ಬೆಂಗಳೂರು: ‘ಯೂರೋಪ್‌ನಲ್ಲಿದ್ದ ಸಾಂಸ್ಕೃತಿಕ ರಾಷ್ಟ್ರೀಯವಾದದಿಂದ ಪ್ರಭಾವಿತರಾಗಿ, ಸಾವರ್ಕರ್ ಮೂಲಭೂತವಾದವನ್ನು ರೂಪಿಸಿಕೊಂಡಿದ್ದರು. ಈ ಮೂಲಭೂತವಾದವನ್ನು ಎದುರಿಸುವುದು ಗಾಂಧೀವಾದದಿಂದ ಮಾತ್ರ ಸಾಧ್ಯ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧೀರೇಂದ್ರ ಕೆ. ಝಾ ಅವರ ಗಾಂಧೀ’ಸ್ ಅಸಾಸಿನ್ ಪುಸ್ತಕದ ಕನ್ನಡ ಅನುವಾದ ಕೃತಿ, ‘ಗಾಂಧಿಯ ಹಂತಕ’ವನ್ನು ಬಿಡುಗಡೆ ಮಾಡಿದರು. ನಂತರ, ‘ಗೋಡ್ಸೆ ಮನಸ್ಥಿತಿಯನ್ನು ಎದುರಿಸುವ ಬಗೆ’ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.
‘ಮೂಲಭೂತವಾದಿ ರಾಷ್ಟ್ರವನ್ನು ರೂಪಿಸಲು ಹೊರಟಿದ್ದ ಅವರಿಗೆ ಅಡ್ಡವಾಗಿ ನಿಂತಿದ್ದುದು ಗಾಂಧಿ. ಇಂದೂ ಗೋಡ್ಸೆ ಮನಸ್ಥಿತಿಯವರು ಇದ್ದು, ಮೂಲಭೂತವಾದವನ್ನು ವಿರೋಧಿಸುವ ಎಲ್ಲರನ್ನೂ ಶತ್ರುಗಳು ಎಂದೇ ಬಿಂಬಿಸುತ್ತಿದ್ದಾರೆ, ಅವರನ್ನು ಪಾಕಿಸ್ತಾನೀಯರು ಎನ್ನುತ್ತಾರೆ. ಈಚೆಗೆ ಒಬ್ಬ ವ್ಯಕ್ತಿ, ನನ್ನ ಮನೆಯಲ್ಲೂ ಅರ್ಧ ಪಾಕಿಸ್ತಾನವಿದೆ ಎಂದು ಹೇಳಿದ್ದರು. ಆ ಮೂಲಕ ನಮ್ಮ ದೇಶಪ್ರೇಮವನ್ನು ಪ್ರಶ್ನಿಸಿದ್ದರು. ಈ ಸಂಚನ್ನು ಜನರಿಗೆ ಅರ್ಥಮಾಡಿಸಬೇಕು’ ಎಂದರು.
‘ಗೋಡ್ಸೆವಾದದ ವಿರುದ್ಧದ ಈ ಹೋರಾಟದಲ್ಲಿ ಸಂಪ್ರದಾಯವಾದಿಗಳನ್ನೂ ಒಳಗೊಳ್ಳಬೇಕು’ ಎಂದರು.
ಪುಸ್ತಕದ ಅನುವಾದಕರಲ್ಲಿ ಒಬ್ಬರಾದ ಅಂಕಣಕಾರ ಎ.ನಾರಾಯಣ, ‘ಬ್ರಿಟಿಷರಿಂದ ಬಿಡಿಸಿಕೊಂಡು, ಸರ್ವಸಮಾನ ದೇಶವನ್ನಾಗಿ ರೂಪಿಸುವುದು ಮುಖ್ಯವಾಹಿನಿಯ ಮತ್ತು ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟದ ಉದ್ದೇಶವಾಗಿತ್ತು. ಆದರೆ ಬ್ರಿಟಿಷರಿಂದ ಬಿಡಿಸಿಕೊಂಡು, ಪುರೋಹಿತಶಾಹಿ ಆಳ್ವಿಕೆಯ ದೇಶವನ್ನು ರೂಪಿಸುವುದು ಸಾವರ್ಕರ್ ಅವರ ವಾದವಾಗಿತ್ತು. ಇದಕ್ಕೆ ವಿರೋಧಿಯಾಗಿ ನಿಂತಿದ್ದರಿಂದಲೇ ಅವರೆಲ್ಲರೂ ಸೇರಿ ಗಾಂಧಿಯನ್ನು ಹತ್ಯೆ ಮಾಡಿದರು’ ಎಂದರು.
‘ಗಾಂಧೀವಾದಿಗಳ ಸಂಖ್ಯೆ ಈಗ ಕ್ಷೀಣಿಸಿದೆ. ಆದರೆ ದೇಶದೆಲ್ಲೆಡೆ ಗೋಡ್ಸೆ ಸಂತತಿ ಹೆಚ್ಚಾಗುತ್ತಿದೆ. ಗಾಂಧೀವಾದದ ಮೂಲಕವೇ ಇವರನ್ನು ಎದುರಿಸಬೇಕು’ ಎಂದರು.
‘ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂಬುದು ಅವರ ಅಭಿಮಾನಿಗಳ ವಾದ. ಬ್ರಿಟಿಷರು ಅವರನ್ನು ಜೈಲಿಗೂ ಹಾಕಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರನ್ನು ಎದುರಿಸುವುದು ಕಷ್ಟ’ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎ.ನಾರಾಯಣ ‘ಸಾವರ್ಕರ್ ತಮ್ಮ ಬರಹವೊಂದರಲ್ಲಿ ‘ಹಿಂದೂ ಯುವಕರು ಬ್ರಿಟಿಷರ ವಿರುದ್ಧ ಹೋರಾಡಬಾರದು’ ಎಂದು ಬರೆದಿದ್ದಾರೆ ಎಂಬುದರ ಉಲ್ಲೇಖ ಈ ಪುಸ್ತಕದಲ್ಲಿ ಇದೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಾಗಿರಲಿಲ್ಲ ಎಂಬುದನ್ನು ಈ ಪುಸ್ತಕದಲ್ಲಿ ದಾಖಲೆ ಸಮೇತ ವಿವರಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.