ADVERTISEMENT

ಹತ್ತೇ ತಿಂಗಳಿಗೆ ಶಕ್ತಿ ನಿಸ್ತೇಜವಾಯಿತೇ?– ಎಚ್‌ಡಿಕೆ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 15:23 IST
Last Updated 7 ಏಪ್ರಿಲ್ 2024, 15:23 IST
ಎಚ್‌ಡಿಕೆ
ಎಚ್‌ಡಿಕೆ   

ಬೆಂಗಳೂರು: ‌‘ಅಧಿಕಾರ ಇರುವುದು ನಿಮ್ಮ ಕೈಯಲ್ಲಿ. ಜನ ಪೆನ್ನು-ಪೇಪರ್ ಕೊಟ್ಟಿರುವುದೂ ನಿಮಗೇ. ಕೆಲಸ ಮಾಡಿ ಎಂದರೆ ಹಳೆಯದನ್ನು ಏಕೆ ಕೆದಕುತ್ತಿದ್ದೀರಿ. ನಿಮ್ಮ ಶಕ್ತಿ ಕೇವಲ ಹತ್ತೇ ತಿಂಗಳಿಗೆ ನಿಸ್ತೇಜವಾಯಿತೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

‘ಎಕ್ಸ್’ ಜಾಲತಾಣದಲ್ಲಿ ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಅಧಿಕಾರ ಇದ್ದಾಗಲೇ ಕುಮಾರಸ್ವಾಮಿ ಅವರು ಮೇಕೆದಾಟು ಮಾಡಲಿಲ್ಲ ಎಂದು ಹೇಳಿದ್ದೀರಿ. ಕುಮಾರಸ್ವಾಮಿ ಏನೂ ಮಾಡಿಯೇ ಇಲ್ಲವೆಂದು ಕಥೆ ಕಟ್ಟಿದ್ದೀರಿ. ಎಷ್ಟಾದರೂ ನೀವು ಸುಳ್ಳು ಫ್ಯಾಕ್ಟರಿಯ ಮೇಟಿ. ಮೇಕೆದಾಟುಗಾಗಿ ನಾನು ಏನೆಲ್ಲಾ ಮಾಡಿದೆ ಎನ್ನುವುದು ನಿಮಗೆ ಹೇಗೆ ಗೊತ್ತಾದೀತು’ ಎಂದು ಕೆಣಕಿದ್ದಾರೆ.

‘ಮೇಕೆದಾಟು ನಿರ್ಮಾಣಕ್ಕೆ 2018-19ರಲ್ಲೇ ಕೇಂದ್ರಕ್ಕೆ ಡಿಪಿಆರ್ ಸಲ್ಲಿಸಿದ್ದು ಅಂದಿನ ನನ್ನ ಸರ್ಕಾರ. ಆ ಸರ್ಕಾರದಲ್ಲಿ ನೀವೂ ಸಚಿವರಾಗಿದ್ದಿರಿ. 2006-2007ರಲ್ಲೇ ಮಹದಾಯಿ ಯೋಜನೆಗೆ ಸಂಪುಟದಲ್ಲಿಯೇ ಒಪ್ಪಿಗೆ ನೀಡಿ, ₹ 100 ಕೋಟಿ ಮಂಜೂರು ಮಾಡಿ ಆಗಲೇ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿತ್ತು. ಆ ನಂತರ ಐದು ವರ್ಷ ನಿಮ್ಮದೇ ಕಾಂಗ್ರೆಸ್‌ ಸರ್ಕಾರ ಇತ್ತಲ್ಲವೇ. ಆಗ ಯಾಕೆ ತಾವು ನುಡಿದಂತೆ ನಡೆಯಲಿಲ್ಲ’ ಎಂದೂ ಕೇಳಿದ್ದಾರೆ.

ADVERTISEMENT

‘ಮೇಕೆದಾಟು, ಮಹದಾಯಿ ಸೇರಿ ನೀರಾವರಿ ಯೋಜನೆಗಳಿಗಾಗಿ ನಾನು ಮುಖ್ಯಮಂತ್ರಿಯಾಗಿ ಆಯಾ ಇಲಾಖೆಯ ಕೇಂದ್ರ ಸಚಿವರನ್ನು ಎಷ್ಟು ಸಲ ಭೇಟಿಯಾಗಿದ್ದೆ ಎನ್ನುವ ಮಾಹಿತಿ ನಿಮಗಿಲ್ಲ. ನಿತಿನ್ ಗಡ್ಕರಿ ಅವರೊಬ್ಬರನ್ನೇ 10 ಬಾರಿ ಭೇಟಿಯಾಗಿದ್ದೆ. 90ರ ಇಳಿವಯಸ್ಸಿನಲ್ಲಿಯೂ ದೇವೇಗೌಡರು ಸಂಸತ್ತಿನ ಒಳಗೆ, ಹೊರಗೆ ರಾಜ್ಯಕ್ಕಾಗಿ ಹೋರಾಡುತ್ತಿದ್ದಾರೆ. ಮೇಕೆದಾಟು ಬಗ್ಗೆ ಸಂಸತ್ ಅಧಿವೇಶನದಲ್ಲಿ ಅವರು ದನಿ ಎತ್ತಿದರೆ, ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮೌನವಾಗಿದ್ದರು’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.