ಚೆನ್ನೈ: ರಾಜಕೀಯ ನಾಯಕರಿಗೆ ಅಗೌರವ ತೋರುವಂಥ ಸುದ್ದಿ, ಲೇಖನಗಳನ್ನು ಪ್ರಕಟಿಸದಂತೆ ಮದ್ರಾಸ್ ಹೈಕೋರ್ಟ್ ತಮಿಳು ಪತ್ರಿಕೆ ‘ದಿನಮಲರ್’ಗೆ ತಾಕೀತು ಮಾಡಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಪತ್ರಿಕೆಯ ಲೇಖನವೊಂದರಲ್ಲಿ ‘ಜೆ’ ಎಂದು ಸಂಬೋಧಿಸಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಐಪಿಸಿಯ ಸೆಕ್ಷನ್ 500, 501 ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ರದ್ದುಗೊಳಿಸುವಂತೆ ಪತ್ರಿಯ ಮಾಜಿ ಸಂಪಾದಕ ಮತ್ತು ಪ್ರಕಾಶಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಪತ್ರಿಕೆಗೆ ಸೂಚನೆ ನೀಡಿದೆ. ಈ ಕುರಿತು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‘ ವರದಿ ಮಾಡಿದೆ.
"ಅವರನ್ನು ಗೌರವಾನ್ವಿತ ಮುಖ್ಯಮಂತ್ರಿ ಜೆ. ಜಯಲಲಿತಾ ಎಂದು ಕರೆಯಬೇಕೇ ಹೊರತು 'ಜೆ' ಎಂದು ಕರೆಯಬೇಕಾಗಿರಲಿಲ್ಲ. ದೇಶ ಅಥವಾ ರಾಜ್ಯದ ನಾಯಕರಿಗೆ ಸಂಬಂಧಿಸಿದ ವಿಷಯಗಳನ್ನು ಮುದ್ರಿಸಿ ಪ್ರಕಟಿಸುವಾಗ, ಅವರಿಗೆ ಗೌರವ ಸೂಚಿಸಬೇಕು. ಅದಕ್ಕೆ ತಕ್ಕಂತೆ ಅವರನ್ನು ಉಲ್ಲೇಖಿಸಬೇಕು,‘ ಎಂದು ನ್ಯಾಯಮೂರ್ತಿ ಭವಾನಿ ಸುಬ್ಬರಾಯನ್ ಅಭಿಪ್ರಾಯಪಟ್ಟರು.
ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯನ್ನು ಮಾನಹಾನಿ ಮಾಡಿದ್ದಕ್ಕೆ ಸಂಬಂಧಿಸಿದಂತೆ ಐಪಿಸಿಯ ಸೆಕ್ಷನ್ 199 (2) ರ ಅಡಿಯಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅರ್ಜಿದಾರರು ಕೋರ್ಟ್‌ನಲ್ಲಿ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.