ADVERTISEMENT

ಆಕಾಶದಲ್ಲಿ ದೃಷ್ಟಿ ನೆಟ್ಟಿದ್ದ ಕನ್ನಡದ ತಾರೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 20:15 IST
Last Updated 13 ಏಪ್ರಿಲ್ 2019, 20:15 IST
ಎಸ್‌.ಕೆ.ಶಿವಕುಮಾರ್‌
ಎಸ್‌.ಕೆ.ಶಿವಕುಮಾರ್‌   

ಬೆಂಗಳೂರು: ಇಸ್ರೊ ಉಡಾವಣೆ ಮಾಡುವ ಉಪಗ್ರಹಗಳು ಸಿಕ್ಕ ಮಾಹಿತಿಯನ್ನು ಮೊದಲು ರವಾನೆ ಮಾಡುವುದು ಬ್ಯಾಲಾಳು ಉಪಗ್ರಹ ಕೇಂದ್ರದ ಆವರಣದಲ್ಲಿರುವ 105 ಅಡಿ ಸುತ್ತಳತೆಯ ಆಂಟೆನಾಕ್ಕೆ. ಅಂದಹಾಗೆ, ಆ ಆಂಟೆನಾ ನಿರ್ಮಾಣಕ್ಕೆ ಕಾರಣವಾದವರು ಹಿರಿಯ ವಿಜ್ಞಾನಿಯಾಗಿದ್ದ ಡಾ.ಎಸ್‌.ಕೆ.ಶಿವಕುಮಾರ್‌.

ಮಂಗಳಯಾನ ನೌಕೆಗೆ ಉಸಿರು ತುಂಬಿದ ವಿಜ್ಞಾನಿಗಳಲ್ಲಿ ಒಬ್ಬರಾದ ಅವರು (ನೌಕೆಗೆ ಟೆಲಿಮೆಟ್ರಿ ವ್ಯವಸ್ಥೆ ಕಲ್ಪಿಸಿದವರು), ಹೆಮ್ಮೆಯ ಕನ್ನಡಿಗರು; ಅರಮನೆ ನಗರಿಯಾದ ಮೈಸೂರಿನವರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ವಿಕ್ರಮಗಳನ್ನೂ ಸಾಧಿಸಿದವರು ಅವರು.

ಮೈಸೂರು ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್‌ ಪದವಿ ಪಡೆದು, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಉನ್ನತ ಅಧ್ಯಯನ ನಡೆಸಿದ ಅವರು, 12 ವರ್ಷಗಳವರೆಗೆ (1998ರಿಂದ 2010) ಇಸ್ರೊದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌ ಕೇಂದ್ರದ (ಐಸ್ಟ್ರ್ಯಾಕ್‌) ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು.

ADVERTISEMENT

ಮಂಗಳಯಾನ ಮಾತ್ರವಲ್ಲ, ಇಸ್ರೊದ ಎಲ್ಲ ಉಪಗ್ರಹಗಳ ತಯಾರಿಕೆಯಲ್ಲೂ ಇವರ ಕೈಚಳಕ ಇತ್ತು. ಬಾಹ್ಯಾಕಾಶ ಸಂವಹನ ಕ್ಷೇತ್ರದಲ್ಲಿ ಅವರ ಸಾಧನೆ ತುಂಬಾ ಎತ್ತರದ್ದು.

ಭಾರತದ ಡೀಪ್ ಸ್ಪೇಸ್ ನೆಟ್‌ವರ್ಕ್‌ನ ಪಿತಾಮಹ ಎಂದೂ ಅವರನ್ನು ಕರೆಯಲಾಗಿತ್ತು. 2,500 ಎಂಜಿನಿಯರ್‌ಗಳ ತಂಡವನ್ನು ಅವರು ಮುನ್ನಡೆಸಿದ್ದರು. ಯು.ಆರ್‌. ರಾವ್‌ ಉಪಗ್ರಹ ಕೇಂದ್ರಕ್ಕೆ 2012ರಲ್ಲಿ ನಿರ್ದೇಶಕರಾಗಿ ಹೋಗುವ ಮುನ್ನ ಎರಡು ದಶಕಗಳವರೆಗೆ (1978–1998) ಆ ಸಂಸ್ಥೆಯಲ್ಲಿ ಸಂಶೋಧಕರಾಗಿಯೂ ದುಡಿದಿದ್ದರು. ದೇಶದ ಪ್ರತಿಯೊಂದು ಉಪಗ್ರಹ ಯೋಜನೆಯಲ್ಲೂ ಅವರ ಛಾಪಿತ್ತು.

ಹಲವು ಅಂತರರಾಷ್ಟ್ರೀಯ ಸಮಿತಿಗಳಿಗೆ ಸದಸ್ಯರಾಗಿದ್ದ ಅವರು, ಬಾಹ್ಯಾಕಾಶದ ಸೌಹಾರ್ದ ಬಳಕೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ರಚಿಸಿದ್ದ ಸಮಿತಿಗೂ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಪದ್ಮಶ್ರೀ, ರಾಜ್ಯೋತ್ಸವ, ನಾಡೋಜ ಸೇರಿದಂತೆ ಹಲವು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿದ್ದವು.

ಹಿರಿಯ ವಿಜ್ಞಾನಿ ಶಿವಕುಮಾರ್‌ ನಿಧನ
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಯು.ಆರ್‌. ರಾವ್‌ ಉಪಗ್ರಹ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಎಸ್‌.ಕೆ. ಶಿವಕುಮಾರ್‌ (65) ಅವರು ನಗರದಲ್ಲಿ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.

ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಶಿವಕುಮಾರ್‌ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಸ್ರೊ ಲೇಔಟ್‌ನ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.