ADVERTISEMENT

ಮಲಹೊರುವ ಪದ್ಧತಿ ನಿಷೇಧ: ಮಾಹಿತಿ ಒದಗಿಸಲು ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 16:41 IST
Last Updated 2 ಜುಲೈ 2024, 16:41 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ರಾಜ್ಯದಲ್ಲಿ ಮಲಹೊರುವ ಪದ್ಧತಿಯ ಆಮೂಲಾ‌ಗ್ರ ನಿಮೂರ್ಲನೆಗಾಗಿ ಅನುಷ್ಠಾನಗೊಳಿಸಲಾಗಿರುವ, ‘ಮಲಹೊರುವ ಜಾಡಮಾಲಿಗಳ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಕಾಯ್ದೆಯ ಅನುಸಾರ ಕೈಗೊಂಡಿರುವ ಕ್ರಮಗಳ ಮಾಹಿತಿ ಒದಗಿಸಿ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತಂತೆ, ‘ಆಲ್ ಇಂಡಿಯನ್ ಸೆಂಟ್ರಲ್ ಕೌನ್ಸಿಲ್ ಟ್ರೇಡ್ ಯೂನಿಯನ್ಸ್‌’ ಅಧ್ಯಕ್ಷೆ ಮೈತ್ರೇಯಿ ಕೃಷ್ಣನ್‌ ಮತ್ತು ಹೈಕೋರ್ಟ್ ಕಾನೂನು ಸೇವೆಗಳ ಪಾಧಿಕಾರದ ಮುಖಾಂತರ ದಾಖಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಕಾಯ್ದೆಯ ಅನುಸಾರ ರೂಪಿಸಲಾಗಿರುವ ನಿಯಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ವಿಫಲವಾಗಿದೆ. ಕಲಂ 26ರ ಪ್ರಕಾರ ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ವರ್ಷದಲ್ಲಿ ಎರಡು ಬಾರಿ ರಾಜ್ಯಮಟ್ಟದ ಸಭೆಗಳನ್ನು ನಡೆಸಬೇಕು. ಆದರೆ, ಪ್ರಸಕ್ತ ವರ್ಷದಲ್ಲಿ ಆರು ತಿಂಗಳು ಕಳೆದರೂ ಒಂದೇ ಒಂದು ಸಭೆ ನಡೆಸಿಲ್ಲ’ ಎಂದು ಆಕ್ಷೇಪಿಸಿದರು.

ADVERTISEMENT

ಇದಕ್ಕೆ ಸರ್ಕಾರದ ಪರ ವಕೀಲರು, ‘ಲೋಕಸಭೆ ಚುನಾವಣೆ ನಿಗದಿಯಾಗಿದ್ದ ಕಾರಣ ಸಭೆ ನಡೆಸಲು ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಸಭೆ ನಡೆಸಲಾಗುವುದು. ಅದಕ್ಕಾಗಿ ಇನ್ನಷ್ಟು ಕಾಲಾವಕಾಶ ನೀಡಬೇಕು. ಈ ಸಂಬಂಧ ಸರ್ಕಾರದಿಂದ ಅಗತ್ಯ ಮಾಹಿತಿ ಪಡೆದು ತಿಳಿಸಲಾಗುವುದು’ ಎಂದು ನ್ಯಾಯಪೀಠಕ್ಕೆ ಉತ್ತರಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಮಾಹಿತಿ ಒದಗಿಸುವಂತೆ ತಿಳಿಸಿ ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.