ಬೆಂಗಳೂರು: ‘ಎಕ್ಸ್ ಚೀಫ್ ಮಿನಿಸ್ಟರ್ ಜಗದೀಶ ಶೆಟ್ಟರ್ ಫಿರ್ ಬನ್‌ಗಯಾ ಮಿನಿಸ್ಟರ್’
ಈ ರೀತಿಯ ಹಾಸ್ಯ ಮಿಶ್ರಿತ ಕುಹಕದ ಮಾತುಗಳು ಮಂಗಳವಾರ ವಿಧಾನಸೌಧದ ಪಡಸಾಲೆಯಲ್ಲಿ ಕೇಳಿ ಬಂತು. ಸುಮಾರು 10 ತಿಂಗಳು ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡಿದ್ದ ಜಗದೀಶ ಶೆಟ್ಟರ್ ಮತ್ತೆ ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಸಚಿವರಾಗಿ ಸೇರ್ಪಡೆಗೊಂಡಿರುವುದು ಸಾಕಷ್ಟು ಜನರ ಹುಬ್ಬೇರಿಸಿದೆ.
ಈ ಹಿಂದೆ ಬಿ.ಡಿ.ಜತ್ತಿ ಅವರು ಮುಖ್ಯಮಂತ್ರಿಯಾಗಿ (1958), ಬಳಿಕ ಸಚಿವರಾಗಿದ್ದು (1965) ಬಿಟ್ಟರೆ, ರಾಜ್ಯದಲ್ಲಿ ಬೇರೆ ಯಾವುದೇ ಮುಖ್ಯ ಮಂತ್ರಿ ಸಚಿವ ಸ್ಥಾನಕ್ಕೆ ಹಿಂಬಡ್ತಿ ಪಡೆದ ಉದಾಹರಣೆ ಇಲ್ಲ. ಶೆಟ್ಟರ್ ಅವರ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳೂ ಕೇಳಿ ಬಂದಿವೆ.
‘ಮತ್ತೆ ಸಚಿವರಾಗುವುದರ ಬದಲು ಯುವಕರಿಗೆ ಸ್ಥಾನ ಬಿಟ್ಟುಕೊಡಬೇಕಿತ್ತು. ಹಿಂಬಡ್ತಿ ಪಡೆದರೂ ಅಡ್ಡಿ ಇಲ್ಲ. ಅಧಿಕಾರದಲ್ಲಿ ಇರಬೇಕು ಎಂಬ ಧೋರಣೆ ಪ್ರಜಾಪ್ರಭುತ್ವಕ್ಕೆ ತಕ್ಕುದಲ್ಲ’ ಎಂಬ ಮಾತುಗಳೂ ಕೇಳಿ ಬಂದಿದೆ.
ಒಲಿದು ಬಂದ ಸ್ಥಾನಗಳು: ಬಿಜೆಪಿಯಲ್ಲಿ ಎಲ್ಲ ಹುದ್ದೆಗಳು ಅನಾಯಾಸವಾಗಿ ಒಲಿದು ಬಂದಿದ್ದು ಜಗದೀಶ ಶೆಟ್ಟರ್ ಅವರಿಗೆ ಮಾತ್ರ. 1994 ರಲ್ಲಿ ಮೊದಲ ಬಾರಿಗೆ ಶಾಸಕರಾದರು. 1999 ರಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಆಯ್ಕೆಯಾದರು. ಆಗ ಶೆಟ್ಟರ್‌ಗಿಂತಲೂ ಹಿರಿಯ ನಾಯಕರಾಗಿ ತಮ್ಮದೇ ಆದ ಛಾಪು ಬೀರಿದ್ದ, ಬಿ.ಬಿ.ಶಿವಪ್ಪ ಅವರು ವಿರೋಧ ಪಕ್ಷದ ನಾಯಕ ರಾಗುವುದನ್ನು ತಪ್ಪಿಸ ಲಾಯಿತು. ಆ ಚುನಾವಣೆಯಲ್ಲಿ ಯಡಿಯೂರಪ್ಪ, ಈಶ್ವರಪ್ಪ ಸೇರಿ ಹಲವು ಪ್ರಬಲ ನಾಯಕರು ಸೋತು ಹೋಗಿದ್ದರು.
2005ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ರಾಗಿದ್ದರು. 2006ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕಂದಾಯ ಸಚಿವರಾದರು. 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೆಟ್ಟರ್‌ಗೆ ಮಂತ್ರಿ ಸ್ಥಾನ ನೀಡದೆ, ಸಭಾಧ್ಯಕ್ಷರ ಹುದ್ದೆ ನೀಡಿದರು. 2009 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಮಾಡಿದಾಗ, ಶೆಟ್ಟರ್ ಮತ್ತೆ ಮಂತ್ರಿಯಾದರು. 2012 ರಲ್ಲಿ ಸದಾನಂದಗೌಡ ಅವರ ವಿರುದ್ಧ ಅಸಮಾಧಾನಗೊಂಡ ಬಿಎಸ್‌ವೈ ಶೆಟ್ಟರ್ ಅವರನ್ನೇ ಮುಖ್ಯಮಂತ್ರಿಯಾಗಿಸಿದರು.
ಮತ್ತೆ ಸಚಿವರಾದ ಡಿಸಿಎಂಗಳು
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿದ್ದ ಆರ್.ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪ ಈಗ ಮತ್ತೆ ಸಚಿವರಾಗಿದ್ದಾರೆ. ಈ ಬಾರಿಯೂ ಉಪಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದರು. ಈಗಿನ ರಾಜಕೀಯ ಸನ್ನಿವೇಶದಲ್ಲಿ ಹೆಚ್ಚಿನದನ್ನು ನಿರೀಕ್ಷಿಸಲಾಗದ ಇವರು ಪಾಲಿಗೆ ಸಿಕ್ಕಿದ್ದು ಪಂಚಾಮೃತ ಎಂಬಂತೆ ಸ್ವೀಕರಿಸಿದ್ದಾರೆ. ಇದೂ ಕೂಡ ಹಿಂಬಡ್ತಿ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.