ಬೆಂಗಳೂರು: ನೀರಾವರಿ ತಜ್ಞ ಎಂ.ಕೆ.ವೆಂಕಟರಾಮ್ ಅವರು ‘ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ₹ 30 ಲಕ್ಷ ದೇಣಿಗೆ ನೀಡಿದ್ದಾರೆ.
ವೆಂಕಟರಾಮ್ ಅವರು ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾಗಿ 2018ರ ಜೂನ್ 23ರಿಂದ 2019ರ ಜುಲೈ 29ರವರೆಗೆ ಕಾರ್ಯ ನಿರ್ವಹಿಸಿದ್ದರು. ಅಂತರರಾಜ್ಯ ಜಲವಿವಾದ ಹಾಗೂ ನೀರಾವರಿ ಯೋಜನೆಗಳ ಕುರಿತು82ರ ಇಳಿವಯಸ್ಸಿನಲ್ಲೂ ಅವರು ಉಪಯುಕ್ತ ಸಲಹೆ ನೀಡುತ್ತಿದ್ದರು. ರಾಜ್ಯ ಸಚಿವ ಸ್ಥಾನವನ್ನು ಸರ್ಕಾರ ನೀಡಿದ್ದರೂ ಅವರು ಯಾವ ಸೌಲಭ್ಯವನ್ನೂ ಬಳಸಿಕೊಂಡಿಲ್ಲ.
ಈ ಅವಧಿಯಲ್ಲಿ ಪ್ರತಿ ತಿಂಗಳು ವೇತನ ಮತ್ತು ಭತ್ಯೆ ರೂಪದಲ್ಲಿ ಸಿಗುತ್ತಿದ್ದ ₹ 2,27,377 ಮೊತ್ತದಲ್ಲಿ ಸಾಂಕೇತಿಕವಾಗಿ ₹ 101 ಮಾತ್ರ ಪಡೆದು, ಉಳಿದ ಪೂರ್ತಿ ಹಣವನ್ನು ‘ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ನೀಡಿದ್ದಾರೆ.
ವೆಂಕಟರಾವ್ ಅವರನ್ನು ಮುಖ್ಯಮಂತ್ರಿ ಪರಿಹಾರ ನಿಧಿಕಚೇರಿ ವತಿಯಿಂದ ‘ಪ್ರಮಾಣಪತ್ರ’ ನೀಡಿ ಸೋಮವಾರ ಗೌರವಿಸಲಾಯಿತು.
‘ವೆಂಕಟರಾಮ್ ಅವರ ಕೊಡುಗೆಯಿಂದ ನೂರಾರು ರೋಗಿಗಳಿಗೆ ಧನ ಸಹಾಯ ಒದಗಿಸಲು ಸಹಾಯವಾಗಿದೆ. ಅವರ ನಿಸ್ವಾರ್ಥ ಸೇವೆ ಇತರರಿಗೆ ಮಾದರಿ. ಸರ್ಕಾರವು ಅವರ ಕೊಡುಗೆಗಳನ್ನು ಕೃತಜ್ಞತೆಗಳಿಂದ ಸ್ವೀಕರಿಸಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.