ADVERTISEMENT

ಪ್ರಣವ್‌ ಮೊಹಾಂತಿಗೆ ಪೊಲೀಸ್‌ ಮಹಾನಿರ್ದೇಶಕರಾಗಿ ಬಡ್ತಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 19:30 IST
Last Updated 29 ಜೂನ್ 2024, 19:30 IST
ಪ್ರಣವ್‌ ಮೊಹಾಂತಿ
ಪ್ರಣವ್‌ ಮೊಹಾಂತಿ   

ಬೆಂಗಳೂರು: ಪೊಲೀಸ್‌ ಕಂಪ್ಯೂಟರ್ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿದ್ದ 1994ರ ವೃಂದದ ಐಪಿಎಸ್‌ ಅಧಿಕಾರಿ ಪ್ರಣವ್‌ ಮೊಹಾಂತಿ ಅವರಿಗೆ ಪೊಲೀಸ್‌ ಮಹಾನಿರ್ದೇಶಕರಾಗಿ (ಡಿಜಿಪಿ) ಶನಿವಾರ ಬಡ್ತಿ ನೀಡಲಾಗಿದೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕರು (ಡಿಜಿ ಆ್ಯಂಡ್‌ ಐಜಿಪಿ) ಸೇರಿದಂತೆ ರಾಜ್ಯದಲ್ಲಿ ಆರು ಡಿಜಿಪಿ ಹುದ್ದೆಗಳಿವೆ. ಈ ಪೈಕಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಡಿಜಿಪಿ ಹುದ್ದೆಯಲ್ಲಿದ್ದ ಕಮಲ್‌ ಪಂತ್‌ ಶನಿವಾರ ಸೇವೆಯಿಂದ ನಿವೃತ್ತರಾದರು. ಇದರಿಂದ ತೆರವಾದ ಡಿಜಿಪಿ ಹುದ್ದೆಗೆ ಮೊಹಾಂತಿ ಅವರಿಗೆ ಬಡ್ತಿ ನೀಡಲಾಗಿದೆ.

ಡಿಜಿ ಆ್ಯಂಡ್‌ ಐಜಿಪಿ ಅಲೋಕ್‌ ಮೋಹನ್‌, ಲೋಕಾಯುಕ್ತದ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಠಾಕೂರ್‌, ಬಂದಿಖಾನೆ ಮತ್ತು ಸುಧಾರಣಾ ಸೇವೆಗಳ ವಿಭಾಗದ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಸಿಐಡಿ ಡಿಜಿಪಿ ಎಂ.ಎ. ಸಲೀಂ, ರಾಜ್ಯ ಪೊಲೀಸ್‌ ವಸತಿ ನಿಗಮದ ಅಧ್ಯಕ್ಷರಾಗಿರುವ ಕೆ. ರಾಮಚಂದ್ರ ರಾವ್‌ ಅವರು ಡಿಜಿಪಿ ದರ್ಜೆಯಲ್ಲಿದ್ದಾರೆ.

ADVERTISEMENT

ಹೆಚ್ಚುವರಿ ಪ್ರಭಾರ: ಮೊಹಾಂತಿ ಅವರಿಗೆ ಪೊಲೀಸ್‌ ಕಂಪ್ಯೂಟರ್‌ ವಿಭಾಗದ ಜತೆಗೆ ಸಿಐಡಿಯ ಸೈಬರ್‌ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣ ವಿಭಾಗದ ಡಿಜಿಪಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ವಹಿಸಿ ಶನಿವಾರ ಆದೇಶ ಹೊರಡಿಸಲಾಗಿದೆ.

ಮಾಲಿನಿ ಕೃಷ್ಣಮೂರ್ತಿ ಅವರಿಗೆ ಬಂದಿಖಾನೆ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಜತೆಗೆ ಅಗ್ನಿಶಾಮಕ, ತುರ್ತು ಸೇವೆಗಳು ಮತ್ತು ಗೃಹರಕ್ಷಕ ದಳದ ಡಿಜಿಪಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ವಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.