ADVERTISEMENT

ನೀರಾವರಿ ಯೋಜನೆ: ಕೇಂದ್ರಕ್ಕೆ ಅಧಿಕಾರಿಗಳೇ ಮಧ್ಯವರ್ತಿ –ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 30 ಮೇ 2023, 19:57 IST
Last Updated 30 ಮೇ 2023, 19:57 IST
 ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ‘ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುಮತಿ ತರುವುದು ಅಧಿಕಾರಿಗಳ ಜವಾಬ್ದಾರಿ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸೂಚಿಸಿದರು.

ವಿಕಾಸಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ’ಕೇಂದ್ರದಿಂದ ಯೋಜನೆಗಳನ್ನು ತರುವ ಗುರಿ ನಿಭಾಯಿಸಬೇಕು. ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು‘ ಎಂದರು.

‘ಯೋಜನೆ ತರುವುದೇ ನಿಮ್ಮ ಕೆಲಸ. ಅದಕ್ಕಾಗಿ ಕರ್ನಾಟಕದ ಸಂಸದರ ಜತೆ ಸಭೆ ಆಯೋಜಿಸಬೇಕು. ಪ್ರಧಾನಿ, ಕೇಂದ್ರದ ಜಲ ಸಂಪನ್ಮೂಲ ಸಚಿವರೂ ಸೇರಿದಂತೆ ಸಂಬಂಧಿಸಿದ ಎಲ್ಲರನ್ನೂ ಭೇಟಿ ಮಾಡಬೇಕು. ಕೇಂದ್ರ ಸಚಿವ ಶೇಖಾವತ್ ಉತ್ತಮ ವ್ಯಕ್ತಿ. ರಾಜ್ಯದ ಕೆಲಸಗಳಿಗೆ ಅವರ ಸಹಕಾರ ಪಡೆಯಬೇಕು‘ ಎಂದು ಅಧಿಕಾರಿಗಳಿಗೆ ಹೇಳಿದರು.

ADVERTISEMENT

ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ನೀರಾವರಿ ಯೋಜನೆಗಳಿಗೆ ಐದು ವರ್ಷದಲ್ಲಿ ₹ 2 ಲಕ್ಷ ಕೋಟಿ ವಿನಿಯೋಗಿಸಲು ಸರ್ಕಾರ ಬದ್ಧವಾಗಿದೆ. ಸರ್ಕಾರ, ಸಂಸ್ಥೆಗಳು, ಕೇಂದ್ರದ ಅನುದಾನದ ಮೂಲಕ ಯೋಜನೆಗೆ ಅಗತ್ಯ ಸಂಪನ್ಮೂಲ ಒಗ್ಗೂಡಿಸಬೇಕು.  ಮೇಕೆದಾಟು, ಮಹದಾಯಿ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಬೇಕು. ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು.  ಜಲವಿವಾದಗಳಿಗೆ ಸಮರ್ಪಕ ಪರಿಹಾರ ಕಂಡುಕೊಳ್ಳಬೇಕು. ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು. ಬಾಕಿ ಯೋಜನೆಗಳಿಗೆ ತ್ವರಿತಗತಿಯಲ್ಲಿ ಭೂಸ್ವಾಧೀನ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ನೆರೆಯ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಕ್ಕೆ ಎಷ್ಟು ಯೋಜನೆಗಳು ಬಂದಿವೆ, ರಾಜ್ಯಕ್ಕೆ ಎಷ್ಟು ಬಂದಿವೆ ಎಂದು ಹೋಲಿಸಿದರೆ ಎಷ್ಟು ಕೆಲಸವಾಗಿದೆ ಎಂಬುದು ಗೊತ್ತಾಗುತ್ತದೆ. ಈ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ರಾಜ್ಯದ ಯೋಜನೆಗಳ ಸ್ಥಿತಿಗತಿ ಕುರಿತು ಸಮಗ್ರ ವರದಿ ನೀಡಬೇಕು. ಕೆಆರ್‌ಎಸ್, ಮಂಚನ ಬೆಲೆ, ತಿಪ್ಪಗೊಂಡನಹಳ್ಳಿ, ಹೇಮಾವತಿ ಜಲಾಶಯ ಸೇರಿ ಈಗ ಸಿದ್ಧವಾಗಿರುವ ಉದ್ಯಾನ, ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಟೆಂಡರ್‌, ಬಿಲ್‌ ಮಾಡುವುದಷ್ಟೆ ಕೆಲಸವೇ?
ಅಧಿಕಾರಿಗಳು ಬರಿ ಟೆಂಡರ್, ಗುತ್ತಿಗೆ ಹಂಚಿಕೆ, ಎಲ್ಒಸಿ, ಬಿಲ್‌ ಮಾಡುವ ಕೆಲಸಕ್ಕೆ ಶ್ರಮ ವಿನಿಯೋಗ ಮಾಡುತ್ತಿದ್ದಾರೆ. ಯೋಜನೆಗಳ ಅನುಷ್ಠಾನಕ್ಕೆ ಆ ಶ್ರಮ ಬಳಕೆಯಾಗಬೇಕು ಎಂದು ಸಚಿವ ಶಿವಕುಮಾರ್ ಹೇಳಿದರು. ಭ್ರಷ್ಟಾಚಾರಕ್ಕೆ ಆಸ್ಪದ ನೀಡಬಾರದು. ನಿಷ್ಠೆ, ಪ್ರಾಮಾಣಿಕತೆಗೆ ಪ್ರೋತ್ಸಾಹ ನೀಡಬೇಕು. ಜಾತಿಯತೆ ತೊರೆಯಬೇಕು. ಮಾನವೀಯತೆ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.  ಅಧಿಕಾರಿಗಳು ತಮಗೆ ಸ್ಥಾನಕೊಟ್ಟವರಿಗೆ ಬದ್ಧವಾಗಿರದೆ, ಸರ್ಕಾರಕ್ಕೆ ನಿಷ್ಠರಾಗಿರಬೇಕು. ಇಲ್ಲದಿದ್ದರೆ ಅಂಥವರನ್ನು ಸಹಿಸುವುದಿಲ್ಲ. ಮೇಕೆದಾಟು ಯೋಜನೆಗೆ ಮೀಸಲಿಟ್ಟ₹ 1,000 ಕೋಟಿ ಅನುದಾನವನ್ನು ಭೂಸ್ವಾಧೀನದಂತಹ ಪೂರ್ವಸಿದ್ಧತಾ ಕೆಲಸಗಳಿಗೆ ಬಳಸಬಹುದಿತ್ತು. ಆ ಕೆಲಸ ಮಾಡಿಲ್ಲ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.