು ಪೂರ್ವಾನ್ವಯ ಅಪರಾಧೀಕರಣದಿಂದ ರಕ್ಷಣೆ ಒದಗಿಸುವ ಸಂವಿಧಾನದ ಅಡಿ ದೊರೆತಿರುವ 20(1)ನೇ ವಿಧಿಯ ಉಲ್ಲಂಘನೆಯಾಗಲಿದೆ’ ಎಂದು ನ್ಯಾಯಪೀಠ ತನಿಖಾ ಪ್ರಕ್ರಿಯೆ ವಜಾಕ್ಕೆ ಕಾರಣ ನೀಡಿದೆ.

ADVERTISEMENT

ಪ್ರಕರಣವೇನು?: ಏರ್‌ ಡೆಕ್ಕನ್ ಅನ್ನು ವಶಕ್ಕೆ ಪಡೆಯುವಾಗ ಕಿಂಗ್‌ ಫಿಷರ್‌ ಕಂಪನಿ ನಷ್ಟದಲ್ಲಿತ್ತು. ಈ ಸಂದರ್ಭದಲ್ಲಿ, ‘ಸಂಭಾವ್ಯ ಬಂಡವಾಳದ ಲಾಭ ಮತ್ತು ಅಂತಹ ಬಂಡವಾಳ ಲಾಭದ ಮೇಲಿನ ತೆರಿಗೆಯನ್ನು ತಪ್ಪಿಸಲು ಹಾಗೂ ಅರ್ಹತಾ ಷರತ್ತುಗಳನ್ನು ಪೂರೈಸದೇ ವಿಲೀನ ಪ್ರಕ್ರಿಯೆ ನಡೆಸಲಾಗಿದೆ’ ಎಂಬ ಆರೋಪದಡಿ ಎಸ್‌ಎಫ್‌ಐಒ ತನಿಖೆ ಆರಂಭಿಸಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.