ಮಡಿಕೇರಿ: 'ಆಪರೇಷನ್ ಕಮಲ, ಆಪರೇಷನ್ ಜೆಡಿಎಸ್ ಹೆಸರಿನಲ್ಲಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಸಾಧ್ಯವಿಲ್ಲ. ಹತಾಶರಾಗಿರುವವರು ಮಾತ್ರ ಇಂತಹ ಪ್ರಯತ್ನ ಮಾಡುತ್ತಾರೆ' ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.
ಕಳೆದ 25 ವರ್ಷಗಳ ಇತಿಹಾಸದಲ್ಲಿ ಇಷ್ಟೊಂದು ಬಹುಮತ ಬಂದಿದ್ದು, ಇದೇ ಮೊದಲು. ಹೀಗಾಗಿ ಯಾರೂ 'ಆಪರೇಷನ್'ಗೆ ಕೈ ಹಾಕಲ್ಲ. ಹಾಕುವುದಕ್ಕೂ ಸಾಧ್ಯವಿಲ್ಲ ಎಂದು ಅವರು ಇಲ್ಲಿನ ಕುಶಾಲನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
'ಒಂದು ವೇಳೆ ಅಂತಹ ಪ್ರಯತ್ನ ನಡೆಸಿದರೆ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ' ಎಂದು ಅಭಿಪ್ರಾಯಪಟ್ಟರು.
'ಹಾರಂಗಿ ಜಲಾಶಯ ಹಾಗೂ ಕಾವೇರಿ ನದಿ ತಟದ ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ. ನದಿ ತಟದಲ್ಲಿ ತಡೆಗೋಡೆ ನಿರ್ಮಾಣವಾಗಬೇಕು ಅಂತ ಸ್ಥಳಿಯರು ಹೇಳಿದ್ದಾರೆ. ಮತ್ತೆ ಕೆಲವರು ನದಿಯ ಹೂಳು, ಮರಳು ತೆಗೆಯಬೇಕು ಎನ್ನುತ್ತಿದ್ದಾರೆ. ಭತ್ತ, ಕಾಫಿ ಸೇರಿದಂತೆ ವಿವಿಧ ಬೆಳೆಗಳ ನಷ್ಟದ ಬಗ್ಗೆ ರೈತರೂ ಅಳಲು ತೋಡಿಕೊಂಡಿದ್ದಾರೆ. ಎಲ್ಲರ ಅಭಿಪ್ರಾಯ, ಮಾಹಿತಿ ಸಂಗ್ರಹಿಸಿ ಸಿಎಂ ಜೊತೆ ಚರ್ಚೆ ನಡೆಸುವೆ' ಎಂದರು.
'ಪ್ರಾಕೃತಿಕ ವಿಕೋಪ ಸಮಿತಿ ಪ್ರಾಕೃತಿಕ ವಿಕೋಪ, ಕಾರಣ, ಪರಿಹಾರ ಬಗ್ಗೆ ವರದಿ ತಯಾರಿಸುತ್ತಿದೆ. ಸಮಿತಿಯ ವರದಿಯನ್ನು ಆಧರಿಸಿ ಕೊಡಗಿಗೆ ವಿಶೇಷ ಪ್ಯಾಕೇಜ್ ಬಗ್ಗೆ ನಿರ್ಧಾರ ಮಾಡಲಾಗುವುದು' ಎಂದರು.
ನಾಳೆ ಸಿಎಂ ಅವರು ಡಿಸಿ ಸಿಇಒ ಹಾಗೂ ಉಸ್ತುವಾರಿಗಳ ಸಭೆ ನಡೆಸುತ್ತಾರೆ . ಸಭೆಯಲ್ಲಿ ಕೊಡಗಿನ ಬಗ್ಗೆ ಧ್ವನಿ ಎತ್ತಿ ಜಿಲ್ಲೆಯ ಪ್ರಾಕೃತಿಕ ವಿಕೋಪದ ಶಾಶ್ವತ ಪರಿಹಾರಕ್ಕೆ ಕ್ರಮಕ್ಕೆ ಒತ್ತಾಯಿಸುವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.