ಬಳ್ಳಾರಿ: ಗಣಿಗಾರಿಕೆಯಿಂದ ನಲುಗಿರುವ ಜಿಲ್ಲೆಯ ಸಂಡೂರು ತಾಲ್ಲೂಕಿನ ತೀರ್ಥ–ತೊರೆಗಳ ಪೈಕಿ ಪ್ರಮುಖವಾದ ಹರಿಶಂಕರ ತೀರ್ಥದಲ್ಲಿ ಅದಿರುಯುಕ್ತ ಪುಡಿ ಮಿಶ್ರಣವಾಗಿ ಹರಿಯುತ್ತಿರುವುದು ಆತಂಕಕ್ಕೆ ದಾರಿ ಮಾಡಿದೆ.
ನೆಲದೊಳಗೇ ಹರಿದು ಬರುವ ಹರಿಶಂಕರ ತೀರ್ಥವು ಶುದ್ಧ ಎಂಬುದು ಇಲ್ಲಿನ ಜನರ ಬಹುಕಾಲದ ನಂಬಿಕೆ. ಆದರೆ ಈಗ ನಂಬಿಕೆಯು ಹುಸಿಯಾಗುವ ರೀತಿಯಲ್ಲಿ ನೀರಿನಲ್ಲಿ ಅದಿರು ಪುಡಿ ಕಾಣಿಸಿಕೊಂಡಿದೆ.
ಸಂಡೂರಿನ ಪರಿಸರ ಕಾರ್ಯಕರ್ತ ವಿನಯ್ ಮುದೇನೂರು ಶನಿವಾರ ಫೇಸ್‌ಬುಕ್‌ನ ಸ್ಕಂದಗಿರಿ ಸಂರಕ್ಷಣಾ ಸಮೂಹ ಗ್ರೂಪ್‌ನಲ್ಲಿ ಈ ವಿಷಯವನ್ನು ಉಲ್ಲೇಖಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಸಂಡೂರಿನ ಹಲವು ಪರಿಸರ ಕಾರ್ಯಕರ್ತರೂ ಅದಕ್ಕೆ ದನಿಗೂಡಿಸಿದ್ದಾರೆ.
‘ಹರಿಶಂಕರ ಇಂದಲ್ಲ ನಾಳೆ ಸಂಪೂರ್ಣವಾಗಿ ಬತ್ತಿಹೋದರೆ ಆಶ್ಚರ್ಯವಿಲ್ಲ. ಭೂಮಿಯಿಂದ ನಿರಂತರವಾಗಿ ವರ್ಷವಿಡೀ ನೀರು ಹೊರಹೊಮ್ಮುವ ಹರಿಶಂಕರ ತೀರ್ಥದ ನೀರನ್ನು ಬಾಟಲಿಯಲ್ಲಿ ಸಂಗ್ರಹಿಸಿ ಒಂದು ದಿನ ಬಿಟ್ಟು ನೋಡಿದರೆ ಕಬ್ಬಿಣದ ಅದಿರುಯುಕ್ತ ಪುಡಿಯು (Iron ore fines) ತಳಭಾಗದಲ್ಲಿ ಸಂಗ್ರಹವಾಗಿರುವುದು ಕಾಣುತ್ತದೆ’ ಎಂದು ಅವರು ಬಾಟಲಿಯ ಚಿತ್ರವನ್ನೂ ನೀಡಿದ್ದಾರೆ.
‘ಹರಿಶಂಕರದ ಮೇಲಿನ ಪ್ರದೇಶದಲ್ಲಿ ಗಣಿಸ್ಫೋಟ ನಡೆಸುವುದರಿಂದ ಅದಿರಿನ ಅಂಶಗಳು ನೀರಿನಿಂದ ಹೊರಬರುತ್ತಿವೆ. ಇದೇ ರೀತಿಯಲ್ಲಿ ಸ್ಫೋಟಗಳು ಮುಂದುವರೆದರೆ ಶಿಲಾಪದರಗಳು ಕಳಚಿ ಜಲಮಾರ್ಗಕ್ಕೆ ಬಿದ್ದರೆ ಹರಿಶಂಕರದಲ್ಲಿ ಶಾಶ್ವತವಾಗಿ ನೀರು ಇಲ್ಲವಾಗಬಹುದು ಅಥವಾ ಈ ಜಲಮಾರ್ಗ ಮುಚ್ಚಿ ಇನ್ನೆಲ್ಲಿಯೋ ನೀರು ಚಿಮ್ಮಬಹುದು. ಐತಿಹಾಸಿಕ, ಪೌರಾಣಿಕ ಹಿನ್ನೆಲೆಯಿರುವ ಹರಿಶಂಕರ ತೀರ್ಥವು ಫೋಟೋ ಮತ್ತು ವೀಡಿಯೋಗಳಲ್ಲಿ ಮಾತ್ರ ಉಳಿಯಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅವರಿಗೆ ಪ್ರತಿಕ್ರಿಯಿಸಿರುವ ಜನಸಂಗ್ರಾಮ ಪರಿಷತ್ತಿನ ಮುಖಂಡ ಶ್ರೀಶೈಲ ಆಲ್ದಳ್ಳಿ, ‘ಹರಿಶಂಕರ ದೇವಸ್ಥಾನದ ನೆತ್ತಿಯ ಮೇಲೆಯೇ ಎಂ ಎಂ ಎಲ್ ಗಣಿಗಾರಿಕೆ ನಡೆಯುತ್ತಿದೆ. ಈ ಪ್ರದೇಶದ ಸುತ್ತಲಿನ 2 ಕಿಮೀ ವ್ಯಾಪ್ತಿಯನ್ನು ಗಣಿ ನಿಷೇಧಿತ ವಲಯವೆಂದು ಘೋಷಿಸಲು ಪರಿಷತ್ತು ಆಗ್ರಹಿಸಿತ್ತು. ಆ ಹಿನ್ನೆಲೆಯಲ್ಲಿ ಪರಿಶೀಲನೆಗೆಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ವಿಜ್ಞಾನಿಗಳ ತಂಡ ಬಂದಾಗ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ, ಅಂತರ್ಜಲ ಅಭಿವೃದ್ಧಿ ಇಲಾಖೆ, ಪರಿಸರ ಮಾಲಿನ್ಯ ಮಂಡಳಿ, ವನ್ಯಜೀವಿ ಸಂರಕ್ಷಣೆ ಇಲಾಖೆಯ ಅಧಿಕಾರಿಗಳು ಪರೋಕ್ಷವಾಗಿ ಗಣಿಲಾಬಿಗಳ ಬೆನ್ನಿಗೆ ನಿಂತರು’ ಎಂದು ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಉತ್ತರ ಕರ್ನಾಟಕದ ಆಕ್ಸಿಜನ್ ಉತ್ಪಾದನೆಯ ಹೃದಯ ಭಾಗವೇ ಆಗಿರುವ ಸ್ವಾಮಿ ಮಲೈ ಅರಣ್ಯ ಪ್ರದೇಶಕ್ಕೆ ಕನ್ನ ಹಾಕುತ್ತಿರುವುದು ನಮ್ಮ ಕೊರಳಿಗೆ ನಾವುಗಳೇ ನೇಣು ಬಿಗಿದುಕೊಂಡಂತೆಯೇ ಸರಿ’ ಎಂದು ವಿಷಾದಿಸಿದ್ದಾರೆ.
ಕಾನೂನು ಹೋರಾಟ: ‘ಸಂಡೂರಿನ ಪರಿಸರಸೂಕ್ಷ್ಮ ವಲಯದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿನಡೆಬೇಕಾದಕಾನೂನು ಹೋರಾಟಕ್ಕೆ ಕೊರೊನಾ ತೊಡಕಾಗಿದೆ. ಮುಂದಿನ ದಿನಗಳಲ್ಲಿ ಹಿರಿಯರೊಂದಿಗೆ ಚರ್ಚಿಸಿ ಅಂತಿಮ ಕಾನೂನು ಸಮರಕ್ಕೆ ಸಿದ್ದರಾಗುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.