ಮಂಗಳೂರು: ‘ದೇಶವನ್ನು ಕಟ್ಟಲು ಇಸ್ರೇಲ್ ದೇಶವು ಮಸಾಡ ಕೋಟೆಯ ಕುರಿತಾದ ನಂಬಿಕೆಗಳ ವಿಚಾರದಲ್ಲಿ ಸುಳ್ಳನ್ನು ಪೋಷಿಸುತ್ತಾ ಬಂದಿದೆ. ನಮ್ಮ ದೇಶಕ್ಕೂ ಅಪಾಯವಾಗುವ ಸತ್ಯ ಇದ್ದರೆ, ಅದನ್ನು ಬಚ್ಚಿಡಬೇಕಾಗುತ್ತದೆ. ಚಾರಿತ್ರಿಕ ಆಭಾಸಗಳನ್ನು ಬದಿಗಿಟ್ಟು ದೇಶವನ್ನು ಕಟ್ಟಬೇಕಾಗುತ್ತದೆ’ ಎಂದು ಕಾದಂಬರಿಕಾರ ಕೆ.ಎನ್.ಗಣೇಶಯ್ಯ ಹೇಳಿದರು.
‘ಸಾಹಿತ್ಯ ಒಳನೋಟ– ಹೊರನೋಟ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಕನ್ನಡದಲ್ಲಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಬೇಕಾದ ಸಾಹಿತ್ಯ ಸಾಕಷ್ಟಿದೆ. ಆದರೆ, 10ರಿಂದ 20 ವರ್ಷದೊಳಗಿನವರಿಗೆ ಬೇಕಾದ ಸಾಹಿತ್ಯ ಕೊರತೆ ಇದೆ. ಈ ವಯೋವರ್ಗದವರನ್ನು ಸೆಳೆಯುವ ಸಾಹಿತ್ಯ ಸೃಷ್ಟಿಯಾಗಬೇಕಿದೆ’ ಎಂದರು.
‘ವಿಜ್ಞಾನ ಮತ್ತು ಕಲೆಯ ನಡುವಿನ ಗೋಡೆಯನ್ನು ಕೆಡವಬೇಕಿದೆ. ಇವೆರಡರ ಗುರಿಯೂ ಒಂದೇ– ಪ್ರಕೃತಿಯ, ವಿಶ್ವದ, ಒಳಗುಟ್ಟನ್ನು ಅರಿಯುವುದು. ಕತೆಗಾರ ಕಲ್ಪನೆಗೆ ಜೀವ ತುಂಬುವ ಮೂಲಕ ಇದನ್ನು ಸಾಧಿಸಲು ಹೊರಟರೆ, ವಿಜ್ಞಾನಿ ಸ್ವಯಂಸಿದ್ಧಗಳನ್ನು ರೂಪಿಸಿ, ಅವುಗಳನ್ನು ಸಾಬೀತುಗೊಳಿಸಲು ಯತ್ನಿಸುತ್ತಾನೆ’ ಎಂದರು.
‘ಪುಣ್ಯಕೋಟಿಯ ಕರುಣಾಜನಕ ಕಥೆಯಲ್ಲಿ, ಹುಲಿ ಸತ್ತಾಗ ನಾವು ಖುಷಿ ಪಡೋದು ಸರಿಯೇ ಎಂಬ ಪ್ರಶ್ನೆ ಕಾಡುತ್ತಿದೆ. ಹುಲಿಯನ್ನೂ ಬದುಕಿಸಬಹುದಿತ್ತಲ್ಲವೇ. ನಮ್ಮಲ್ಲಿರುವ ಎಷ್ಟೋ ಕತೆಗಳು ತಾರ್ಕಿಕವಾಗಿ ಪರಿಪೂರ್ಣವಲ್ಲ’ ಎಂದರು.
ಡಾ.ಸುಧೀಂದ್ರ ಪಿ.ಆರ್ ಸಂವಾದ ನಡೆಸಿಕೊಟ್ಟರು.
**
ಭ್ರಮೆ ಕಳಚಿದ್ದಕ್ಕೆ ಸಂತೋಷಪಡಬೇಕು:ತೋಳ್ಪಾಡಿ
‘ಭ್ರಮನಿರಸನ ಆಯಿತು ಎಂದು ಬೇಸರದಿಂದ ಹೇಳಿಕೊಳ್ಳುತ್ತೇವೆ. ನಮ್ಮ ಭ್ರಮೆ ಕಳಚಿದ್ದಕ್ಕೆ ಬೇಸರವಲ್ಲ, ಸಂತೋಷಪಡಬೇಕು’ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
‘ಅತ್ಯುನ್ನತ ತತ್ವ: ದುರ್ಬಲ ಸಮಾಜ – ವಿರೋಧಾಭಾಸದ ಒಳನೋಟ’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು,‘ಸತ್ಯ ಎಂದರೆ ಇರುವಿಕೆಯ ಅರಿವು. ನಾನು ಇದ್ದೇನೆ ಎಂದು ನಮಗೇ ಅರಿವಾಗುವ ಪರಿ ಇದು. ಇದೇ ಉನ್ನತ ತತ್ವ. ಇರುವಿಕೆಯನ್ನು ಅರಿಯುವ ಬದಲು ಹೀಗೆ ಇದ್ದೇನೆ ಎಂದು ತೋರಿಸಿಕೊಳ್ಳುವುದಕ್ಕೇ ಹೆಚ್ಚು ಗಮನ ಕೊಡುತ್ತೇವೆ. ಇರುವಿಕೆಗೆ ತೋರಿಕೆಯೇ ಅಡ್ಡಿ. ಲೋಕ ಮೆಚ್ಚಿದರೆ ನಾನು ಬದುಕಿದ್ದು ಸಾರ್ಥಕ ಎಂದು ಭಾವಿಸುತ್ತೇವೆ. ಈ ಬಹಿರ್ಮುಖ ಪ್ರವೃತ್ತಿಯೇ ಇರುವಿಕೆಗೆ ಮಾಡುವ ದ್ರೋಹ. ನಮಗೆಲ್ಲರಿಗೂ ಸತ್ಯ ಗೊತ್ತಿದೆ. ಆದರೆ, ಹೇಳಿಕೊಳ್ಳುವುದಕ್ಕೆ ಹೆದರಿಕೆ’ ಎಂದರು.
‘ಧರ್ಮ ಎಂದರೆ ಧಾರಣಾ ಸಾಮರ್ಥ್ಯ. ಭ್ರಮನಿರಸನದ ಆಘಾತವನ್ನು ತಾಳಿಕೊಳ್ಳುವುದೂ ಧರ್ಮ. ನನ್ನ ಇರುವಿಕೆಯನ್ನು ಯಾರೂ ಏನೂ ಮಾಡಲಾಗುವುದಿಲ್ಲ. ಈ ಅರಿವಿದ್ದರೆ ಯಾವ ಭಯವೂ ಇರದು. ನಮ್ಮ ಇರುವಿಕೆ ಕುರಿತ ಅರಿವು ಬದಲಾಗುವುದೇ ಹೆದರಿಕೆಯ ಮೂಲ. ಭಯವಿರುವುದರಿಂದಲೇ ಭಯೋತ್ಪಾದನೆಯೂ ಇರುತ್ತದೆ. ಆ ಭಯ ಇಲ್ಲದಿದ್ದರೆ ಭಯೋತ್ಪಾದನೆಯೂ ಇರುವುದಿಲ್ಲ’ ಎಂದರು.
ಸಂವಾದವನ್ನು ಪ್ರೊ.ನಂದನ ಪ್ರಭು ನಡೆಸಿಕೊಟ್ಟರು.
**
‘ಧರ್ಮ ಎಂದರೆ ರಿಲಿಜನ್ ಅಲ್ಲ’
‘ಧರ್ಮವೆಂದರೆ ರಿಲಿಜನ್ ಅಲ್ಲ. ಈ ರೀತಿ ಭಾಷಾಂತರ ಮಾಡಿದರೆ ಅರ್ಥ ಕೆಡುತ್ತದೆ. ಅವರು ತಮ್ಮ ರಿಲಿಜನ್‌ನ ಏಕತ್ವದ ರೂಪದಲ್ಲೇ ಬಹುತ್ವದ ಹಿಂದೂ ಧರ್ಮವನ್ನು ನೋಡುತ್ತಾರೆ. ನಮ್ಮ ಧರ್ಮದಲ್ಲಿ ದೇವರಿಗೆ ಅನೇಕ ರೂಪಗಳಿವೆ. ವಿಶಾಲ ಮತ್ತು ಸಂಕೀರ್ಣವಾದ ಈ ಪರಿಕಲ್ಪನೆಯನ್ನು ಹೊರಗಿನವರಿಗೆ ಊಹಿಸಲು ಸಾಧ್ಯವಾಗದು’ ಎಂದು ಲೇಖಕ ಅಜಕ್ಕಳ ಗಿರೀಶ್ ಭಟ್ ಅಭಿಪ್ರಾಯಪಟ್ಟರು.
‘ಬಹುವಚನಕ್ಕೊಂದೇ ತತ್ವ’ ಪುಸ್ತಕದ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ‘ನನ್ನ ಜಾತಿಯೇ ಶ್ರೇಷ್ಠ ಎಂದು ಯಾರಾದರೂ ಹೇಳಿದರೆ, ಅದನ್ನು ಒಪ್ಪಿಕೊಳ್ಳುವವರು ಯಾರು ಇಲ್ಲ. ಹಾಗೆ ಒಪ್ಪಿಕೊಂಡವರನ್ನೂ ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ನನ್ನ ಧರ್ಮ ಶ್ರೇಷ್ಠ ಎಂದು ವಾದಿಸುವುದರಲ್ಲಿ ತಪ್ಪಿಲ್ಲ’ ಎಂದರು.
ಸಂವಾದವನ್ನು ಲೇಖಕ ರೋಹಿತ್ ಚಕ್ರತೀರ್ಥ ನಡೆಸಿಕೊಟ್ಟರು.
**
‘ಸ್ವಾತಂತ್ರ್ಯೋತ್ತರ ಭಾರತ– ಗೋವಿಂದ ಪೈಗೆ ನಿರಾಸೆ’
‘ಗಾಂಧೀಜಿ ಅನುಯಾಯಿಯಾಗಿದ್ದ ರಾಷ್ಟ್ರಕವಿ ಗೋವಿಂದ ಪೈ ಅವರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆಗಿದ್ದ ಬೆಳವಣಿಗೆಗಳ ಬಗ್ಗೆ ಭ್ರಮನಿರಸನಗೊಂಡಿದ್ದರು. ‘ರಾಹುವನ್ನು ತೊಲಗಿಸಿ ಕೇತುವನು ತಂದೆವು’ ಎಂದೇ ಬರೆದಿದ್ದಾರೆ’ ಎಂದು ವಿಮರ್ಶಕ ಡಾ.ವರದರಾಜ ಚಂದ್ರಗಿರಿ ಹೇಳಿದರು.
‘ರಾಷ್ಟ್ರಕವಿ ಗೋವಿಂದ ಪೈ– ಒಂದು ಸ್ಮರಣೆ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಡೆದ ಭಾರತ ಮತ್ತೆ ಒಂದಾಗಬೇಕು ಎಂಬುದು ಗೋವಿಂದ ಪೈ ಅವರ ಕನಸಾಗಿತ್ತು’ ಎಂದರು.
ವಿದ್ವಾಂಸ ಪಾದೆಕಲ್ಲು ವಿಷ್ಣುಭಟ್, ‘ಕನ್ನಡ ಇತಿಹಾಸದ ಸಂಶೋಧನೆಗೆ ಅಡಿಪಾಯ ಹಾಕಿದ ಮಹಾನೀಯರಲ್ಲಿ ಅಗ್ರಮಾನ್ಯರು. ಅಖಿಲಭಾರತ ಮಟ್ಟದ ವ್ಯಾಪ್ತಿ ಮತ್ತು ದೃಷ್ಟಿಯನ್ನು ಹೊಂದಿದ್ದ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ’ ಎಂದರು.
**
‘ಭೂತಾರಾಧನೆ ವೈದಿಕವೂ ಅಲ್ಲ ಅವೈದಿಕವೂ ಅಲ್ಲ’
‘ಭೂತಾರಾಧನೆ ವೈದಿಕವೂ ಅಲ್ಲ ಅವೈದಿಕವೂ ಅಲ್ಲ, ಈ ಆಚರಣೆ ಜಾನಪದ. ಭೂತಾರಾಧನೆ ಮೂಢನಂಬಿಕೆ ಆದ್ರೆ, ಎಲ್ಲವೂ ಮೂಢನಂಬಿಕೆ ಎಂದು ಸಂಶೋಧಕಿ ಡಾ. ಇಂದಿರಾ ಹೆಗ್ಡೆ ಹೇಳಿದರು.
‘ಸಂಸ್ಕೃತಿ, ರೇಖಾಚಿತ್ರ ಮತ್ತು ಸೃಜನಶೀಲತೆ’ ಗೋಷ್ಠಿಯಲ್ಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಶ್ರೇಣೀಕೃತ ವ್ಯವಸ್ಥೆಯಲ್ಲಿ ಭೂತಗಳ ಆರಾಧನೆ ನಡೆಯುತ್ತದೆ. ತುಳುನಾಡಿನಲ್ಲಿ ಅರಸು ದೈವ ಅಂತ ಒಂದಿರುತ್ತದೆ. ಉಳಿದವು ಪರಿವಾರ ದೈವಗಳು. ಶಿಷ್ಟ ದೇವತೆ ಅಥವಾ ಗ್ರಾಮದೇವತೆ ಮಧ್ಯೆ ವ್ಯತ್ಯಾಸಗಳಿಲ್ಲ’ ಎಂದರು.
‘ಕರ್ನಾಟಕದ ಭಾಗವೇ ಆಗಿದ್ದರೂ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ತುಳುನಾಡಿಗೆ ಪ್ರತ್ಯೇಕ ಅಸ್ಮಿತೆ ಇದೆ. ತುಳು ಸಂಸ್ಕೃತಿ ಬಹಳ ವಿಶಾಲ’ ಎಂದರು.
ಸತ್ಯಬೋಧ ಜೋಶಿ, ‘ಭೂತಾರಾಧನೆ ನಡೆಯುವುದು ಕಲೆಗಾಗಿ ಕಲೆ ಅಲ್ಲ. ಅದರ ಹಿಂದೆ ಕಾರಣಿಕದ ಶಕ್ತಿ ಅಡಗಿದೆ’ ಎಂದರು.
ಡಾ. ಅಶ್ವಿನಿ ದೇಸಾಯಿ, ‘ಭಾರತೀಯ ಆಚರಣೆಗಳನ್ನು ನಂಬಿಕೆ ಎನ್ನುವ ಹಾಗೂ ಮೂಢನಂಬಿಕೆ ಎನ್ನುವ ವರ್ಗಗಳಿವೆ. ಎಲ್ಲಾ ಆಚರಣೆಗಳಿಗೂ ವೈಜ್ಞಾನಿಕ ವಿವರಣೆ ಕೊಡುವುದನ್ನೂ ಕಾಣುತ್ತಿದ್ದೇವೆ. ಇಂತಹ ವಿವರಣೆ ಅಗತ್ಯವೇ? ನಮ್ಮ ಪೂರ್ವಜರು ದಾಟಿಸಿರುವ ಆಚರಣೆಗಳು ಇವು. ಅವರು ಮಾಡುತ್ತಿದ್ದರು, ನಾವು ಮುಂದುವರಿಸುತ್ತಿದ್ದೇವೆ ಎಂದರೆ ಸಾಕಲ್ಲವೇ‘ ಎಂದರು.
**
‘ಇತಿಹಾಸದ ಪುಟದಲ್ಲಿ ಚೆನ್ನಭೈರಾದೇವಿ ಏಕಿಲ್ಲ’
‘ಗೇರುಸೊಪ್ಪಾ ಕೇಂದ್ರವಾಗಿರಿಸಿ 54 ವರ್ಷ ರಾಜ್ಯಭಾರ ಮಾಡಿದ ಚೆನ್ನಭೈರಾದೇವಿಯಂತಹ ರಾಣಿಯ ಬಗ್ಗೆ ಇತಿಹಾಸದಲ್ಲಿ ಏಕೆ ದಾಖಲಾಗಿಲ್ಲ ಎಂಬುದು ಚೋದ್ಯ’ ಎಂದು ‘ಚೆನ್ನಭೈರಾದೇವಿ : ಕರಿಮೆಣಸಿನ ರಾಣಿಯ ಅಕಳಂಕ ಚರಿತೆ’ ಕೃತಿಯ ಲೇಖಕ ಡಾ. ಗಜಾನನ ಶರ್ಮ ಹೇಳಿದರು.
‘ಈಗಲೂ ರಸ್ತೆಯಿರದ ಊರುಗಳಲ್ಲಿ ಆ ರಾಣಿ ಆ ಕಾಲದಲ್ಲಿ ಹೆದ್ದಾರಿ ನಿರ್ಮಿಸಿದ್ದಳು. ಸಾವಿರಾರು ಬಾವಿಗಳನ್ನು ತೋಡಿಸಿದ್ದಳು. ಅವುಗಳ ಭಗ್ನಾವಶೇಷಗಳು ಈಗಲೂ ಇವೆ. ವಿರೋಧಿಗಳು ಆಕೆಯ ಕುರಿತಾಗಿ ಕಳಂಕಿತ ಮಾತುಗಳನ್ನಾಡಿರಬಹುದು. ಸ್ಥಳೀಯರ ಕತೆಗಳಲ್ಲಿ ಆಕೆಯ ಬಗ್ಗೆ ಒಳ್ಳೆಯ ಮಾತುಗಳನ್ನೇ ಕೇಳಬಹುದು’ ಎಂದು ಹಾಗಾಗಿ ನನ್ನ ಮಿತಿಗೆ ಒಳಪಟ್ಟು ಸಂಶೋಧನೆ ಮಾಡಿ ಕಾದಂಬರಿ ಬರೆದೆ ಎಂದರು.
ಕಾದಂಬರಿಕಾರ ವಿದ್ವಾನ್ ಜಗದೀಶ ಶರ್ಮಾ ಸಂಪ ‘ಭೀಷ್ಮ, ಪಾಂಡು, ಧೃತರಾಷ್ಟ್ರ, ದುರ್ಯೋಧನ ಹಾಗೂ ಯುಧಿಷ್ಠಿರ ಅವರ ರಾಜ್ಯಭಾರದ ಹಿಂದಿದ್ದ ಶಕ್ತಿ ವಿದುರ. ವಿದುರನಂತಹವರು ಇಲ್ಲದೇ ಇರುವುದರಿಂದಲೇ ರಾಜಕಾರಣ ಈ ಸ್ಥಿತಿಯನ್ನು ತಲುಪಿದೆ’ ಎಂದರು.
ಸಂವಾದವನ್ನು ಡಾ.ವಿಜಯಾ ಸರಸ್ವತಿ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.