ಬೆಂಗಳೂರು: ‘ಉಪ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ನಾಯಕರಿಗೆ, ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲೂ ಕಷ್ಟವಾಗಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಅಭಿವೃದ್ಧಿಗೆ ಹಣ ಕೊಡದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್‌ನ ರಾಜು ಕಾಗೆ ಹೇಳಿದ್ದಾರೆ. ಎಂಟು ಬಾರಿ ಶಾಸಕರಾದ ಆರ್.ವಿ.ದೇಶಪಾಂಡೆ ಕೂಡ ಅನುದಾನ ಸಿಗುತ್ತಿಲ್ಲ ಎಂದಿದ್ದಾರೆ. ಮತ್ತೊಂದೆಡೆ ಬಿ.ಆರ್. ಪಾಟೀಲ ಅವರು ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎನ್ನುತ್ತಿದ್ದಾರೆ. ಉಪ ಚುನಾವಣೆಯ ನಂತರ ಇಂತಹ ಅಸಮಾಧಾನಗಳು ಸ್ಫೋಟವಾಗಲಿವೆ ಎಂದರು.
ರಾಜ್ಯದಲ್ಲಿ ಮಳೆ ಹೆಚ್ಚಾಗಿ ನೆರೆ ಪರಿಸ್ಥಿತಿ ಇದೆ. ಬೆಳೆ ಸಂಪೂರ್ಣ ನಾಶವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಿಗೆ ತಲಾ 10 ಸಚಿವರು, 20ರಿಂದ 30 ಜನ ಶಾಸಕರನ್ನು ನೇಮಿಸಿದೆ. ಹಣದ ಮೂಟೆ ಇಟ್ಟುಕೊಂಡು ಉಪ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ. ರೈತರ ಸಂಕಷ್ಟ ಕಣ್ಣಿಗೆ ಕಾಣುತ್ತಿಲ್ಲ ಎಂದು ದೂರಿದರು.
ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಡವರು ಮನೆ ಕಳೆದುಕೊಂಡರೆ ₹5 ಲಕ್ಷ ಕೊಡುತ್ತಿದ್ದರು. ಈ ಸರ್ಕಾರ ₹1 ಲಕ್ಷ ಕೊಡಲೂ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ವಕ್ಫ್ ಕಾಯಿದೆ ಹೆಸರಲ್ಲಿ ವಿಜಯಪುರ ಜಿಲ್ಲೆಯ ರೈತರನ್ನು ಕಾಂಗ್ರೆಸ್ ಸರ್ಕಾರ ಬೀದಿಪಾಲು ಮಾಡುತ್ತಿದೆ. ಬಿಜೆಪಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ. ರೈತರಿಗೆ ನ್ಯಾಯ ಕೊಡಿಸಲು ಹೋರಾಟಕ್ಕೂ ಇಳಿಯುತ್ತೇವೆ. ವಕ್ಫ್ ಕಾಯಿದೆ ಹೆಸರಿನಲ್ಲಿ ರೈತರ ಜಮೀನನ್ನು ಕಬಳಿಸಲು ಬಿಡುವುದಿಲ್ಲ ಎಂದರು. ವಕ್ಫ್ ಕಾಯ್ದೆಗೆ ಸುಧಾರಣೆ ತರಬೇಕು ಎಂದು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಚರ್ಚೆಗಳೂ ನಡೆಯುತ್ತಿವೆ. ವಿಜಯಪುರದ ರೈತರು ಸಮಿತಿ ಸದಸ್ಯರಾದ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.