ಮಂಗಳೂರು: ‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರುಕುಳದಿಂದಲೇ ಸಿದ್ದಾರ್ಥ ಅವರಿಗೆ ಹೀಗೆಲ್ಲಾ ಆಗಿದ್ದು’ ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಪ್ರತಿಕ್ರಿಯಿಸಿದರು.
ಉದ್ಯಮಿ ಸಿದ್ದಾರ್ಥ ನಾಪತ್ತೆ ಆದ ಸ್ಥಳ ಉಳ್ಳಾಲ ಸಮೀಪದ ನೇತ್ರಾವತಿ ನದಿಯ ಸೇತುವೆ ಮೇಲೆ ಮಂಗಳವಾರ ಬೆಳ್ಳಿಗ್ಗೆಯಿಂದಲೇ ಓಡಾಡುತ್ತಾ ಹುಡುಕಾಟದ ಕಾರ್ಯಾಚರಣೆ ವೀಕ್ಷಿಸುತ್ತಿದ್ದ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು.
‘ಸಿದ್ದಾರ್ಥ ಅವರು ನನ್ನ ಹಿತೈಷಿಗಳು. ನಾನು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೆ. ತುಂಬಾ ಶಿಸ್ತಿನ ವ್ಯಕ್ತಿ. ತಾಳ್ಮೆಯಿಂದ ವರ್ತಿಸುತ್ತಿದ್ದರು. ಆದರೆ, ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯ ನಂತರ ಅವರು ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದರು. ಅವರ ಕಿರುಕುಳದಿಂದಲೇ ಸಿದ್ದಾರ್ಥ ಅವರಿಗೆ ಈ ಸ್ಥಿತಿ ಬಂದಿತು’ ಎಂದು ಬೇಸರ ವ್ಯಕ್ತಪಡಿಸಿದರು.
‘ಸಿದ್ದಾರ್ಥ ದೊಡ್ಡ ಶ್ರೀಮಂತರಾಗಿದ್ದರೂ ಸರಳ ಜೀವಿ. ಗ್ರಾಮೀಣ ಜನರೊಂದಿಗೆ ಯಾವುದೇ ಹಮ್ಮು–ಬಿಮ್ಮುಗಳಿಲ್ಲದೆ ಬೆರೆಯುತ್ತಿದ್ದರು. ಅವರಿಗೆ ಈ ಸ್ಥಿತಿ ಬರಬಾರದಾಗಿತ್ತು’ ಎಂದು ಹೇಳಿದರು.
‘ದೇಶದ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇದು ದೇಶಸೇವೆ ಕೆಲಸ ಅಲ್ಲವೇ? ಐಟಿಯವರೇನು ಮಿಲಿಟ್ರಿ ಅವರೇ? ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದರೂ ಇವರ ಕಿರುಕುಳ ನಿಲ್ಲುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನದಿ ಸೇತುವೆ ಮೇಲೆ ಸಂಚಾರ ದಟ್ಟಣೆ
ಸಿದ್ದಾರ್ಥ ಅವರು ನಾಪತ್ತೆಯಾಗಿದ್ದಾರೆ ಎನ್ನಲಾದ ಉಳ್ಳಾಲ ಸಮೀಪದ ನೇತ್ರಾವತಿ ನದಿಯ ಸೇತುವೆ ಮೇಲೆ ಬೆಳಿಗ್ಗೆಯಿಂದಲೇ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸುದ್ದಿ ತಿಳಿದು ನದಿಯತ್ತ ಬರುವವರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸಿದ್ದಾರ್ಥ ಅವರ ಸ್ವಂತ ಜಿಲ್ಲೆ ಚಿಕ್ಕಮಗಳೂರಿನಿಂದಲೂ ಅವರ ಸ್ನೇಹಿತರು, ಹಿತೈಷಿಗಳು ಅಲ್ಲಿಗೆ ಧಾವಿಸಿ ಬರುತ್ತಲೇ ಇದ್ದರು. ಹುಡುಕಾಟದ ಕಾರ್ಯಾಚರಣೆ ವೀಕ್ಷಣೆಗೆ ಬಂದ ಜನರನ್ನು ಚದುರಿಸುವುದು ಪೊಲೀಸರಿಗೆ ಹರಸಾಹಸವಾಯಿತು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.