ADVERTISEMENT

ಕಾರ್ಮಿಕ ಕಾನೂನು ವ್ಯಾಪ್ತಿಗೆ ಐಟಿ, ಬಿಟಿ ಕಂಪನಿ: ಸಿಎಂ ಜೊತೆ ಚರ್ಚೆ– ಸಚಿವ ಲಾಡ್‌

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 15:47 IST
Last Updated 23 ಡಿಸೆಂಬರ್ 2023, 15:47 IST
ಸಂತೋಷ್ ಲಾಡ್
ಸಂತೋಷ್ ಲಾಡ್   

ಬೆಂಗಳೂರು: ‘ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕಂಪನಿಗಳನ್ನು (ಐಟಿ–ಬಿಟಿ) ಕಾರ್ಮಿಕ ಕಾನೂನು ವ್ಯಾಪ್ತಿಗೆ ತರುವ ಕುರಿತು ಮುಖ್ಯಮಂತ್ರಿ‌ ಮತ್ತು ಕಂಪನಿಗಳ ಮುಖ್ಯಸ್ಥರ ಜೊತೆ ಚರ್ಚೆ ನಡೆಸಲಾಗುವುದು’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯದಲ್ಲಿ 7,500ಕ್ಕೂ ಹೆಚ್ಚು ಐಟಿ –ಬಿಟಿ ಕಂಪನಿಗಳಿದ್ದು, ಲಕ್ಷಾಂತರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ಕಾನೂನು ವ್ಯಾಪ್ತಿಗೆ ಐಟಿ–ಬಿಟಿ ಕಂಪನಿಗಳು ಬಂದರೆ ಅಲ್ಲಿನ ನೌಕರರಿಗೆ ಸಹಾಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಐಟಿ-ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರು ಕೆಲಸದಿಂದ ತೆಗೆದುಹಾಕುವುದು, ಲೈಂಗಿಕ ಕಿರುಕುಳ, ಮಾನಸಿಕ ಒತ್ತಡ, ಕೇವಲ ರಾತ್ರಿ ಪಾಳಿ ಕೆಲಸ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಆದರೆ, ಈ ಕಂಪನಿಗಳು ಕಾರ್ಮಿಕ ಕಾನೂನಿಂದ ಹೊರಗಿರುವುದರಿಂದ, ಅಲ್ಲಿನ ನೌಕರರು ನೀಡುವ ದೂರುಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ಇಲ್ಲ. ಹೀಗಾಗಿ, ಐಟಿ–ಬಿಟಿ ಕಂಪನಿಗಳನ್ನು ಕಾರ್ಮಿಕ ಕಾನೂನು ವ್ಯಾಪ್ತಿಗೆ ತರುವ ಬಗ್ಗೆ ಚರ್ಚೆ ಮಾಡಲಾಗುವುದು. ಈ ಹಿಂದೆಯೂ ಈ ಪ್ರಸ್ತಾಪ ಇತ್ತು. ಆದರೆ, ಯಾವುದೇ ಕ್ರಮ ಆಗಿಲ್ಲ’ ಎಂದರು.

ADVERTISEMENT

‘ಹಾಗೆಂದು, ಐಟಿ–ಬಿಟಿ ಕಂಪನಿಗಳು ಒಳ್ಳೆಯ ಕೆಲಸ ಮಾಡುತ್ತಿಲ್ಲ ಎಂದರ್ಥವಲ್ಲ. ಕಂಪನಿಗಳಿಗೆ ತೊಂದರೆ ನೀಡುವ ಉದ್ದೇಶವೂ ಇಲ್ಲ. ಕಂಪನಿಯ ನೌಕರರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕಂಪನಿಗಳ ಮುಖ್ಯಸ್ಥರನ್ನು ಕರೆಸಿ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ’ ಎಂದೂ ಹೇಳಿದರು.

ಕನಿಷ್ಠ ವೇತನ ಚರ್ಚೆ: ಕುಶಲ ಹಾಗೂ ಕೌಶಲರಹಿತ ಕಾರ್ಮಿಕರಿಗೆ ನ್ಯಾಯಾಲಯದ ಮಾರ್ಗಸೂಚಿ ಪ್ರಕಾರ ಕನಿಷ್ಠ ವೇತನ ನಿಗದಿಪಡಿಸುವ ಕುರಿತು ಕೈಗಾರಿಕಾ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳ ಜತೆ ಸಚಿವ ಲಾಡ್ ಸಭೆ ನಡೆಸಿದರು.

ಸಭೆಯಲ್ಲಿ ಎಫ್‌ಕೆಸಿಸಿಐ, ಸಿಐಐ ಹಾಗೂ ಕಾಸಿಯಾದ ಪದಾಧಿಕಾರಿಗಳು ಜತೆ ಸಭೆ ನಡೆಸಿದ ಲಾಡ್, ಕನಿಷ್ಠ ವೇತನ ನಿಗದಿ ಮಾಡಲು ಇರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಅದಾದ ಬಳಿಕ, ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ, ಇಂಟಕ್, ಸಿಐಟಿಯು, ಟಿಯುಸಿಸಿ, ಎಚ್‌ಎಂಕೆಪಿ, ಗಾರ್ಮೆಂಟ್ಸ್ ನೌಕರರ ಸಂಘಟನೆಗಳ ಪದಾಧಿಕಾರಿಗಳ ಜತೆ ಚರ್ಚಿಸಿ, ಅವರ ಬೇಡಿಕೆಗಳನ್ನು ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.