ADVERTISEMENT

ಅಕ್ರಮ ಹಣ ಪತ್ತೆ: ಡಿಕೆಶಿ ವಿರುದ್ಧ ಮೊಕದ್ದಮೆ ದಾಖಲು

ದೆಹಲಿಯಲ್ಲಿ ಸಿಕ್ಕಿತ್ತು ₹ 8.5 ಕೋಟಿ!

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 18:34 IST
Last Updated 20 ಜೂನ್ 2018, 18:34 IST
ಡಿ.ಕೆ. ಶಿವಕುಮಾರ್‌ (ಸಂಗ್ರಹ ಚಿತ್ರ)
ಡಿ.ಕೆ. ಶಿವಕುಮಾರ್‌ (ಸಂಗ್ರಹ ಚಿತ್ರ)   

ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್‌ ಅವರ ಬೆಂಗಳೂರಿನ ಸದಾಶಿವನಗರ ಮನೆ ಮತ್ತು ನವದೆಹಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಫ್ಲ್ಯಾಟ್ ಮೇಲೆ 2017ರ ಆಗಸ್ಟ್‌ 2ರಂದು ನಡೆದ ದಾಳಿ ವೇಳೆ ವಶಪಡಿಸಿಕೊಂಡ ₹ 8.60ಕೋಟಿ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಇಲ್ಲಿನ ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ.

ಇದರಿಂದಾಗಿ ಶಿವಕುಮಾರ್‌ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಸಚಿವರ ರಿಯಲ್‌ ಎಸ್ಟೇಟ್‌ ವ್ಯವಹಾರದ ಪಾಲುದಾರ, ರಾಜಾಜಿನಗರದ ಸಚ್ಚಿನ್‌ ನಾರಾಯಣ್‌,ಮತ್ತೊಬ್ಬ ಬಿಸಿನೆಸ್‌ ಪಾಲುದಾರ, ಶರ್ಮ ಟ್ರಾನ್ಸ್‌‍ಪೋರ್ಟ್‌ನ ಮಾಲೀಕ ಸುನೀಲ್‌ ಕುಮಾರ್‌ ಶರ್ಮ, ಸಚಿವರಿಗೆ ದೆಹಲಿಯಲ್ಲಿ ಆಪ್ತ ಸಹಾಯಕ ಆಗಿರುವ ಕರ್ನಾಟಕ ಭವನದ ನೌಕರ ಆಂಜನೇಯ ಮತ್ತು ಸುಖದೇವ್‌ ವಿಹಾರದ ನಿವಾಸಿ ಎನ್‌. ರಾಜೇಂದ್ರ ಅವರನ್ನು ಪ್ರಕರಣದಲ್ಲಿ ಆರೋ‍ಪಿಗಳೆಂದು ಹೆಸರಿಸಲಾಗಿದೆ.

ಈ ಪ್ರಕರಣದ ಸಂಬಂಧ ಆಗಸ್ಟ್‌ 2ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಶಿವಕುಮಾರ್‌ ಹಾಗೂ ಅವರ ಆಪ್ತರಿಗೆ ನೋಟಿಸ್‌ ಜಾರಿ ಮಾಡಿದೆ.ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ಕಳೆದ ವರ್ಷ ನಡೆದ ಚುನಾವಣೆ ವೇಳೆ ಶಿವಕುಮಾರ್‌ ಗುಜರಾತಿನ ಕಾಂಗ್ರೆಸ್‌ ಶಾಸಕರಿಗೆ ಬಿಡದಿ ಸಮೀಪದ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಆಶ್ರಯ ನೀಡಿದ್ದಾಗಲೇ ಐ.ಟಿ ದಾಳಿ ನಡೆಸಿತ್ತು.

ADVERTISEMENT

ಈಗಲ್‌ಟನ್‌ ರೆಸಾರ್ಟ್‌, ಶಿವಕುಮಾರ್‌ ಅವರ ಸದಾಶಿವನಗರದ ಮನೆ, ಆಂಜನೇಯ ಅವರ ಆರ್‌.ಕೆ. ಪುರಂ ಮನೆ, ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಫ್ಲ್ಯಾಟ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿತ್ತು.

ದಾಳಿ ವೇಳೆ ಆಂಜನೇಯ ಅವರ ಮನೆಯಲ್ಲಿ ₹ 12.45 ಲಕ್ಷ, ಸಫ್ದರ್‌ಜಂಗ್‌ ಎನ್‌ಕ್ಲೇವ್‌ನ ನಾಲ್ಕನೇ ಬ್ಲಾಕಿನ 17 ನಂಬರ್‌ ಮನೆಯಲ್ಲಿ ₹ 1.37ಕೋಟಿ, ಎರಡನೇ ಬ್ಲಾಕಿನ 107ನೇ ನಂಬರ್‌ ಮನೆಯಲ್ಲಿ ₹41 ಲಕ್ಷ, ಐದನೇ ಬ್ಲಾಕಿನ 201ನೇ ನಂಬರ್‌ ಮನೆಯಲ್ಲಿ ಶಿವಕುಮಾರ್‌ ಅವರಿಗೆ ಸೇರಿದ ಕೊಠಡಿಯಲ್ಲಿ ₹ 6.61 ಕೋಟಿ ಹಾಗೂ ಸುನೀಲ್‌ ಕುಮಾರ್‌ ಶರ್ಮ ಅವರಿಗೆ ಸೇರಿದ ಕೊಠಡಿಯಲ್ಲಿ ₹ 7.51 ಲಕ್ಷ ಹಣ ಪತ್ತೆಯಾಗಿತ್ತು. ಈ ಫ್ಲ್ಯಾಟ್‌ಗಳ ಕೀ ಆಂಜನೇಯ ಅವರ ಬಳಿ ಇತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಸ್ಪಷ್ಟಪಡಿಸಿದೆ.

ಹಣದ ಮೂಲ ಕುರಿತು ಸಚಿವರಾಗಲೀ ಅಥವಾ ಅವರ ಆಪ್ತರಾಗಲೀ ಸಮರ್ಪಕ ಉತ್ತರ ನೀಡಿಲ್ಲ. ಪರಸ್ಪರ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ. ಹಣ ಯಾರಿಗೆ ಸೇರಿದ್ದು; ಎಲ್ಲಿಂದ ತಂದಿದ್ದು; ಬೆಂಗಳೂರಿನಿಂದ ದೆಹಲಿಗೆ ಸಾಗಿಸಲು ಕಾರಣವೇನು; ಯಾವಾಗ ಸಾಗಣೆ ಮಾಡಲಾಯಿತು ಎಂಬ ಬಗ್ಗೆ ಸರಿಯಾದ ಉತ್ತರ ನೀಡಿಲ್ಲ ಎಂದು ಐ.ಟಿ ಹೇಳಿದೆ.

ಈ ಹಣ ಶಿವಕುಮಾರ್‌ ಅವರಿಗೆ ಸೇರಿದ್ದು, ಆದಾಯ ತೆರಿಗೆ ವಂಚಿಸುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ. ಆದಾಯ ತೆರಿಗೆ ವಂಚಿಸಲು ಉಳಿದವರು ಅವರಿಗೆ ನೆರವಾಗಿದ್ದಾರೆ ಎಂದೂ ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.