ಬೆಂಗಳೂರು: ‘ಕೇಂದ್ರದ ಶಾಸನಗಳ ಅಡಿಯಲ್ಲಿ ಭೂ ಸ್ವಾಧೀನ ಪಡಿಸಿಕೊಂಡ ಪರಿಹಾರ ಧನಕ್ಕೆ ಹೇಗೆ ಆದಾಯ ತೆರಿಗೆ ಪಾವತಿ ವಿನಾಯಿತಿ ನೀಡಲಾಗಿದೆಯೋ ಅದೇ ರೀತಿಯಲ್ಲಿ ಪ್ರಾದೇಶಿಕ ಶಾಸನಗಳ ಅಡಿಯಲ್ಲಿ ಭೂ ಸ್ವಾಧೀನಪಡಿಸಿಕೊಂಡಾಗ ನೀಡಲಾಗುವ ಪರಿಹಾರ ಧನಕ್ಕೂ ಆದಾಯ ತೆರಿಗೆ ವಿನಾಯಿತಿ ನೀಡುವಂತಹ ಕಾನೂನು ರೂಪಿಸುವತ್ತ ಚಿತ್ತ ಹರಿಸಿ’ ಎಂದು ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದೆ.
ಈ ಸಂಬಂಧ ಏಕಸದಸ್ಯ ನ್ಯಾಯಪೀಠ ಭೂಮಿ ಕಳೆದುಕೊಂಡವರ ಪರವಾಗಿ ನೀಡಿದ್ದ ತೀರ್ಪು ಪ್ರಶ್ನಿಸಿ ಆದಾಯ ತೆರಿಗೆ ಆಯುಕ್ತರು (ಟಿಡಿಎಸ್) ಸಲ್ಲಿಸಿದ ಮೇಲ್ಮನವಿಯನ್ನು ಪುರಸ್ಕರಿಸಿರುವ ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಕುರಿತಂತೆ ತನ್ನ ಆದೇಶದಲ್ಲಿ ವಿವರಿಸಿದೆ.
‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ಸ್ಥಾಪನೆ ಕಾಯ್ದೆ–2013ರಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಲಂ 96ರ ಅಡಿಯಲ್ಲಿ ಪರಿಹಾರ ಪಾವತಿಸಲು ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ, ಇದಕ್ಕೂ ಮುನ್ನವೇ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಕಾಯ್ದೆ–1966, ಕರ್ನಾಟಕ ಹೆದ್ದಾರಿಗಳ ಕಾಯ್ದೆ–1964, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ– 1987... ಇತ್ಯಾದಿ ನೂರಾರು ಕಾನೂನುಗಳು ಪ್ರಾದೇಶಿಕ ಮಟ್ಟದಲ್ಲಿ ಜಾರಿಗೆ ಬಂದಿವೆ. ಹೀಗಾಗಿ, ಈ ಕಾಯ್ದೆಗಳ ಅಡಿಯಲ್ಲಿ ಪರಿಹಾರ ಪಡೆಯುವ ರೈತರಿಗೂ ತೆರಿಗೆ ವಿನಾಯಿತಿ ನೀಡಬೇಕಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಕೇಂದ್ರದ ಶಾಸನಗಳ ಅಡಿಯಲ್ಲಿ ಸ್ವಾಧೀನಪಡಿಸಿಕೊಂಡ ಜಮೀನುಗಳ ಪರಿಹಾರ ವಿತರಣೆಯಲ್ಲಿ ತೆರಿಗೆ ವಿನಾಯಿತಿ, ನಿರಾಶ್ರಿತರಿಗೆ ಪುನರ್ವಸತಿ ಸೇರಿದಂತೆ ಹಲವು ಪ್ರಯೋಜನಗಳಿವೆ’ ಎಂಬುದನ್ನು ನ್ಯಾಯಪೀಠ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.