ಬೆಂಗಳೂರು: ಟೋಲ್ ಗೇಟ್‌ಗಳಲ್ಲಿ ಸುಗಮ ಸಂಚಾರಕ್ಕಾಗಿ ಜಾರಿಗೊಳಿಸಿರುವ ಫಾಸ್ಟ್ಯಾಗ್ ವ್ಯವಸ್ಥೆಯಲ್ಲಿ ಲೋಪಗಳು ಕಂಡುಬರುತ್ತಿದ್ದು, ಟೋಲ್ ದಾಟದಿದ್ದರೂ ಹಣ ಕಡಿತವಾಗುತ್ತಿರುವ ಬಗ್ಗೆ ದೂರುಗಳು ದಾಖಲಾಗುತ್ತಿವೆ. ಇಂಥ ಪ್ರಕರಣಗಳ ಬಗ್ಗೆ ಮಾಹಿತಿ ಕೋರಿ ಪೊಲೀಸರು, ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ)ಗೆ ನೋಟಿಸ್ ನೀಡಿದ್ದಾರೆ.
ಶೋರೂಮ್ ಹಾಗೂ ಮನೆ ಮುಂದೆ ನಿಲ್ಲಿಸುವ ವಾಹನಗಳು, ಟೋಲ್ ದಾಟಿರುವ ಬಗ್ಗೆ ಮಾಲೀಕರ ಮೊಬೈಲ್‌ಗೆ ಸಂದೇಶಗಳು ಬರುತ್ತಿವೆ. ಇಂಥ ಪ್ರಕರಣವೊಂದರ ಸಂಬಂಧ ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್ ಪತ್ನಿ ಸರಸ್ವತಿ, ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಇದರ ತನಿಖೆ ವೇಳೆ, ಫಾಸ್ಟ್ಯಾಗ್ ವ್ಯವಸ್ಥೆ ಲೋಪಗಳು ಪತ್ತೆಯಾಗಿವೆ.
‘ಲೋಪದ ಬಗ್ಗೆ ಮಾಹಿತಿ ಕೋರಿ ಫಾಸ್ಟ್ಯಾಗ್ ನಿರ್ವಹಣಾ ಸಂಸ್ಥೆಯಾದ ಎನ್‌ಪಿಸಿಐಗೆ ಪತ್ರ ಬರೆದರೂ ಉತ್ತರ ನೀಡುತ್ತಿಲ್ಲ. ನೋಟಿಸ್ ನೀಡಿದರೂ ಪ್ರತಿಕ್ರಿಯೆ ಸಿಕ್ಕಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ರವಿಂದು ಟೊಯೊಟಾ ವಿರುದ್ಧದ ಪ್ರಕರಣ: ‘ಸರಸ್ವತಿ ಅವರು ತಮ್ಮ ಇನ್ನೋವಾ ಕ್ರಿಸ್ಟಾ ಕಾರನ್ನು ದುರಸ್ತಿಗೆಂದು ರಾಜಾಜಿನಗರ ಇಸ್ಕಾನ್ ಬಳಿಯ ರವಿಂದು ಟೊಯೊಟಾ ಶೋರೂಮ್‌ಗೆ 2021ರ ಸೆಪ್ಟೆಂಬರ್ 7ರಂದು ನೀಡಿದ್ದರು. ಸೆಪ್ಟೆಂಬರ್ 11 ರಂದು ರಾತ್ರಿ 12.43 ಗಂಟೆಗೆ ಎನ್.ಎಚ್ – 48ರ ಜೀವನಹಳ್ಳಿ ಹಾಗೂ ಚಿತ್ರದುರ್ಗ ಜಿಲ್ಲೆಯ ಗುಯಿಲಾಳು ಟೋಲ್‌ಗೇಟ್ ಮೂಲಕ ಕಾರು ಹಾದು ಹೋದ ಬಗ್ಗೆ ದೂರುದಾರರ ಮೊಬೈಲ್‌ಗೆ ಸಂದೇಶ ಬಂದಿತ್ತು' ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
'ರವಿಂದು ಟೊಯೊಟಾ ಸಿಬ್ಬಂದಿ, 200 ಕಿ.ಮೀ.ಗಿಂತ ಹೆಚ್ಚು ಓಡಿಸಿದ್ದಾರೆಂದು ಆರೋಪಿಸಿ ಠಾಣೆಗೆ ದೂರು ನೀಡಿದ್ದರು. ಕಾರು ದುರ್ಬಳಕೆ ಮತ್ತು ನಂಬಿಕೆ ದ್ರೋಹ ಆರೋಪದಡಿ ಎಫ್ಐಆರ್ ದಾಖಲಿಸಿ, ತನಿಖೆ ಆರಂಭಿಸಲಾಗಿತ್ತು’ ಎಂದೂ ಹೇಳಿದರು.
ಬಿ–ರಿಪೋರ್ಟ್ ಸಲ್ಲಿಕೆ: ‘ಜೀವನಹಳ್ಳಿ ಹಾಗೂ ಗುಯಿಲಾಳು ಟೋಲ್‌ಗೇಟ್‌ನ ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ, ಕಾರು ಟೋಲ್‌ಗೇಟ್ ಬಳಿ ಹೋಗಿಲ್ಲ ಎಂದು ಖಾತ್ರಿಯಾಯಿತು. ರವಿಂದು ಟೊಯೊಟಾ ಅವರದ್ದು ತಪ್ಪಿಲ್ಲವೆಂದು ಹೇಳಿ ನ್ಯಾಯಾಲಯಕ್ಕೆ ಬಿ–ರಿಪೋರ್ಟ್ ಸಲ್ಲಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.
‘ತಪ್ಪು ಸಂದೇಶ ಬಂದಿದ್ದು ಹೇಗೆ ಎಂಬುದನ್ನು ತಿಳಿಯಲು ಹೊರಟಾಗಲೇ, ಫಾಸ್ಟ್ಯಾಗ್ ಲೋಪದ ಬಗ್ಗೆ ಗೊತ್ತಾಗಿದೆ. ಈ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೂ ತರಲಾ ಗುವುದು. ಲೋಪಗಳಿಗೆ ತಮಗೂ ಸಂಬಂಧವಿಲ್ಲವೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದರು. ಹೀಗಾಗಿ, ಎನ್‌ಪಿಸಿಐಗೆ ಇ–ಮೇಲ್ ಮೂಲಕ ನೋಟಿಸ್ ನೀಡಲಾಗಿದೆ. ಉತ್ತರ ಬರದಿದ್ದರೆ, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.