ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬೆನ್ನು ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ತನಿಖೆಯ ಕುಣಿಕೆಯಲ್ಲಿ ನಾಯಕರನ್ನು ಸಿಲುಕಿಸುವ ದಾರಿ ಹಿಡಿದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಾಗೂ ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರದ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ–ಜೆಡಿಎಸ್ ನಾಯಕರು ಪಾದಯಾತ್ರೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಬಿಜೆಪಿ ನಾಯಕರ ಎಲ್ಲ ಪ್ರಕರಣಗಳ ತನಿಖೆ ನಡೆಸುವುದಾಗಿ ಘೋಷಿಸಿದ್ದರು. ಆ ಬೆನ್ನಲ್ಲೇ, ಸರಣಿ ತನಿಖೆಗಳು ಆರಂಭವಾಗಿವೆ. ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಿಐಡಿ ತನಿಖೆ ಚುರುಕುಗೊಂಡಿದೆ
ಕಿಯೋನಿಕ್ಸ್ ಅಕ್ರಮ ತನಿಖೆ: ಮಹೇಶ್ವರ ಹೆಗಲಿಗೆ
ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ (ಕಿಯೋನಿಕ್ಸ್) ನಡೆದಿದೆ ಎನ್ನಲಾಗಿರುವ ₹400 ಕೋಟಿಗೂ ಹೆಚ್ಚಿನ ಮೊತ್ತದ ಅಕ್ರಮಗಳ ತನಿಖೆ ಹೊಣೆಯನ್ನು ‘ನಮ್ಮ ಮೆಟ್ರೊ’ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಅವರಿಗೆ ರಾಜ್ಯ ಸರ್ಕಾರ ವಹಿಸಿದೆ.
ಈ ಹೊಣೆ ವಹಿಸಿಕೊಂಡ ಬೆನ್ನಲ್ಲೆ, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಮಹೇಶ್ವರ ರಾವ್, ತನಿಖಾ ಪ್ರಕ್ರಿಯೆಗಳಿಗೆ ಸಹಕರಿಸಲು ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನ ಕುಮಾರ್ ಮತ್ತು ಮಾಜಿ ಲೆಕ್ಕ ಪರಿಶೋಧನಾ ನಿಯಂತ್ರಕ ನಂದಕುಮಾರ್ ಅವರನ್ನು ನೀಡಬೇಕು. ಅಲ್ಲದೆ, ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಬೇಕು’ ಎಂದಿದ್ದಾರೆ.
2018–19ರಿಂದ 2022–23ರವರೆಗೆ ಅಧಿಕಾರ ನಡೆಸಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಯೋನಿಕ್ಸ್‌ನಲ್ಲಿ ಸರಕುಗಳ ಖರೀದಿಯಲ್ಲಿ ಬೃಹತ್ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಮಹಾಲೇಖಪಾಲರು (ಸಿಎಜಿ) ವರದಿ ನೀಡಿದ್ದರು. ಈ ವರದಿಯನ್ನು ಪರಿಶೀಲಿಸಿದ್ದ ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರು, ‘ಖರೀದಿ ಪ್ರಕ್ರಿಯೆ ಸಂದರ್ಭದಲ್ಲಿ ನಿಯಮ ಉಲ್ಲಂಘನೆ, ಕಳಪೆ ಗುಣಮಟ್ಟದ ಸಾಮಗ್ರಿಗಳ ಸರಬರಾಜು, ದಾಖಲೆಗಳನ್ನು ಪರಿಶೀಲಿಸದೆ ಬಿಲ್‌ಗಳನ್ನು ಪಾವತಿಸಿರುವುದು ಪತ್ತೆಯಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದು ಅಗತ್ಯವಿದೆ’ ಎಂದು ಅವರು ಇಲಾಖೆಗೆ ಶಿಫಾರಸು ಮಾಡಿದ್ದರು.
ಕಿಯೋನಿಕ್ಸ್‌ನಲ್ಲಿ ನಡೆದಿರುವ ಖರೀದಿಯಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ? ಸಾಮಗ್ರಿಗಳು ಸಮರ್ಪಕವಾಗಿ ಪೂರೈಕೆ ಆಗಿದೆಯೇ? ನಿಗದಿತ ಮಾನದಂಡಗಳಿಗೆ ಅನುಗುಣವಾಗಿಯೇ ಖರೀದಿ ಪ್ರಕ್ರಿಯೆಗಳು ನಡೆದಿವೆಯೇ? ಹಣ ಪಾವತಿ ಕುರಿತು ತನಿಖೆ ನಡೆಸಬೇಕು. ಅಲ್ಲದೆ, ಅಕ್ರಮದಲ್ಲಿ ಭಾಗಿಯಾಗಿರುವ ಕಿಯೋನಿಕ್ಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ವೆಂಡರ್ ದಾರರನ್ನು ಪತ್ತೆ ಹಚ್ಚಿ ಮಹೇಶ್ವರ ಅವರು ವರದಿ ಸಲ್ಲಿಸಬೇಕಿದೆ.
‘ಪ್ರಜಾವಾಣಿ’ಗೆ ಈ ಕುರಿತು ಮಾಹಿತಿ ನೀಡಿದ ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ‘2018ರಿಂದ 2023ರ ಅವಧಿಯಲ್ಲಿ ಕಿಯೋನಿಕ್ಸ್‌ನಲ್ಲಿ ₹400 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ಆಗಿದೆ ಎಂದು ಸಿಎಜಿ ವರದಿ ಹೇಳಿತ್ತು. ನಿವೃತ್ತ ಐಎಎಸ್ ಅಧಿಕಾರಿ ಶಂಭು ದಯಾಳ್ ಮೀನಾ ಅಧ್ಯಕ್ಷತೆಯಲ್ಲಿ ಫೆಬ್ರುವರಿಯಲ್ಲಿಯೇ ತನಿಖಾ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿತ್ತು. ಆದರೆ, ತಮ್ಮ ತಂದೆಯ ಅನಾರೋಗ್ಯದ ಕಾರಣ ಹೇಳಿ ಅವರು ಹೊಣೆ ವಹಿಸಿಕೊಳ್ಳಲಿಲ್ಲ. ಹೀಗಾಗಿ, ನಿವೃತ್ತ ಐಎಎಸ್ ಅಧಿಕಾರಿ ನರಸಿಂಹರಾಜು ಅವರನ್ನು ನೇಮಿಸಿದ್ದೆವು. ಅವರೂ ಮೂರು ವಾರಗಳ ಬಳಿಕ ವೈಯಕ್ತಿಕ ಕಾರಣ ಹೇಳಿ ಹಿಂದೆ ಸರಿದರು. ಹೀಗಾಗಿ, ಹಾಲಿ ಅಧಿಕಾರಿ ಮಹೇಶ್ವರ ರಾವ್ ಅವರಿಗೆ ಹೊಣೆ ನೀಡಲಾಗಿದೆ’ ಎಂದರು.
‘ತನಿಖೆಗೆ ಸೂಚಿಸಿದ ಅವಧಿಯಲ್ಲಿ ಕಿಯೋನಿಕ್ಸ್‌ನಲ್ಲಿ ಕೆಲವರಿಗೆ ಸರ್ಕಾರದ ಆದೇಶ ಇಲ್ಲದೆಯೂ ಲಕ್ಷಾಂತರ ರೂಪಾಯಿಯ ಬಿಲ್ ಪಾವತಿಯಾಗಿದೆ. ಕೆಲವು ಪ್ರಕರಣಗಳಲ್ಲಿ ಸರ್ಕಾರದ ಆದೇಶ ಇದ್ದರೂ ಮೂರನೇ ಸಂಸ್ಥೆಯಿಂದ ಮೌಲ್ಯಮಾಪನ ನಡೆದಿಲ್ಲ. ಬಿಲ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ಮತ್ತು ತರಾತುರಿಯಲ್ಲಿ ಹಣ ಪಾವತಿಸಲಾಗಿದೆ. ಜಿಎಸ್‌ಟಿ ಕಟ್ಟಿರುವುದರಿಂದ ಬಿಲ್ ಮೊತ್ತ ಮಂಜೂರು ಮಾಡುವಂತೆ ಕೆಲವರು ಒತ್ತಡ ಹೇರಿದ್ದರು. ಆದರೆ, ಆ ಜಿಎಸ್‌ಟಿ ಕಟ್ಟಿದ ಪತ್ರಗಳೂ ನಕಲಿಗಳೆಂದು ಗೊತ್ತಾಗಿದೆ. ಈ ಅವ್ಯವಹಾರ ಗಳ ಕಾರಣಕ್ಕೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಿಯೋನಿಕ್ಸ್‌ಗೆ ನೀಡಿದ್ದ 4ಜಿ ವಿನಾಯಿತಿಯನ್ನೇ ರದ್ದು ಪಡಿಸಲಾಗಿದೆ’ ಎಂದೂ ತಿಳಿಸಿದರು.
l ಹೆಚ್ಚಿನ ದರದಲ್ಲಿ ಸಾಮಗ್ರಿಗಳನ್ನು ಖರೀದಿಸಿದ ಕಾರಣ ₹47.76 ಕೋಟಿ ಹೆಚ್ಚುವರಿ ಹೊರೆ
l ಮೂರನೇ ಸಂಸ್ಥೆಯ ಪರಿಶೀಲನೆ ನಡೆಸದೇ ₹76.50 ಕೋಟಿ ಪಾವತಿ
l ಫೋಟೊ ಸಾಕ್ಷ್ಯ ಮತ್ತು ತಪಾಸಣಾ ವರದಿ ಇಲ್ಲದೆ ₹71.50 ಕೋಟಿ ಪಾವತಿ
l ಮೂರನೇ ಸಂಸ್ಥೆಯಿಂದ ಪರಿಶೀಲನೆ ನಡೆಸಲಾಗಿದೆ ಎಂಬ ನಕಲಿ ವರದಿಯ ಮೇಲೆ ಸರಕುಗಳಿಗೆ ₹9.98 ಕೋಟಿ ಪಾವತಿ
l ನಕಲಿ ಬಿಲ್‌ಗಳು, ನಕಲಿ ರಸೀದಿಗಳ ಮೇಲೆ ₹10.56 ಕೋಟಿ ಪಾವತಿ
ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಹಲವು ಕಚೇರಿಗಳು ಹಾಗೂ ಆರೋಪಿಗಳು ಅವ್ಯವಹಾರ ನಡೆಸಿದ್ದಾರೆ ಎನ್ನಲಾದ ಸ್ಥಳಗಳಲ್ಲಿ ಬುಧವಾರವೂ ಶೋಧ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.
ನಗರದ ವಿ.ವಿ. ಟವರ್ ಬಳಿಯಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸಂಜೆ ಶೋಧ ನಡೆಸಿದ್ದ ತನಿಖಾಧಿಕಾರಿಗಳು, ಮೂರು ತಾಸು ಪರಿಶೀಲನೆ ನಡೆಸಿ ಕೆಲವು ದಾಖಲೆ ಪತ್ರಗಳನ್ನು ಜಪ್ತಿ ಮಾಡಿಕೊಂಡಿದ್ದರು. ಅಲ್ಲದೇ ದೇವನಹಳ್ಳಿಯಲ್ಲಿರುವ ಗ್ರಾಮಾಂತರ ಕಚೇರಿಯಲ್ಲೂ ತಪಾಸಣೆ ನಡೆಸಿ ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡಿದ್ದರು.
20 ಮಂದಿಗೆ ಹುಡುಕಾಟ: ಪ್ರಕರಣ ಸಂಬಂಧ ಮಹಾಲಕ್ಷ್ಮೀಪುರದ ಭೋವಿಪಾಳ್ಯದ ಕಚೇರಿ ಅಧೀಕ್ಷಕ ಸುಬ್ಬಪ್ಪ (2021–2022ರ ಅವಧಿ) ಎಂಬವರನ್ನು ಸಿಐಡಿ ಬಂಧಿಸಿದ್ದು, ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ.ನಾಗರಾಜಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಲೀಲಾವತಿ ಸೇರಿದಂತೆ 20 ಮಂದಿ ಮಧ್ಯವರ್ತಿಗಳಿಗೆ ಹುಡುಕಾಟ ಆರಂಭಿಸಿದೆ. ನಾಲ್ಕು ಜಿಲ್ಲೆಗಳಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬೇರೆ ಜಿಲ್ಲೆಗಳಲ್ಲೂ ತಪಾಸಣೆ ನಡೆಸಲಾಗುವುದು ಎಂದು ಸಿಐಡಿ ಮೂಲಗಳು ತಿಳಿಸಿವೆ.
ಉದ್ಯಮಶೀಲತಾ ಯೋಜನೆ ಹಾಗೂ ನೇರ ಸಾಲ ಯೋಜನೆಗಳ ಅಡಿ ಲಕ್ಷಾಂತರ ರೂಪಾಯಿ ಸಾಲ ಕೊಡಿಸುವುದಾಗಿ ಹೇಳಿ ಸಾರ್ವಜನಿಕರ ಆಧಾರ್ ಕಾರ್ಡ್ ಪಡೆದು ಪ್ರತ್ಯೇಕ ಖಾತೆ ತೆರೆದು ಅಕ್ರಮ ನಡೆಸಿರುವುದು ತನಿಖೆಯಿಂದ ಪತ್ತೆಯಾಗಿದೆ.
ಇದುವರೆಗೂ ಮುಡಾ ನಿವೇಶನ ಹಾಗೂ ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದಲ್ಲಿ ಸರ್ಕಾರವನ್ನು ವಿರೋಧ ಪಕ್ಷಗಳು ಇಕ್ಕಟ್ಟಿಗೆ ಸಿಲುಕಿಸಿವೆ.
‘ಬುಧವಾರ ಬೆಳಿಗ್ಗೆಯೇ ರಾಜಾಜಿನಗರದಲ್ಲಿರುವ ಉಪ ಕಚೇರಿಯಲ್ಲಿಯೂ ಅಧಿಕಾರಿಗಳು ಶೋಧ ನಡೆಸಿ ಇಡೀ ದಿನ ದಾಖಲೆಗಳ ಪರಿಶೀಲನೆ ನಡೆಸಿದರು. ಈ ವೇಳೆ ಕೆಲವು ಪೆನ್‌ಡ್ರೈವ್, ಕಡತಗಳು ಲಭಿಸಿದ್ದು, ತನಿಖೆಗೆ ತಿರುವು ಸಿಕ್ಕಿದೆ. ನಿಗಮದಲ್ಲಿ ಅಂದಾಜು ₹87 ಕೋಟಿ ಅವ್ಯವಹಾರ ನಡೆದಿದ್ದು, ಹಿಂದಿನ ಅಧಿಕಾರಿಗಳು ಸೇರಿದಂತೆ ಹಲವರು ಅಕ್ರಮ ನಡೆಸಿರುವುದಕ್ಕೆ ಹಲವು ಮಹತ್ವದ ಸಾಕ್ಷ್ಯಗಳು ಲಭಿಸಿವೆ. ಎಲ್ಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿ ಯೊಬ್ಬರು ಮಾಹಿತಿ ನೀಡಿದರು.
ಕಿಯೋನಿಕ್ಸ್‌ನಲ್ಲಿ ಭಾರಿ ಪ್ರಮಾಣದ ಅಕ್ರಮಗಳನ್ನು ಸಿಎಜಿ ವರದಿಯೇ ಬೊಟ್ಟು ಮಾಡಿದೆ. ಹಿಂದೆ ನೇಮಿಸಿದ್ದ ನಿವೃತ್ತ ಅಧಿಕಾರಿಗಳು ಹಿಂದೆ ಸರಿದ ಕಾರಣ ಅಕ್ರಮದ ತನಿಖೆ ವಿಳಂಬವಾಗಿದೆಪ್ರಿಯಾಂಕ್ ಖರ್ಗೆ, ಐಟಿ, ಬಿಟಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.