ADVERTISEMENT

ಇಸ್ರೊ ರಾಕೆಟ್‌ಗೆ 3 ಡಿ ಮುದ್ರಣದ ಎಂಜಿನ್‌

​ಪ್ರಜಾವಾಣಿ ವಾರ್ತೆ
Published 10 ಮೇ 2024, 14:14 IST
Last Updated 10 ಮೇ 2024, 14:14 IST
ತ್ರಿ ಡಿ ಮುದ್ರಿತ ಎಂಜಿನ್‌
ತ್ರಿ ಡಿ ಮುದ್ರಿತ ಎಂಜಿನ್‌   

ಬೆಂಗಳೂರು: ಇಸ್ರೊ ಇದೇ ಮೊದಲ ಬಾರಿಗೆ ‘ತ್ರಿ–ಡಿ’ ಮುದ್ರಣದ ಮೂಲಕ ಮರು ವಿನ್ಯಾಸಗೊಳಿಸಿ ತಯಾರಿಸಿರುವ ಪಿಎಸ್‌ 4 ಎಂಜಿನ್‌ನ ಸುದೀರ್ಘಾವಧಿಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಮರುವಿನ್ಯಾಸಗೊಂಡ ತ್ರಿ–ಡಿ ಮುದ್ರಣದ ಈ ಹೊಸ ಎಂಜಿನ್‌ ಬಿಡಿಭಾಗಗಳಿಂದ ಜೋಡಿಸಿದ ಎಂಜಿನ್‌ ಆಗಿರದೇ, ಇಡಿಯಾಗಿ ತಯಾರಿಸಲಾಗಿದೆ (ಸಿಂಗಲ್‌ ಪೀಸ್). ಇದರಿಂದ ಶೇ 97ರಷ್ಟು ಕಚ್ಛಾ ವಸ್ತುಗಳು ಉಳಿತಾಯವಾಗಿದ್ದು, ಶೇ 60ರಷ್ಟು ತಯಾರಿಕಾ ಸಮಯವೂ ಉಳಿತಾಯವಾಗುತ್ತದೆ ಎಂದು ಇಸ್ರೊ ಪ್ರಕಟಣೆಯಲ್ಲಿ ತಿಳಿಸಿದೆ.

ಇದು ದ್ರವ ಇಂಧನದ ರಾಕೆಟ್‌ನ ಎಂಜಿನ್‌ ಆಗಿದ್ದು, ಇದರ ಉಷ್ಣತಾ ಪರೀಕ್ಷೆ ಯಶಸ್ವಿಯಾಗಿರುವುದು ಇಸ್ರೊ ರಾಕೆಟ್‌ ತಂತ್ರಜ್ಞಾನದಲ್ಲಿ ಮೈಲಿಗಲ್ಲಾಗಿದೆ. ತ್ರಿಡಿ ಮುದ್ರಿತ ಎಂಜಿನ್‌ನ ಪರೀಕ್ಷೆಯ ಅವಧಿ 665 ಸೆಕೆಂಡುಗಳಾಗಿದ್ದವು ಎಂದು ಇಸ್ರೊ ಹೇಳಿದೆ.

ADVERTISEMENT

ಪಿಎಸ್‌ಎಲ್‌ವಿಯ ಮೇಲ್ಭಾಗದ ಹಂತದಲ್ಲಿ ಪಿಎಸ್‌4 ಅನ್ನು ಬಳಸಲಾಗುತ್ತದೆ. ಈವರೆಗೆ ಈ ಎಂಜಿನ್‌ ಅನ್ನು ಮೆಷಿನಿಂಗ್ ಮತ್ತು ವೆಲ್ಡಿಂಗ್‌ ವಿಧಾನದಲ್ಲಿ ತಯಾರಿಸಲಾಗುತ್ತಿತ್ತು. 7.33 ಕೆಎನ್‌ ಅಥವಾ ನಾಟ್‌ ನಿರ್ವಾತ ಸ್ಥಿತಿಯಲ್ಲಿ ಒತ್ತಡ ಹಾಕಲು ನಾಲ್ಕನೇ ಹಂತದಲ್ಲಿ ಪಿಎಸ್‌4 ಬಳಕೆ ಮಾಡಲಾಗುತ್ತದೆ. ಅಲ್ಲದೆ, ಪಿಎಸ್‌ಎಲ್‌ವಿಯ ಮೊದಲ ಹಂತದಲ್ಲಿ ರಿಯಾಕ್ಷನ್‌ ಕಂಟ್ರೋಲ್‌ ಸಿಸ್ಟಮ್‌ನಲ್ಲೂ ಇದೇ ಎಂಜಿನ್ ಬಳಸಲಾಗುತ್ತದೆ ಎಂದು ಇಸ್ರೊ ತಿಳಿಸಿದೆ.

ತ್ರಿಡಿ ಪ್ರಿಟಿಂಗ್ ಎಂಜಿನ್‌ನ ಪರೀಕ್ಷೆ

ಲೇಸರ್‌ ಪೌಡರ್‌ ಫ್ಯೂಷನ್‌ ಟೆಕ್ನಿಕ್‌ ಬಳಸಿ 14 ವಿವಿಧ ಭಾಗಗಳನ್ನು ಒಂದು ಇಡಿಯಾದ ಎಂಜಿನ್‌ ಆಗಿ ರೂಪಿಸಲಾಗಿದೆ (ಸಿಂಗಲ್‌ ಪೀಸ್‌). 19 ವೆಲ್ಡಿಂಗ್‌ ಜೋಡಣೆ ಮಾಡುವುದನ್ನು ತಪ್ಪಿಸಲಾಗಿದೆ. ಇದಕ್ಕೆ 13.7 ಕೆ.ಕೆ ಲೋಹದ ಪುಡಿಯನ್ನು ಬಳಸಲಾಗಿದೆ. ಸಾಂಪ್ರದಾಯಿಕ ವಿಧಾನದಲ್ಲಿ ಎಂಜಿನ್ ತಯಾರಿಕೆಗೆ 565 ಕೆ.ಜಿ.ಯಷ್ಟು ಲೋಹವನ್ನು ಫೋರ್ಜಿಂಗ್‌ ಮತ್ತು ಶೀಟ್‌ಗಳಿಗೆ ಬಳಸಲಾಗುತ್ತಿತ್ತು. ತ್ರಿ–ಡಿ ಎಂಜಿನ್‌ ಅನ್ನು ಇಂಡಿಯನ್‌ ಇಂಡಸ್ಟ್ರಿ (ಮೆಸರ್ಸ್‌ ವಿಪ್ರೊ 3ಡಿ) ತಯಾರಿಸಿದೆ. ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೊ ಪ್ರೊಪಲ್ಷನ್‌ ಕಾಂಪ್ಲೆಕ್ಸ್‌ನಲ್ಲಿ ಎಂಜಿನ್ ಪರೀಕ್ಷೆ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.