ADVERTISEMENT

ಪ್ಯಾರಾಚೂಟ್‌ಗಳ ಪರೀಕ್ಷೆ ಯಶಸ್ವಿ: ಮಾನವಸಹಿತ ಗಗನಯಾನಕ್ಕೆ ಇಸ್ರೊ ಸಿದ್ಧತೆ

ಪಿಟಿಐ
Published 7 ಮಾರ್ಚ್ 2023, 20:48 IST
Last Updated 7 ಮಾರ್ಚ್ 2023, 20:48 IST
ಗಗನಯಾನದಲ್ಲಿ ಬಳಸುವ ಪ್ಯಾರಾಚೂಟ್‌ಗಳನ್ನು ಇಸ್ರೊ ಪರೀಕ್ಷೆಗೆ ಒಳಪಡಿಸಿತು–ಇಸ್ರೊ ಚಿತ್ರ
ಗಗನಯಾನದಲ್ಲಿ ಬಳಸುವ ಪ್ಯಾರಾಚೂಟ್‌ಗಳನ್ನು ಇಸ್ರೊ ಪರೀಕ್ಷೆಗೆ ಒಳಪಡಿಸಿತು–ಇಸ್ರೊ ಚಿತ್ರ   

ಬೆಂಗಳೂರು: ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ), ಗಗನಯಾನಿಗಳನ್ನು ಹೊತ್ತ ಕೋಶವನ್ನು (ಮಾಡ್ಯೂಲ್) ಇಳಿಸುವಲ್ಲಿ ಬಳಕೆಯಾಗುವ ಪ್ಯಾರಾಚೂಟ್‌ಗಳನ್ನು ಈಚೆಗೆ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.

ಗಗನಯಾನ ಕಾರ್ಯಾಚರಣೆಗೆಂದೇ ಇಸ್ರೊ, ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಮತ್ತು ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್‌ ಜಂಟಿಯಾಗಿ ಈ ಪ್ಯಾರಾಚೂಟ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಗಗನಯಾನಿಗಳನ್ನು ಹೊತ್ತ ಕೋಶವು ಭೂಮಿಗೆ ಇಳಿಯುವಾಗ ಒಟ್ಟು 10 ಪ್ಯಾರಾಚೂಟ್‌ಗಳು ಹಲವು ಹಂತಗಳಲ್ಲಿ ಕೆಲಸ ಮಾಡುತ್ತವೆ. ಮೊದಲ ಎರಡು ಹಂತದಲ್ಲಿ ಕೆಲಸ ಮಾಡುವ ಒಟ್ಟು ನಾಲ್ಕು ಪ್ಯಾರಾಚೂಟ್‌ಗಳ ವ್ಯವಸ್ಥೆಯನ್ನು ಮಾರ್ಚ್‌ 1 ಮತ್ತು ಮಾರ್ಚ್‌ 3ರಂದು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಇಸ್ರೊ ಮಾಹಿತಿ ನೀಡಿದೆ.

ಈ ಪ್ಯಾರಾಚೂಟ್‌ ತಂತ್ರಜ್ಞಾನವನ್ನು ಚಂಡೀಗಡದ ಟರ್ಮಿನಲ್ ಬ್ಯಾಲಿಸ್ಟಿಕ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ (ಟಿಬಿಆರ್‌ಎಲ್) ಪರೀಕ್ಷಿ ಸಲಾಗಿದೆ. ಗಗನಯಾನಿಗಳನ್ನು ಹೊತ್ತ ಕೋಶವು ಬಾಹ್ಯಾಕಾಶದಿಂದ ಭೂಮಿಯ ವಾತಾವರಣವನ್ನು ಪ್ರವೇಶಿಸಿ, ನೆಲಕ್ಕೆ ಇಳಿಯುವಾಗ ಇರಬಹುದಾದ ಭೌತಿಕ ಸ್ಥಿತಿಯನ್ನು, ತೆರೆದ ಪ್ರಯೋಗಾಲಯದಲ್ಲಿ ನಿರ್ಮಿಸಿ ಈ ಪರೀಕ್ಷೆ ನಡೆಸಲಾಗಿದೆ. ಈ ಪ್ರಯೋಗಾಲಯದಲ್ಲಿ ಇರುವ ಹಳಿಗಳ ಮೇಲೆ ರಾಕೆಟ್‌ ಚಾಲಿತ ಯಂತ್ರವನ್ನು ಚಲಾಯಿಸಲಾಗಿದೆ. ಯಂತ್ರದ ಹಿಂಭಾಗದಲ್ಲಿ ಈ ಪ್ಯಾರಾಚೂಟ್‌ಗಳನ್ನು ಅಳವಡಿಸಲಾಗಿತ್ತು. ‘ಪ್ಯಾರಾಚೂಟ್‌ಗಳು ಸರಿಯಾಗಿ ಕೆಲಸ ಮಾಡಿವೆ’ ಎಂದು ಇಸ್ರೊ ಹೇಳಿದೆ.

ADVERTISEMENT

ಮಾನವಸಹಿತ ಬಾಹ್ಯಾಕಾಶ ಯಾನವನ್ನು ಸಾಧ್ಯವಾಗಿಸುವುದು ಗಗನಯಾನ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಮೂವರು ಗಗನಯಾನಿಗಳನ್ನು 400 ಕಿಲೋಮೀಟರ್ ಎತ್ತರದ ಕಕ್ಷೆಗೆ ಸೇರಿಸಲಾಗುತ್ತದೆ. ಮೂರು ದಿನಗಳ ಬಳಿಕ ಅವರು ಭೂಮಿಗೆ ವಾಪಸಾಗಲಿದ್ದಾರೆ. ದೇಶದ ಮೊದಲ ಮಾನವಸಹಿತ ಗಗನಯಾನವು 2024ರ ಕೊನೆಯಲ್ಲಿ ಕೈಗೂಡಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಕಳೆದ ಡಿಸೆಂಬರ್‌ನಲ್ಲಿ ಸಂಸತ್ತಿಗೆ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.