ಜಮಖಂಡಿ: ಇಲ್ಲಿನ ರಾಮತೀರ್ಥ ದೇವಸ್ಥಾನದ ಮುಂದೆ, ಶತಮಾನದ ಹಿಂದೆ ಕಟ್ಟಲಾಗಿದ್ದ ಹೊಂಡವೊಂದು ಜನಮಾನಸದಿಂದ ಹೆಚ್ಚು ಕಡಿಮೆ ಮರೆಯಾಗಿಯೇ ಹೋಗಿತ್ತು. ಆದರೆ, ‘ನಮ್ಮೂರಿನಲ್ಲೂ ದೊಡ್ಡ ಹೊಂಡವಿದೆ. ಅದನ್ನು ರಕ್ಷಿಸಿಕೊಳ್ಳಬೇಕು’ ಎಂದು ಊರವರ ಅರಿವಿಗೆ ಬಂದಿದ್ದು, ಯುವ ಬ್ರಿಗೇಡ್ ಕಾರ್ಯಕರ್ತರು ಅದರ ಸ್ವಚ್ಛತೆಗೆ ಟೊಂಕ ಕಟ್ಟಿ ನಿಂತ ಮೇಲೆ!
ಜಮಖಂಡಿ ಸಂಸ್ಥಾನದ ಪಟವರ್ಧನ ಸಂಸ್ಥಾನಿಕರು ಕಟ್ಟಿಸಿದ ಈ ಹೊಂಡದಲ್ಲಿ, ನೀರು ಕೂಡ ಕಾಣದಂತೆ ವಿವಿಧ ಜಾತಿಯ ಕಳೆ ಬೆಳೆದಿತ್ತು. ಹೊಂಡದ ಸುತ್ತ ಕಟ್ಟಿರುವ ಬೃಹತ್ ಗೋಡೆಗಳ ಮೇಲೆ ಗಿಡಗಂಟಿಗಳು ಬೆಳೆದಿದ್ದರಿಂದ ಗೋಡೆಯು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕಲ್ಲುಗಳೂ ಸಡಿಲುಗೊಂಡಿದ್ದವು. ಪ್ರವೇಶ ದ್ವಾರವೂ ಸೇರಿದಂತೆ ಅಲ್ಲಿ ನಿರ್ಮಿಸಿದ್ದ ಮೆಟ್ಟಿಲುಗಳು ಸಂಪೂರ್ಣ ಮಣ್ಣಿನಲ್ಲಿ ಹೂತು ಹೋಗಿದ್ದವು. ಹೊಂಡಕ್ಕೆ ಮೆಟ್ಟಿಲುಗಳು ಇವೆ ಎಂಬುದೂ ಗೊತ್ತಾಗುತ್ತಿರಲಿಲ್ಲ. ಮೆಟ್ಟಿಲಿನ ಎರಡೂ ಬದಿಯಲ್ಲಿ ತಲಾ ಮೂರರಂತೆ ಕಟ್ಟಿದ್ದ ಒಟ್ಟು ಆರು ವೃತ್ತಾಕಾರದ ಕಟ್ಟೆಗಳೂ ಶಿಥಿಲಗೊಂಡಿದ್ದವು.
ಇಂಥ ಜಲಮೂಲಕ್ಕೆ ಮರುಜೀವ ನೀಡಲು ಮುಂದಾಗಿದ್ದು ನಗರದ ಯುವ ಬ್ರಿಗೇಡ್ ಕಾರ್ಯಕರ್ತರ ಪಡೆ. ಸತತ 10 ದಿನಗಳಿಂದ ಶ್ರಮದಾನ ಮಾಡುತ್ತಿದ್ದು, ಇನ್ನೂ 20 ದಿನದ ಕೆಲಸಕ್ಕೆ ಯೋಜನೆ ಮಾಡಿಕೊಂಡಿದೆ.
ಯುವ ಬ್ರಿಗೇಡ್ ಜಮಖಂಡಿ ಘಟಕದ ಸಂಚಾಲಕ ಆನಂದ ಭಾರತ, ಕಾರ್ಯಕರ್ತರಾದ ಈಶ್ವರ ಕಂಕಣವಾಡಿ, ಸಿದ್ದು ಕವಟಗಿ, ಪ್ರಥಮ್ ಔರಸಂಗ, ವಿಠ್ಠಲ ಹುಬ್ಬಳ್ಳಿ, ಅರುಣ ಉಜ್ಜನಿಕೊಪ್ಪ, ಈಶ್ವರ ಅತ್ತೆಪ್ಪನವರ ಸೇರಿಕೊಂಡು ಕೆರೆ ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದ್ದಾರೆ.
ದಿನಾಲು ಬೆಳಿಗ್ಗೆ 6.30 ರಿಂದ 9 ಗಂಟೆವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ಆರಂಭದಲ್ಲಿ ಐದಾರು ಯುವಕರು ಕೈಗೊಂಡ ಈ ಕಾರ್ಯದಿಂದ ಪ್ರೇರಣೆ ಪಡೆದು, ಹಲವಾರು ಯುವಕರು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಮಲಿನವಾದ ನೀರನ್ನು ಖಾಲಿ ಮಾಡುವ ಉದ್ದೇಶದಿಂದ ಹೊಂಡದ ತಳಮಟ್ಟದಲ್ಲಿ ಮೋರೆಯನ್ನು ಬಿಡಲಾಗಿದೆ. ಇದೆಲ್ಲವನ್ನು ಗಮನಿಸಿದರೆ ಒಂದು ಕಾಲದಲ್ಲಿ ಇದೊಂದು ಅತ್ಯಂತ ಸುಸಜ್ಜಿತ ಹೊಂಡ ಆಗಿತ್ತು ಅನಿಸುತ್ತದೆ.
ವಾಯು ವಿಹಾರಕ್ಕೆಂದು ಅತ್ತತೆರಳಿದ್ದ ಸ್ತ್ರೀ ರೋಗ ತಜ್ಞೆ ಡಾ.ಲಕ್ಷ್ಮಿ ತುಂಗಳ, ಶಾಸಕ ಆನಂದ ನ್ಯಾಮಗೌಡ ಹಾಗೂ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಸ್ವಾಮೀಜಿ ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.