ADVERTISEMENT

ರೌಡಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್ಚುವರಿ ಪೊಲೀಸ್ ಕಮಿಷನರ್

‘ಪೋಸ್ ಕೊಟ್ಟು ಬಾಲ ಬಿಚ್ಚಿದರೆ ಹುಷಾರ್’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 19:45 IST
Last Updated 2 ಅಕ್ಟೋಬರ್ 2018, 19:45 IST
ರೌಡಿಗಳ ಕೈ ಮೇಲಿನ ಗಾಯದ ಗುರುತುಗಳನ್ನು ಅಲೋಕ್‌ಕುಮಾರ್‌ ಪರಿಶೀಲಿಸಿದರು
ರೌಡಿಗಳ ಕೈ ಮೇಲಿನ ಗಾಯದ ಗುರುತುಗಳನ್ನು ಅಲೋಕ್‌ಕುಮಾರ್‌ ಪರಿಶೀಲಿಸಿದರು   

ಬೆಂಗಳೂರು: ‘ಬಿಳಿ ಬಟ್ಟೆ ಹಾಕ್ಕೊಂಡು ರಾಜಕಾರಣಿಯಂತೆ ಪೋಸ್ ಕೊಟ್ಟು ಬಾಲ ಬಿಚ್ಚಿದರೆ ಪರಿಣಾಮ ನೆಟ್ಟಗಿರಲ್ಲ. ಬದುಕುವ ಆಸೆ ಇದ್ದರೆ, ಇಂದಿನಿಂದಲೇ ಸಾಮಾನ್ಯ ಪ್ರಜೆಯಂತೆ ಜೀವನ ಮಾಡಿ. ಇಲ್ಲದಿದ್ದರೆ, ನನ್ನದೇ ಭಾಷೆಯಲ್ಲಿ ಉತ್ತರ ಕೊಡುವೆ, ಹುಷಾರ್’.

– ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್, ರೌಡಿಗಳಿಗೆ ಕೊಟ್ಟ ಎಚ್ಚರಿಕೆ ಇದು.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಮಂಗಳವಾರ ರೌಡಿಗಳ ಪರೇಡ್‌ ನಡೆಸಿದ ಅಲೋಕ್‌ಕುಮಾರ್‌, ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವ ರೌಡಿಗಳ ಬೆವರಿಳಿಸಿದರು.

ADVERTISEMENT

‘ಇವತ್ತು ಗಾಂಧಿ ಜಯಂತಿ. ಅದಕ್ಕೆ ನಿಮ್ಮನ್ನು ಕರೆದು ಬುದ್ಧಿ ಹೇಳುತ್ತಿದ್ದೇನೆ. ಇನ್ನುಮುಂದೆ ನೀವೆಲ್ಲ ಬಾಲ ಮುಚ್ಕೊಂಡು ಸುಮ್ಮನಿರಬೇಕು. ಇಲ್ಲದಿದ್ದರೆ, ಬಾಲವನ್ನೇ ಕತ್ತರಿಸಿಬಿಡ್ತೀನಿ’ ಎಂದು ಅಲೋಕ್‌ಕುಮಾರ್‌ ಎಚ್ಚರಿಸಿದರು.

ಬಿಳಿ ಬಟ್ಟೆ ತೊಟ್ಟು ಪರೇಡ್‌ಗೆ ಬಂದಿದ್ದ ರೌಡಿ ಲೋಕೇಶ್ ಅಲಿಯಾಸ್ ಮುಲಾಮುನನ್ನು ಕಂಡು ಗರಂ ಆದ ಅಲೋಕ್‌, ‘ಏನೋ, ಮಾಡೋದೆಲ್ಲ ಮನೆ ಹಾಳ ಕೆಲಸ. ಬಿಳಿ ಬಟ್ಟೆ ತೊಟ್ಟು ರಾಜಕಾರಣಿಯಂತೆ ಪೋಸ್‌ ಕೊಡ್ತಿಯಾ? ಈ ರೀತಿ ಮಾಡಿದರೆ ಪಾಪ ಕಳೆಯುತ್ತಾ’ ಎಂದು ಗುಡುಗಿದರು.

‘ಅದು ಯಾವುದೋ ‘ವೈಭವ್ ಕರ್ನಾಟಕ’ ಅಂತಾ ಸಂಘಟನೆ ಕಟ್ಟಿಕೊಂಡು ಓಡಾಡ್ತಾ ಇದ್ದಿಯಂತೆ. ಜನರಿಗೆ ಬೆದರಿಸ್ತಾ ಲ್ಯಾಂಡ್ ಡೀಲಿಂಗ್‌ ಮಾಡ್ತಾ ಇದ್ದಿಯಂತೆ. ನಿನ್ನ ಬಗ್ಗೆ ಎಲ್ಲ ತಿಳಿದುಕೊಂಡಿದ್ದೇನೆ. ಇದೇ ನಿನಗೆ ಲಾಸ್ಟ್ ವಾರ್ನಿಂಗ್’ ಎಂದು ಬೆವರಿಳಿಸಿದರು.

ಮುಲಾಮನ ಸಹಚರನಿಗೂ ಬಿಸಿ ಮುಟ್ಟಿಸಿದ ಅಲೋಕ್, ‘ನೀನೂ ಬಿಳಿ ಬಟ್ಟೆ ಹಾಕ್ಕೊಂಡು ನೇತಾರನಂತೆ ಬಂದಿದ್ದೀಯಾ. ಕಾರ್ಪೋರೇಟರ್ ಆಗಲು ಪ್ಲಾನ್ ಮಾಡ್ತಾ ಇದ್ದೀಯಾ? ನಿನಗೆ ಇದೇ ಕೊನೆ ಎಚ್ಚರಿಕೆ. ಎಲ್ಲ ಬಿಟ್ಟುಬಿಡು’ ಎಂದು ಗದರಿದರು.

ರೌಡಿಗಳಾದ ರಾಮ, ಲಕ್ಷ್ಮಣನನ್ನು ಕಂಡು, ‘ರಾಮ–ಲಕ್ಷ್ಮಣ ಅಂತಾ ಹೆಸರಿಟ್ಟುಕೊಂಡಿದ್ದಿರಾ? ಮಾಡೋದೆಲ್ಲ ಮನೆಹಾಳ ಕೆಲಸ’ ಎಂದು ಕಿಡಿಕಾರಿದರು.

ಹೊಸ ಬಟ್ಟೆ, ಕನ್ನಡಕ ಕಂಡು ಗರಂ: ಹಲವು ರೌಡಿಗಳು, ಹೊಸ ಬಟ್ಟೆ ಹಾಗೂ ಕನ್ನಡಕ ಧರಿಸಿಕೊಂಡು ಬಂದಿದ್ದರು. ಗರಂ ಆದ ಅಲೋಕ್, ‘ನಾನೇನು ಇಲ್ಲಿ ಜಾತ್ರೆ ಅಥವಾ ಮದುವೆ ಮಾಡ್ತಾ ಇದ್ದೇನಾ, ಹೊಸ ಬಟ್ಟೆ ಹಾಕ್ಕೊಂಡು ಬರೋಕೆ? ಕನ್ನಡಕ ಬೇರೆ. ಜಾಸ್ತಿ ಓದಿದ್ದೇನೆ ಅಂತಾ ಪೋಸ್ ಕೊಡೋಕಾ ಅಥವಾ ಜನರು ನಿಮ್ಮನ್ನು ನೋಡಿ ಭಯಬೀಳಲಿ ಅಂತಾನಾ?’ ಎಂದು ಚಳಿ ಬಿಡಿಸಿದರು.

ಟ್ಯಾಟೊ ತೆಗೆಸಿ, ಕೂದಲು ಕತ್ತರಿಸಿ: ಕೈ–ಕಾಲು ಹಾಗೂ ದೇಹದ ಮೇಲೆ ರೌಡಿಗಳು ಟ್ಯಾಟೊ ಹಾಕಿಸಿಕೊಂಡಿದ್ದನ್ನು ಕಂಡ ಅಲೋಕ್‌ಕುಮಾರ್, ‘ಇವತ್ತೇ ಟ್ಯಾಟೊ ತೆಗೆಸಿ. ಕೂದಲು ಕತ್ತರಿಸಿಕೊಳ್ಳಿ. ಇಲ್ಲದಿದ್ದರೆ, ನಾನೇ ಕತ್ತರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ರೌಡಿ ಕೈ ಮೇಲಿದ್ದ ರಾಜಕುಮಾರ್ ಹೆಸರಿನ ಟ್ಯಾಟೊ ಕಂಡು, ‘ರಾಜ್‌ಕುಮಾರ್ ಹೆಸರಿಗೆ ಮಸಿ ಬಳಿತಾ ಇದ್ದೀಯಾ. ಈಗಲೇ ಅದನ್ನು ಅಳಿಸು’ ಎಂದು ಹೇಳಿದರು.

ಪರೇಡ್‌ ನಡೆಯುತ್ತಿದ್ದ ವೇಳೆಯಲ್ಲಿ ಸಿಸಿಬಿ ಕಚೇರಿ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ರೌಡಿಗಳಿಗೆ ಬೈಯುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುವಲ್ಲಿ ನಿರತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.