ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಐವಿಎಫ್ ಚಿಕಿತ್ಸಾ ವೆಚ್ಚ ಅಧಿಕ ಇರುವುದರಿಂದ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಚಿಕಿತ್ಸೆಯ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾಗಿದೆ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ವಾಣಿವಿಲಾಸ ಆಸ್ಪತ್ರೆಯು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಈ ಬಗ್ಗೆ ಪ್ರಸ್ತಾವ ಸಲ್ಲಿಸಿತ್ತು.
‘ಬದಲಾದ ಜೀವನಶೈಲಿಯಿಂದ ಜನರಲ್ಲಿ ಫಲವತ್ತತೆ ದರ ಕುಸಿಯುತ್ತಿದೆ. ಇದರಿಂದಾಗಿ ಐವಿಎಫ್ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ,ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗೆ ವೆಚ್ಚ ಭರಿಸುವುದು ಬಡ, ಮಧ್ಯಮ ವರ್ಗದವರಿಗೆ ಸವಾಲಾಗಿದೆ. ಆದ್ದರಿಂದ ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಚಿಕಿತ್ಸೆ ಪ್ರಾರಂಭಿಸುವ ಅಗತ್ಯವಿದೆ’ ಎಂದು ಡಾ.ಕೆ. ಸುಧಾಕರ್ ತಿಳಿಸಿದರು.
‘ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಐವಿಎಫ್ ಕ್ಲಿನಿಕ್‌ಗಳನ್ನು ಸ್ಥಾಪಿಸುವ ಯೋಜನೆಯಿದೆ. ಕೈಗೆಟುಕುವ ದರ ಅಥವಾ ಉಚಿತವಾಗಿ ಈ ಚಿಕಿತ್ಸೆಯನ್ನು ಒದಗಿಸಲಾಗುವುದು’ ಎಂದು ಹೇಳಿದರು.
‘ಐವಿಎಫ್ ಕ್ಲಿನಿಕ್‌ಗಳಿಗೆ ಪ್ರತ್ಯೇಕವಾಗಿ ಮೂಲಸೌಕರ್ಯ ಹಾಗೂ ಉಪಕರಣಗಳನ್ನು ಒದಗಿಸಬೇಕಾಗುತ್ತದೆ. ಮಾನವ ಸಂಪನ್ಮೂಲವೂ ಅಗತ್ಯವಿರುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು’ ಎಂದು ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.