ADVERTISEMENT

ನಂಬರ್ ಪ್ಲೇಟ್‌ ಅಳವಡಿಸಿ ವಾಹನ ನೀಡಿ: ಆದೇಶ

ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಂದ ಆದೇಶ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 23:21 IST
Last Updated 21 ಮಾರ್ಚ್ 2023, 23:21 IST
   

ಮಂಗಳೂರು: ಹೊಸ ವಾಹನಗಳನ್ನು ಖರೀದಿಸಿದವರಿಗೆ ವಾಹನ ಮಾರಾಟ ಮಳಿಗೆಯವರು ಕಡ್ಡಾಯವಾಗಿ ಅತಿ ಸುರಕ್ಷಿತ ನೋಂದಣಿ ಫಲಕವನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಿದ ಬಳಿಕವೇ ಹಸ್ತಾಂತರ ಮಾಡಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

‘ವಾಹನಕ್ಕೆ ನೋಂದಣಿ ಫಲಕ ಅಳವಡಿಸದ ಹೊರತು ಅಂತಹ ವಾಹನಗಳನ್ನು ಖರೀದಿದಾರರಿಗೆ ಹಸ್ತಾಂತರ ಮಾಡಬಾರದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಮಾರ್ಚ್‌ 3ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿದ್ದಾರೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

'ಈಗ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಿ ತಕ್ಷಣವೇ ವಾಹನದ ನೋಂದಣಿ ಸಂಖ್ಯೆ ಪಡೆಯುವುದಕ್ಕೆ ಅವಕಾಶವಿದೆ. 1988ರ ಮೋಟಾರು ವಾಹನಗಳ ಕಾಯ್ದೆಯ ಸೆಕ್ಷನ್‌ 41 (6)ರ ಪ್ರಕಾರ ಮಾರಾಟ ಮಳಿಗೆಗಳು, ನೋಂದಣಿ ಸಂಖ್ಯೆ ಪಡೆದು ವಾಹನಕ್ಕೆ ಅಳವಡಿಸಿದ ಬಳಿಕವೇ ಅದನ್ನು ಖರೀದಿದಾರರಿಗೆ ಹಸ್ತಾಂತರ ಮಾಡಬೇಕು‘ ಎಂದು ತಿಳಿಸಿದ್ದಾರೆ.

ADVERTISEMENT

‘ಇದುವರೆಗೆ ವಾಹನ ಮಾರಾಟ ಮಳಿಗೆಯವರು ಹೊಸ ವಾಹನವನ್ನು ಮಾರಾಟ ಮಾಡಿದ ಬಳಿಕ, ಅದನ್ನು ನೋಂದಾಯಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಯ ಕಚೇರಿಗೆ ಅರ್ಜಿ ಸಲ್ಲಿಸುತ್ತಿದ್ದರು. ನೋಂದಣಿ ಸಂಖ್ಯೆ ಪಡೆದು, ಅದನ್ನು ವಾಹನದಲ್ಲಿ ಅಳವಡಿಸುವುದಕ್ಕೆ ಸಮಯ ತಗಲುತ್ತಿತ್ತು. ಇನ್ನು ನೋಂದಣಿ ಸಂಖ್ಯೆ ಇಲ್ಲದೇ ವಾಹನವನ್ನು ರಸ್ತೆಗೆ ಇಳಿಸುವುದಕ್ಕೆ ಅವಕಾಶ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. 2019ರ ಏಪ್ರಿಲ್‌ 1ರ ನಂತರ ತಯಾರಿಸಲಾದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.