ಬೆಂಗಳೂರು: ಭಾರತದ ‘ಮಂಗಳಯಾನ’ದ ಕಕ್ಷೆಗಾಮಿ (ಆರ್ಬಿಟರ್ ಕ್ರಾಫ್ಟ್) ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ಆರಂಭಿಸಿ ಎಂಟು ವರ್ಷ ಪೂರ್ಣಗೊಂಡಿದೆ. ಆರು ತಿಂಗಳ ಅವಧಿಗೆ ಕಾರ್ಯ ನಿರ್ವಹಿಸಲು ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ತನ್ನ ಅವಧಿ ಮೀರಿ ಈ ಕಕ್ಷೆಗಾಮಿ ಕಾರ್ಯನಿರ್ವಹಿಸುತ್ತಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಚೊಚ್ಚಲ ಅಂತರ್ ಗ್ರಹ ಯಾನ ಇದಾಗಿದ್ದು, ಮೊದಲ ಪ್ರಯತ್ನದಲ್ಲೇ ಅದ್ಭುತ ಸಾಧನೆ ತೋರಿಸಿದೆ.2013 ರ ನವೆಂಬರ್ 3 ರಂದು ಬಾಹ್ಯಾಕಾಶ ನೌಕೆಯನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗಿತ್ತು. 2014 ರ ಸೆಪ್ಟೆಂಬರ್ 24 ರಂದು ಮಂಗಳ ಗ್ರಹದ ಕಕ್ಷೆಗೆ ಕಕ್ಷೆಗಾಮಿಯನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಸೇರಿಸಲಾಗಿತ್ತು.
ಕಕ್ಷೆಗಾಮಿ ಎಂಟು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಇಸ್ರೊ ಕೇಂದ್ರ ಕಚೇರಿಯಲ್ಲಿ ಮಂಗಳವಾರ ರಾಷ್ಟ್ರೀಯ ಮಟ್ಟದ ಸಭೆಯೊಂದನ್ನು ಹಮ್ಮಿಕೊಳ್ಳಲಾಗಿದೆ. ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಅಲ್ಲದೇ, ಬಾಹ್ಯಾಕಾಶ ಆಯೋಗದ ಸದಸ್ಯ ಕೆ.ರಾಧಾಕೃಷ್ಣನ್ ಮತ್ತು ಎ.ಎಸ್.ಕಿರಣ್ ಕುಮಾರ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿಶೇಷವಾಗಿ ‘ಮಂಗಳ ಕಕ್ಷೆಗಾಮಿಯ ಒಂದು ನೋಟ’, ‘ವೈಜ್ಞಾನಿಕ ಸಾಧನೆಗಳು’ ಮತ್ತು ‘ನಮ್ಮ ಸೌರ ವ್ಯವಸ್ಥೆಯೊಳಗಿನ ಅನ್ವೇಷಣೆಯಲ್ಲಿ ಭವಿಷ್ಯದ ದಿಕ್ಸೂಚಿ’ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಮಂಗಳ ಗ್ರಹದಲ್ಲಿನ ವಾತಾವರಣ, ಅದರ ಮೇಲ್ಮೈ ಲಕ್ಷಣ, ಅಲ್ಲಿ ಇರಬಹುದಾದ ಸೂಕ್ಷ್ಮ ಜೀವ ಕಣಗಳು, ಜೀವಿಗಳ ಹುಟ್ಟಿಗೆ ಕಾರಣವಾಗುವ ಮಿಥೇನ್ ಅನಿಲ ಇದೆಯೇ ಎಂಬುದನ್ನು ಪತ್ತೆ ಹಚ್ಚುವುದು ಮಾರ್ಸ್ ಆರ್ಬಿಟ್ ಮಿಷನ್ ಯೋಜನೆಯ ಮೂಲ ಉದ್ದೇಶವಾಗಿತ್ತು. ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದೆ. ಇಸ್ರೊ ಕೈಗೊಂಡಿದ್ದ ಅಂತರ ಗ್ರಹ ಯಾನ ಯೋಜನೆಗಳಲ್ಲಿ ಮಂಗಳಯಾನ ಅತ್ಯಂತ ಕಡಿಮೆ ವೆಚ್ಚದ್ದು. ಇದಕ್ಕೆ ₹450 ಕೋಟಿ ವೆಚ್ಚವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.