ಬೆಂಗಳೂರು: ʼನಾನು ಕೇಸರಿ ಶಾಲು ಧರಿಸುವುದು ಮಹಾನ್ ಅಪರಾಧವೆ? ಕಾಂಗ್ರೆಸ್‌ನವರಿಗೆ ಕೇಸರಿ ಬಣ್ಣದ ಕುರಿತು ಸಂಕುಚಿತ ಭಾವನೆ ಏಕೆʼ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼಕೇಸರಿ ಶಾಲು ಹಾಕಿದ ತಕ್ಷಣ ನಾನು ಜೆಡಿಎಸ್ ಪಕ್ಷವನ್ನು ಅವನತಿಗೆ ತಳ್ಳಿದ್ದೇನೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿದ್ದಾರೆ. ಪಕ್ಷ ಉಳಿಸಿಕೊಳ್ಳುವುದನ್ನು ನಾನು ಇವರಿಂದ ಕಲಿಯಬೇಕಿಲ್ಲ. ಜನರು ಕೊಟ್ಟಿರುವ ಪ್ರೀತಿ ನನ್ನ ಜತೆಗಿದೆʼ ಎಂದರು.
ʼನಮ್ಮ ರಾಷ್ಟ್ರ ಧ್ವಜದಲ್ಲಿ ಯಾವ ಬಣ್ಣಗಳಿವೆ ಎಂಬುದು ಕಾಂಗ್ರೆಸ್‌ನವರಿಗೆ ತಿಳಿದಿಲ್ಲವೆ? ರಾಷ್ಟ್ರ ಧ್ವಜದಿಂದ ಕೇಸರಿ ಬಣ್ಣ ತೆಗೆದರೆ ಏನು ಅರ್ಥ ಉಳಿಯುತ್ತದೆ. ಕೇಸರಿ ಬಣ್ಣದ ಮೇಲೆ ಅಸಹನೆ, ಸಂಕುಚಿತ ಭಾವನೆ ಏಕೆ? ನಾನು ಕೇಸರಿ ಶಾಲು ಹಾಕಿಕೊಂಡಿದ್ದರ ಬಗ್ಗೆ ಮಾತನಾಡುತ್ತಿದ್ದಾರೆ. ದಲಿತ ಸಮುದಾಯದ ಬಂಧುಗಳು ಸಭೆಗೆ ಕರೆದಾಗ ಅಲ್ಲಿಗೆ ಹೋಗಿ ಜೈ ಭೀಮ್ ಕಾರ್ಯಕರ್ತರು ಧರಿಸುವ ನೀಲಿ ಬಣ್ಣದ ಶಾಲನ್ನೂ ಹಾಕಿದ್ದೇನೆ. ಇದು ಇವರ ಕಣ್ಣಿಗೆ ಕಾಣಲಿಲ್ಲವೆʼ ಎಂದು ಕೇಳಿದರು.
ʼಮಂಡ್ಯ ಜಿಲ್ಲೆಯನ್ನು ಹಾಳು ಮಾಡಲು ಕುಮಾರಸ್ವಾಮಿ ಬಂದಿದ್ದಾರೆ ಎಂದು ನಮ್ಮ ಹಳೆಯ ಗೆಳೆಯರು ಹೇಳಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜತೆಯಾಗಿ ಪ್ರತಿಭಟನೆ ನಡೆಸಲಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಕಟಿಸಿದ್ದರು. ಮಂಡ್ಯ ಜಿಲ್ಲೆಯ ನನ್ನ ಅಭಿಮಾನಿಗಳು, ಬೆಂಬಲಿಗರೂ ಒತ್ತಾಯ ಮಾಡಿದ್ದರು. ಆ ಕಾರಣದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆʼ ಎಂದರು.
ʼಮಂಡ್ಯ ಜಿಲ್ಲೆಯ ಕೆರಗೋಡು ಘಟನೆಗೂ ನನಗೂ ಏನು ಸಂಬಂಧವಿದೆ? ಬಿಜೆಪಿಯವರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿದ್ದೇನೆ. ಅದೂ ಕೊನೆಯ ಹಂತದಲ್ಲಿ ಪಾಲ್ಗೊಂಡಿದ್ದೇನೆʼ ಎಂದು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಫ್ಲೆಕ್ಸ್ ಕಿತ್ತುಹಾಕಲು, ಬೆಂಕಿ ಹಚ್ಚಲು ತಾವು ಕರೆ ನೀಡಿಲ್ಲ. ತಮ್ಮ ಭಾಷಣದ ಸಂಪೂರ್ಣ ವಿವರ ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿದೆ. ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದಷ್ಟೇ ತಮ್ಮ ಆಗ್ರಹವಾಗಿತ್ತು ಎಂದರು.
ಕೆರಗೋಡು ಗ್ರಾಮದಲ್ಲಿ ರಾಜ್ಯ ಸರ್ಕಾರದಿಂದ ಬಾವುಟ ಹಾರಿಸಿರಲಿಲ್ಲ. ಅಲ್ಲಿನ ಗ್ರಾಮಸ್ಥರು ಬಾವುಟ ಹಾರಿಸಿದ್ದರು. ಸ್ಥಳೀಯ ಕಾಂಗ್ರೆಸ್ ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಗೊಂದಲ, ಗಲಭೆ ಸೃಷ್ಟಿಸಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಕೆರಗೋಡು ಬಸ್ ನಿಲ್ದಾಣದಲ್ಲಿ ಧ್ವಜ ಸ್ತಂಭ ಸ್ಥಾಪನೆಗೆ ಅನುಮತಿ ಕೋರಿದ್ದ ಗೌರಿಶಂಕರ ಸೇವಾ ಟ್ರಸ್ಟ್, ಅದರಲ್ಲಿ ಯಾವ ಧ್ವಜ ಎಂಬುದನ್ನು ಉಲ್ಲೇಖಿಸಿರಲಿಲ್ಲ. ಧ್ವಜ ತೆರವು ಮಾಡುವುದಕ್ಕಾಗಿ ರಾಜ್ಯ ಸರ್ಕಾರವು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬಳಕೆ ಮಾಡಿಕೊಂಡಿದೆ ಎಂದು ದೂರಿದರು.
‘ಗ್ಯಾರಂಟಿ ಸಮಾವೇಶದಲ್ಲಿ ರಾಜಕೀಯ ಮಾಡಿಲ್ಲವೆ?’
‘ಜನರ ಹಣದಿಂದ ಅಯೋಧ್ಯೆಯಲ್ಲಿ ಕಟ್ಟಿದ ರಾಮಮಂದಿರ ಉದ್ಘಾಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರು ಟೀಕಿಸಿದ್ದಾರೆ. ಜನರ ತೆರಿಗೆ ಹಣದಿಂದ ಅನುಷ್ಠಾನಕ್ಕೆ ತಂದಿರುವ ‘ಗ್ಯಾರಂಟಿ’ ಯೋಜನೆಗಳ ಉದ್ಘಾಟನಾ ಸಮಾವೇಶದಲ್ಲಿ ಇವರು ರಾಜಕೀಯ ಮಾಡಿಲ್ಲವೆ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಗ್ಯಾರಂಟಿ ಜಾರಿ ಸಮಾವೇಶದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಲಾಗಿತ್ತು. ಅವರಿಗೂ ರಾಜ್ಯಕ್ಕೂ ಏನು ಸಂಬಂಧ ಎಂದು ಕೇಳಿದರು.
‘ಮೀಸಲಾತಿ ಕುರಿತು ಚರ್ಚೆಗೆ ಬರಲಿ’
‘ಶೋಷಿತರ ಜಾಗೃತಿ ಸಮಾವೇಶ ನಡೆಸುವ ಸಿದ್ದರಾಮಯ್ಯ ಅವರು ಮೀಸಲಾತಿ ಕುರಿತು ಚರ್ಚೆಗೆ ಬರಲಿ. ಹಿಂದುಳಿದ ವರ್ಗಗಳ ಪ್ರವರ್ಗ 2–ಎ ಅಡಿಯಲ್ಲಿ 108 ಜಾತಿಗಳಿವೆ. ಆದರೆ, ಅಲ್ಲಿನ ಮೀಸಲಾತಿಯ ಸಿಂಹಪಾಲನ್ನು ಯಾರು ಪಡೆದಿದ್ದಾರೆ ಎಂಬುದನ್ನು ಹೇಳಲಿ’ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
‘ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಕಾಂತರಾಜ ಆಯೋಗದ ವರದಿ ಪಡೆಯಲಿಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ವರ್ಷದಿಂದ ಅಧಿಕಾರದಲ್ಲಿರುವ ಇವರು ಏಕೆ ಸ್ವೀಕರಿಸಲಿಲ್ಲ. ತಾಕತ್ತಿದ್ದರೆ ವರದಿ ಸ್ವೀಕರಿಸಿ, ಚರ್ಚೆಗೆ ಬರಲಿ’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.