ಮೈಸೂರು: ‘ಪಠ್ಯಪುಸ್ತಕದಿಂದ ನನ್ನ ಕಥನದ ಭಾಗವನ್ನು ಕೈಬಿಡಬೇಕೆಂಬ ನಿಲುವಿಗೆ ಬದ್ಧನಾಗಿದ್ದೇನೆ. ಈ ವಿಚಾರದಲ್ಲಿ ಯಾರೂ ನನ್ನ ದಾರಿ ತಪ್ಪಿಸಿಲ್ಲ’ ಎಂದು ಲೇಖಕ ದೇವನೂರ ಮಹಾದೇವ ಸ್ಪಷ್ಟಪಡಿಸಿದರು.
‘ಕೆಲವರು ದೇವನೂರ ಅವರ ದಾರಿ ತಪ್ಪಿಸಿರುವ ಸಾಧ್ಯತೆಯಿದೆ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿರುವುದಕ್ಕೆ ಬುಧವಾರ ಇಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ‘ಸಂಘ ಪರಿವಾರದವರು ಅವರ ದಾರಿ ತಪ್ಪಿಸಿದ್ದಾರೆಯೇ ಎಂದು ನಾವು ಪ್ರಶ್ನಿಸಬೇಕಾಗುತ್ತದೆ’ ಎಂದು ತಿರುಗೇಟು ನೀಡಿದರು.
‘ಪಠ್ಯಪುಸ್ತಕ ಮುದ್ರಣಗೊಂಡು ಈಗಾಗಲೇ ಮಕ್ಕಳ ಕೈಸೇರಿದ್ದರೆ, ನನ್ನ ಕಥನದ ಪಾಠ ಮಾಡಬೇಡಿ ಎಂದು ಶಿಕ್ಷಕರಿಗೆ ಸೂಚಿಸಲಿ. ಸಚಿವರು ನನ್ನ ಜತೆ ಮಾತನಾಡಿ ಮನವೊಲಿಸುವುದಾದರೆ ತುಂಬಾ ಸಂತೋಷ’ ಎಂದರು.
‘ಅಧಿಕಾರ ನಡೆಸುತ್ತಿರುವವರು ಕುರುಡಾಗಿದ್ದಾರೆ. ಕುರುಡ ಎತ್ತ ಬೇಕಾದರೂ ಡಿಕ್ಕಿ ಹೊಡೆಯಬಹುದು. ಇವತ್ತು ಅಂತಹ ಕೆಲಸ ಆಗುತ್ತಿದೆ. ಅವರು ನಮ್ಮನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತಿದ್ದಾರೆ. ಇರಲಿ, ಅವರು ಮಾಡುವುದನ್ನು ಮಾಡಲಿ. ನಾವು ಅದಕ್ಕೆ ಪರ್ಯಾಯವಾಗಿ ಮಕ್ಕಳಿಗೆ ಸಂವಿಧಾನದ ಪಾಠ ಕಲಿಸಿಕೊಡುತ್ತೇವೆ’ ಎಂದು ಹೇಳಿದರು.
‘ಪಠ್ಯ ಪುಸ್ತಕ ಪರಿಷ್ಕರಣೆ ಮೂಲಕ ಅವರು ಮಾಡಿರುವ ತಪ್ಪುಗಳನ್ನು ಸರಿಪಡಿಸುತ್ತೇವೆ. 5ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳಿಗೆ ತಜ್ಞರ ನೆರವಿನಿಂದ ಆನ್‌ಲೈನ್ ಮೂಲಕ ಸಂವಿಧಾನದ ಪಾಠ ಕಲಿಸಿಕೊಡುತ್ತೇವೆ. ಮಕ್ಕಳು ಪ್ರಶ್ನಿಸುವ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮೂಢನಂಬಿಕೆಗಳಿಗೆ ಬಲಿಯಾಗಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.