ADVERTISEMENT

KSRTC ಐರಾವತ 2.0: ತಿಂಗಳ ಕೊನೆಗೆ 20 ಬಸ್‌ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 15:43 IST
Last Updated 7 ಅಕ್ಟೋಬರ್ 2024, 15:43 IST
ಕೆಎಸ್‌ಆರ್‌ಟಿಸಿಗೆ ಸೇರ್ಪಡೆಗೊಳ್ಳಲಿರುವ ಐರಾವತ 2.0 ಮಾದರಿಯ ಬಸ್‌ ಅನ್ನು ಹೊಸಕೋಟೆ ವೋಲ್ವೊ ಬಸ್ ತಯಾರಿಕಾ ಫ್ಯಾಕ್ಟರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸಿದರು
ಕೆಎಸ್‌ಆರ್‌ಟಿಸಿಗೆ ಸೇರ್ಪಡೆಗೊಳ್ಳಲಿರುವ ಐರಾವತ 2.0 ಮಾದರಿಯ ಬಸ್‌ ಅನ್ನು ಹೊಸಕೋಟೆ ವೋಲ್ವೊ ಬಸ್ ತಯಾರಿಕಾ ಫ್ಯಾಕ್ಟರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸಿದರು   

ಬೆಂಗಳೂರು: ಐರಾವತ 2.0 ಮಾದರಿಯ 20 ಬಸ್‌ಗಳು ಅಕ್ಟೋಬರ್ ಕೊನೆಯೊಳಗೆ ಕೆಎಸ್‌ಆರ್‌ಟಿಸಿಗೆ ಸೇರ್ಪಡೆಗೊಳ್ಳಲಿವೆ.

ಹೊಸಕೋಟೆಯಲ್ಲಿರುವ ವೊಲ್ವೊ ಬಸ್‌ ತಯಾರಿಕಾ ಘಟಕಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌.ಆರ್. ಶ್ರೀನಿವಾಸ್‌, ಉಪಾಧ್ಯಕ್ಷ ಮೊಹಮ್ಮದ್‌ ರಿಜ್ವಾನ್‌ ನವಾಬ್‌, ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಸೋಮವಾರ ಭೇಟಿ ನೀಡಿ ಐರಾವತ–2.0 ಬಸ್‌ಗಳ ಪರಿವೀಕ್ಷಣೆ ನಡೆಸಿದರು.

ಬಸ್‌ ವಿಶೇಷತೆ: ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ ಮತ್ತು ಹಗಲು ಚಾಲನಾ ಲೈಟ್‌ಗಳೊಂದಿಗೆ (ಡಿಆರ್‌ಎಲ್‌) ಹೊಸ‌ ಮಾದರಿಯ ಸುಂದರವಾದ ಒಳಾಂಗಣ ವಿನ್ಯಾಸ ಮತ್ತು ಬಾಹ್ಯವಾಗಿ ಸ್ಕ್ಯಾಂಡಿನೇವಿಯನ್ ವಿನ್ಯಾಸವನ್ನು ಈ ಬಸ್‌ ಹೊಂದಿದೆ. 

ADVERTISEMENT

ಇಂಧನ ದಕ್ಷತೆ ಹೆಚ್ಚಿರುವ ಏರೋಡೈನಾಮಿಕ್ ವಿನ್ಯಾಸ ಅಳವಡಿಸಲಾಗಿದೆ. ಸುಧಾರಿತ ಎಂಜಿನ್‌, ಅಗ್ನಿ ಅವಘಡ ಎಚ್ಚರಿಕೆ ಮತ್ತು ಸುರಕ್ಷತೆ ವ್ಯವಸ್ಥೆ (ಎಫ್‌ಎಪಿಎಸ್‌) ಅಳವಡಿಸಲಾಗಿದೆ. ಬಸ್ಸಿನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪುಗಳಿದ್ದು 30 ನಾಜಲ್‌ಗಳಿಂದ ನೀರು ಸರಬರಾಜು ಆಗಿ ಬೆಂಕಿ ಅವಘಡ ನಿಯಂತ್ರಿಸುವ ವ್ಯವಸ್ಥೆ ಇದಾಗಿದೆ.

ಶೇ 3.5ರಷ್ಟು ಅಧಿಕ ಉದ್ದ ಇರುವ ಬಸ್‌ನಲ್ಲಿ ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಿಸಲಾಗಿದೆ. ಬಸ್‌ನ ಎತ್ತರ ಶೇ. 5.6ರಷ್ಟು ಅಧಿಕ ಇರಲಿದೆ. ಕಿಟಕಿ ಗಾಜು ಶೇ 9.5ರಷ್ಟು ವಿಸ್ತಾರವಾಗಿದೆ. ವಿಶಾಲ ಲಗೇಜು ಸ್ಥಳಾವಕಾಶ, ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌, ಉತ್ತಮ ಹವಾನಿಯಂತ್ರಣಾ ವ್ಯವಸ್ಥೆ, ಉನ್ನತ ದರ್ಜೆಯ ಉತ್ತಮ ವಿನ್ಯಾಸದ ಆಸನಗಳಿವೆ.

ಹಿಂಭಾಗದಲ್ಲಿ ಫಾಗ್‌ ಲೈಟ್‌ ಅಳವಡಿಸಿರುವುದರಿಂದ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸುರಕ್ಷತೆ ಇರುತ್ತದೆ. ಚಾಲಕರಿಗೆ ಸುಲಭವಾಗಿ ಕೈಗೆಟುಕುವ ಚಾಲಕ ನಿಯಂತ್ರಣಗಳು ಮತ್ತು ಸ್ವಿಚ್‌ಗಳನ್ನು ಹೊಂದಿದೆ. ಬಾಗಿಲಿನ ಮೂಲಕ ಪಾದಚಾರಿಗಳನ್ನು ಸುಲಭವಾಗಿ ಚಾಲಕರು ಗಮನಿಸುವ ವ್ಯವಸ್ಥೆ ಇದೆ. 

ವೊಲ್ವೊ–9600 ಮಾದರಿಯಾಗಿದ್ದು, ಒಂದು ಬಸ್‌ನ ದರ ₹1.78 ಕೋಟಿ ಆಗಿದೆ. ಈಗಾಗಲೇ 443 ಐಷಾರಾಮಿ ಬಸ್‌ಗಳನ್ನು ಸಂಸ್ಥೆ ಹೊಂದಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.