ADVERTISEMENT

ಐಟಿಐ | 38 ಪ್ರಾಚಾರ್ಯರಿಗೆ ಹಿಂಬಡ್ತಿ ಭೀತಿ

‘ಸುಪ್ರೀಂ’ ತೀರ್ಪು ಜಾರಿಗೂ ಕೈಗಾರಿಕಾ ತರಬೇತಿ ಇಲಾಖೆ ಹಿಂದೇಟು– ಬಡ್ತಿ ವಂಚಿತರ ಆರೋಪ

ರಾಜೇಶ್ ರೈ ಚಟ್ಲ
Published 10 ಜುಲೈ 2024, 0:36 IST
Last Updated 10 ಜುಲೈ 2024, 0:36 IST
   

ಬೆಂಗಳೂರು: ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಕಿರಿಯ ತರಬೇತಿ ಅಧಿಕಾರಿ (ಜೆಟಿಒ) ಹುದ್ದೆಯಿಂದ ನೇರವಾಗಿ ಪ್ರಾಚಾರ್ಯ ಹುದ್ದೆಗೆ ಮುಂಬಡ್ತಿ ನೀಡಿರುವುದು ನಿಯಮಬಾಹಿರವೆಂದು ಕೆಎಟಿ, ಹೈಕೋರ್ಟ್ ನೀಡಿದ್ದ ತೀರ್ಪುನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು ಆರು ತಿಂಗಳು ಕಳೆದಿದೆ. ಆದರೂ, ಹೀಗೆ ಮುಂಬಡ್ತಿ ಪಡೆದ 38 ಜೆಟಿಒಗಳಿಗೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಿಂಬಡ್ತಿ ನೀಡದಿರುವುದು ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

1985ರ ವೃಂದ ಮತ್ತು ನೇಮಕಾತಿ ನಿಯಮವನ್ನು 1998ರಲ್ಲಿ ತಿದ್ದುಪಡಿ ಮಾಡಿದ್ದ ಇಲಾಖೆ, ಪ್ರಾಚಾರ್ಯರ ದರ್ಜೆ-2ರ ಹುದ್ದೆಗಳಿಗೆ ಮುಂಬಡ್ತಿ ನೀಡುವಾಗ ಬಿ.ಇ ಎಂಜಿನಿಯರಿಂಗ್ ಪದವೀಧರ ಜೆಟಿಒಗಳಿಗೆ ಶೇ 33ರಷ್ಟು ಕೋಟಾ ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) 2008ರಲ್ಲಿಯೇ ಈ ಕೋಟಾವನ್ನು ಅನೂರ್ಜಿತಗೊಳಿಸಿತ್ತು.

ಹೀಗೆ ನಿಯಮ ತಿದ್ದುಪಡಿಯ ನಂತರ ಇಲಾಖೆಯು (1999ರಿಂದ 2011ರವರೆಗೆ) ಒಟ್ಟು 58 ಜೆಟಿಒಗಳಿಗೆ ನೇರವಾಗಿ ಪ್ರಾಚಾರ್ಯ ಹುದ್ದೆಗೆ ಮುಂಬಡ್ತಿ ನೀಡಿದೆ. ಈ ಪೈಕಿ, 20 ಮಂದಿ ನಿವೃತ್ತರಾಗಿದ್ದು, ಸದ್ಯ 38 ಮಂದಿ ಕೆಲಸ ಮಾಡುತ್ತಿದ್ದಾರೆ. ಕೋರ್ಟ್‌ ತೀರ್ಪಿನಿಂದಾಗಿ ಅವರೆಲ್ಲರೂ ಹಿಂಬಡ್ತಿಯ ಭೀತಿ ಎದುರಿಸುತ್ತಿದ್ದಾರೆ. ವಿಶೇಷವೆಂದರೆ, ಕೆಎಟಿ ತೀರ್ಪು ನೀಡಿದ ನಂತರ 17 ಮಂದಿಗೆ ಇಲಾಖೆ ಬಡ್ತಿ ನೀಡಿದೆ! 

ADVERTISEMENT

ಕೆಎಟಿ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಕೆಎಟಿ ತೀರ್ಪನ್ನು ಹೈಕೋರ್ಟ್‌ 2012ರಲ್ಲಿ ಎತ್ತಿಹಿಡಿದಿತ್ತು. ಇದರಿಂದಾಗಿ ಹಿಂಬಡ್ತಿ ಭೀತಿಗೆ ಒಳಗಾದ ಅಧಿಕಾರಿಗಳು ಹೈಕೋರ್ಟ್‌ ತೀರ್ಪುನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಿದ್ದರು. 2012ರಲ್ಲಿಯೇ ಮಧ್ಯಂತರ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಇದೇ ಜನವರಿಯಲ್ಲಿ ಎಸ್‌ಎಲ್‌ಪಿಯನ್ನು ವಜಾಗೊಳಿಸಿದೆ.

‘ಕೆಎಟಿ ತೀರ್ಪು ನೀಡಿ 16 ವರ್ಷ, ಹೈಕೋರ್ಟ್ ತೀರ್ಪು ನೀಡಿ 12 ವರ್ಷ ಕಳೆದಿದೆ. ಸುಪ್ರೀಂ ಕೋರ್ಟ್‌ ತೀರ್ಪು ನೀಡಿ ಆರು ತಿಂಗಳಾಯಿತು. ಆದರೂ ಜೆಟಿಒ ಹುದ್ದೆಯಿಂದ ನೇರವಾಗಿ (ಎರಡು, ಮೂರು ವೃಂದಗಳನ್ನು ಕಡೆಗಣಿಸಿ) ಸಹಾಯಕ ನಿರ್ದೇಶಕರು, ಪ್ರಾಚಾರ್ಯರ ಹುದ್ದೆಗಳಿಗೆ ನಿಯಮಬಾಹಿರವಾಗಿ ಮುಂಬಡ್ತಿ ಪಡೆದಿರುವವರಿಗೆ ಹಿಂಬಡ್ತಿ ನೀಡಿಲ್ಲ. ಅಲ್ಲದೆ, ಕೋರ್ಟ್ ಆದೇಶ ಜಾರಿಯಾಗದ ಕಾರಣಕ್ಕೆ, ಕೆಪಿಎಸ್‌ಸಿ ಮೂಲಕ 2008ರಲ್ಲಿ ಇಲಾಖೆಗೆ ನೇರವಾಗಿ ನೇಮಕವಾದ ಅಧಿಕಾರಿಗಳ ಪೈಕಿ 30 ಮಂದಿ  ಮುಂಬಡ್ತಿಯಿಂದ ವಂಚಿತರಾಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಹಲವು ವರ್ಷಗಳ ನಿರಂತರ ಕಾನೂನು ಹೋರಾಟದಲ್ಲಿ ಗೆಲುವು ಸಿಕ್ಕಿದರೂ, ತೀರ್ಪು ಜಾರಿಗೊಳಿಸಲು ಇಲಾಖೆ ಮೀನಾಮೇಷ ಎನಿಸುತ್ತಿದೆ. ಇಲಾಖೆ ಮಾಡಿದ ತಪ್ಪಿನಿಂದಾಗಿ 1998ರಿಂದಲೂ ಮುಂಬಡ್ತಿ ಇಲ್ಲದೆ ಹಲವು ಸಿಬ್ಬಂದಿ ನಿವೃತ್ತರಾಗಿದ್ದಾರೆ. ಇಲಾಖೆಯಲ್ಲಿ ಸುಮಾರು 15 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವರು ನ್ಯಾಯಯುತವಾಗಿ ಸಿಗಬೇಕಾಗಿರುವ ಮುಂಬಡ್ತಿಯಿಂದ ವಂಚಿತರಾಗಿದ್ದಾರೆ. ಕೋರ್ಟ್‌ ತೀರ್ಪಿನಂತೆ ಅನರ್ಹರ ಬಡ್ತಿ ಹಿಂಪಡೆದು, ಅರ್ಹರಿಗೆ ನೀಡಬೇಕಾಗಿದೆ’ ಎಂದೂ ಅವರು ಹೇಳಿದರು.

ಈ ವಿಷಯಕ್ಕೆ ಸಂಬಂಧಿಸಿದ ಕಡತವನ್ನು ಮುಂದಿನ ಕ್ರಮಕ್ಕಾಗಿ ಕೌಶಲ ಅಭಿವೃದ್ಧಿ ಇಲಾಖೆಗೆ ಕಳುಹಿಸಿದ್ದು, ಉಪ ನಿರ್ದೇಶಕ ಮತ್ತು ಪ್ರಾಚಾರ್ಯ ಗ್ರೇಡ್– 1 ಹುದ್ದೆಗೆ ಬಡ್ತಿ ನೀಡುವಂತೆಯೂ ಶಿಫಾರಸು ಮಾಡಿದ್ದೇವೆ
ರಾಗಪ್ರಿಯ, ಆಯುಕ್ತರು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ
ಜೆಟಿಒ ಹುದ್ದೆಯಿಂದ ನೇರವಾಗಿ ಪ್ರಾಚಾರ್ಯ ಹುದ್ದೆಗೆ ಬಡ್ತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಕೋರ್ಟ್‌ ನೀಡಿರುವ ತೀರ್ಪಿನ ಅನ್ವಯ ಕ್ರಮ ತೆಗೆದುಕೊಳ್ಳುವ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ
ಉಮಾ ಮಹದೇವನ್‌, ಎಸಿಎಸ್‌, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ

‘ತಿದ್ದುಪಡಿ ನಿಯಮಬಾಹಿರ'

1985ರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಪ್ರಾಚಾರ್ಯರು ದರ್ಜೆ– 2, ಸಹಾಯಕ ನಿರ್ದೇಶಕ ಹುದ್ದೆಗಳಿಗೆ ಶೇ 50ರಷ್ಟು ನೇರ ನೇಮಕಾತಿ, ಉಳಿದ ಶೇ 50ರಷ್ಟನ್ನು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದ ತರಬೇತಿ ಅಧಿಕಾರಿಗಳ ವೃಂದದಿಂದ ಭರ್ತಿ ಮಾಡಲು ಅವಕಾಶವಿದೆ. ಈ ನಿಯಮವನ್ನು 1998ರಲ್ಲಿ ತಿದ್ದುಪಡಿ ಮಾಡಿದ ಇಲಾಖೆ, ಈ ಹುದ್ದೆಗಳಿಗೆ ಬಡ್ತಿಗೆ ಮೂರು ಪೂರಕ (ಫೀಡರ್) ವೃಂದಗಳನ್ನು ಸೃಜಿಸಿತ್ತು. ತಲಾ ಶೇ 33.33ರಂತೆ ನೇರ ನೇಮಕಾತಿ, ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದ ತರಬೇತಿ ಅಧಿಕಾರಿಗಳ ವೃಂದ ಮತ್ತು ಜೆಟಿಒ ಹುದ್ದೆಯಲ್ಲಿ ಕಾಯನಿರ್ವಹಿಸುತ್ತಿರುವ ಬಿ.ಇ ಎಂಜಿನಿಯರಿಂಗ್ ಪದವೀಧರರ ವರ್ಗಾವಣೆಯಿಂದ ಮುಂಬಡ್ತಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ತಿದ್ದುಪಡಿ ನಿಯಮ ಬಾಹಿರವೆಂದು ಇಲಾಖೆಯ ಅಧಿಕಾರಿಗಳಾದ ಬಿ. ಶಂಕರದೇವೆಗೌಡ ಮತ್ತು ಇತರರು ಕೆಎಟಿ ಮೆಟ್ಟಿಲೇರಿದ್ದರು. ಅಧಿಕಾರಿಗಳ ವಾದವನ್ನು ಕೆಎಟಿ ಎತ್ತಿ ಹಿಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.