ADVERTISEMENT

ಯತ್ನಾಳ ಎಲ್ಲಿಂದ ಮಾಹಿತಿ ಸಂಗ್ರಹಿಸುತ್ತಾರೆ ಎಂಬುದೇ ವಿಚಿತ್ರ: ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 11:38 IST
Last Updated 31 ಜುಲೈ 2024, 11:38 IST
<div class="paragraphs"><p>ಲಕ್ಷ್ಮಿ ಹೆಬ್ಬಾಳಕರ ಮತ್ತು&nbsp;ಬಸನಗೌಡ ಪಾಟೀಲ ಯತ್ನಾಳ</p></div>

ಲಕ್ಷ್ಮಿ ಹೆಬ್ಬಾಳಕರ ಮತ್ತು ಬಸನಗೌಡ ಪಾಟೀಲ ಯತ್ನಾಳ

   

ಬೆಳಗಾವಿ: ‘ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಹೈಕಮಾಂಡ್‌ಗೆ ₹2,000 ಕೋಟಿ, ಮಂತ್ರಿ ಸ್ಥಾನಕ್ಕೆ ₹500 ಕೋಟಿ ನೀಡಬೇಕಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೇ ಈ ಹಿಂದೆ ಹೇಳಿದ್ದರು. ಈಗ ಸಿದ್ದರಾಮಯ್ಯ ವಿರುದ್ಧ ನಮ್ಮವರೇ ದಾಖಲೆ ನೀಡುತ್ತಿದ್ದಾರೆ ಎನ್ನುತ್ತಿದ್ದಾರೆ. ಅವರು ಎಲ್ಲಿಂದ ಇಂಥ ವಿಷಯ ಸಂಗ್ರಹಿಸುತ್ತಾರೆ ಎಂಬುದೇ ವಿಚಿತ್ರ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿರುಗೇಟು ನೀಡಿದರು.

‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಲು ಕಾಂಗ್ರೆಸ್‌ನವರೇ ದಾಖಲೆ ಕೊಡುತ್ತಿದ್ದಾರೆ’ ಎಂಬ ಯತ್ನಾಳ ಆರೋಪಕ್ಕೆ, ಇಲ್ಲಿ ಬುಧವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

ADVERTISEMENT

‘ಡಿ.ಕೆ.ಶಿವಕುಮಾರ್‌ ಅವರ ಋಣ ತೀರಿಸಲು ಬಿ.ವೈ.ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆಯೇ’ ಎಂಬ ಪ್ರಶ್ನೆಗೆ, ‘ಅವರದ್ದು ಯಾವ ಋಣ ಎಂದು ನನಗೆ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯನ್ನು ಬಿಜೆಪಿಯವರು ಆಯ್ಕೆ ಮಾಡುತ್ತಾರೆ ಎಂಬ ಮಾತು ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಹುಟ್ಟುತ್ತಾನೆಯೇನೋ ಎಂಬಂತಿದೆ’ ಎಂದರು.

‘2019ರಲ್ಲಿ ಬೆಳಗಾವಿ ಜಿಲ್ಲೆ ಶತಮಾನದಲ್ಲೇ ಕಂಡರಿಯದ ಪ್ರವಾಹದಿಂದ ತತ್ತರಿಸಿತ್ತು. ಆದರೆ, ಪ್ರಧಾನಿ ಇಲ್ಲಿಗೆ ಭೇಟಿ ಕೊಟ್ಟಿರಲಿಲ್ಲ. ಆದರೆ, ಸದ್ಯದ ಪ್ರವಾಹಪೀಡಿತ ಸ್ಥಳಗಳ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾಹಿತಿ ಪಡೆಯುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜಿಲ್ಲೆ ವಿಭಜನೆಯಾಗದ ಕಾರಣ ಆಡಳಿತಕ್ಕೆ ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಇದನ್ನು ಎರಡು ಅಥವಾ ಮೂರು ಜಿಲ್ಲೆಗಳಾಗಿ ಜಿಲ್ಲೆಗಳಾಗಿ ವಿಭಜಿಸಬೇಕೆಂಬ ಚರ್ಚೆ ಇದೆ‌. ಉನ್ನತಮಟ್ಟದ ಸಭೆಯಲ್ಲೇ ತೀರ್ಮಾನಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿ ಕುರಿತು ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ನಾನು ಸ್ವತಃ ಖಾನಾಪುರ ತಾಲ್ಲೂಕಿಗೆ ಹೋಗಿ ಪರಿಶೀಲಿಸಿದ್ದೇನೆ. ಅಧಿಕಾರಿಗಳು ಕೊಟ್ಟ ಮಾಹಿತಿಗಿಂತ ಹೆಚ್ಚಿನ ಮನೆಗಳು ಅಲ್ಲಿ ಬಿದ್ದಿವೆ. ಇನ್ಮುಂದೆ ಯಾರೂ ಬೇಜವಾಬ್ದಾರಿಯಿಂದ ಕೆಲಸ ಮಾಡಬಾರದು. ಸರಿಯಾದ ಮಾಹಿತಿಯನ್ನೇ ನೀಡಬೇಕು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.