ADVERTISEMENT

ಮೋದಿಯಿಂದ ದ್ವೇಷ ಭಾಷಣ: ಜಾಗೃತ ನಾಗರಿಕರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 15:43 IST
Last Updated 22 ಏಪ್ರಿಲ್ 2024, 15:43 IST
   

ಬೆಂಗಳೂರು: ‘ಕಾಂಗ್ರೆಸ್ ಪಕ್ಷವು ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಿದೆ. ಭೂಮಿ, ಒಡವೆ- ವಸ್ತು, ಕಡೆಗೆ ಹೆಣ್ಣು ಮಕ್ಕಳ ಮಂಗಳ ಸೂತ್ರವನ್ನು ಸಹ ಅವರಿಗೇ ಕೊಟ್ಟುಬಿಡಲಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ದ್ವೇಷ ಭಾಷಣದ ಅತ್ಯಂತ ಕೆಟ್ಟ, ಉಗ್ರವಾದ ಮಾದರಿ’ ಎಂದು ಜಾಗೃತ ನಾಗರಿಕರು–ಕರ್ನಾಟಕ ಸಂಘಟನೆ ಟೀಕಿಸಿದೆ.

‘ಮೋದಿ ಅವರು ಹೀಗೆ ಹೇಳುವ ಮೂಲಕ ಅಲ್ಪ ಸಂಖ್ಯಾತರನ್ನು ಹೀಯಾಳಿಸುವ ಜತೆಗೆ, ಬಹು ಸಂಖ್ಯಾತ ಸಮುದಾಯವನ್ನು ಹೆದರಿಸಿದ್ದಾರೆ. ಮುಸ್ಲಿಮರು ಅತಿ ಹೆಚ್ಚು ಮಕ್ಕಳನ್ನು ಪಡೆಯುವಂಥವರು ಎಂದು ಚುಚ್ಚಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾದ ಮಾತುಗಳು. ಇಂತಹ ಭಾಷಣಗಳು ಉಂಟು ಮಾಡುವ ಪರಿಣಾಮಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಚುನಾವಣೆ ಮುಗಿದ ಮೇಲೂ ಇದರ ಗಾಯಗಳು ದಶಕಗಳ ಕಾಲ ಉಳಿಯುತ್ತವೆ’ ಎಂದು ಸಂಘಟನೆಯ ಮುಖಂಡರಾದ ಕೆ.ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ವಿಜಯಾ, ಎಸ್.ಜಿ.ಸಿದ್ದರಾಮಯ್ಯ, ರಾಜೇಂದ್ರ ಚೆನ್ನಿ, ವಿಮಲಾ‌.ಕೆ.ಎಸ್, ಮಾವಳ್ಳಿ ಶಂಕರ್‌, ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ್, ಬಿ.ಶ್ರೀಪಾದ ಭಟ್ ಮತ್ತಿತರರು ಆತಂಕ ವ್ಯಕ್ತಪಡಿಸಿದ್ದಾರೆ. 

‘ಮೋದಿಯವರು ಅನೇಕ ದ್ವೇಷ ಭಾಷಣಗಳನ್ನು ಹಿಂದೆಯೂ ಮಾಡಿದ್ದಾರೆ. ಆದರೆ, ಈ ಬಾರಿ ತಮ್ಮ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ದ್ವೇಷ ಭಾಷಣದ ಪಾತಾಳಕ್ಕೆ ಇಳಿದಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಕೂಡಾ. ಚುನಾವಣಾ ಆಯೋಗ ಮತ್ತು ನ್ಯಾಯಾಂಗ ಈಗಲಾದರೂ ಅವರಿಗೆ ಲಗಾಮು ಹಾಕಬೇಕು ಹಾಗೂ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಭಾರತದಲ್ಲಿ ಧರ್ಮ ನಿರಪೇಕ್ಷ ಜನತಂತ್ರ ಮರಣಶಯ್ಯೆಯಲ್ಲಿದೆ ಎಂದೇ ಅರ್ಥ. ಕೂಡಲೇ ಆಯೋಗವು ದೂರನ್ನು ದಾಖಲಿಸಿಕೊಂಡು ಕಾರ್ಯ ಪ್ರವೃತ್ತವಾಗಬೇಕು’ ಎಂದು ಒತ್ತಾಯಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.