ADVERTISEMENT

ಕಲ್ಲು ಹೊಡೆದು ಚಾಲಕ ನಬಿ ಕೊಲೆ ಪ್ರಕರಣ: ಪ್ರಮುಖ ಆರೋಪಿ ಅದೇ ಬಸ್‌ನಲ್ಲಿದ್ದ!

ಕಲ್ಲು ಹೊಡೆದು ಚಾಲಕ ನಬಿ ರಸೂಲ್ ಕೊಲೆ ಪ್ರಕರಣ: ಐವರು ಸಹೋದ್ಯೋಗಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 20:49 IST
Last Updated 17 ಏಪ್ರಿಲ್ 2021, 20:49 IST
ಅರುಣ್ ಅರಕೇರಿ
ಅರುಣ್ ಅರಕೇರಿ   

ಬಾಗಲಕೋಟೆ: ವಾಯವ್ಯ ಸಾರಿಗೆ ಸಂಸ್ಥೆ ಚಾಲಕ ನಬಿ ರಸೂಲ್ ಆವಟಿ ಅವರನ್ನು ಕಲ್ಲು ಹೊಡೆದು ಕೊಲೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಐವರಲ್ಲಿ ಪ್ರಮುಖ ಆರೋಪಿ ಅರುಣ್ ಅರಕೇರಿ, ದಾಳಿಗೆ ತುತ್ತಾದ ಬಸ್‌ನಲ್ಲಿಯೇ ವಿಜಯಪುರದಿಂದ ಕೃತ್ಯ ನಡೆದ ಸ್ಥಳದವರೆಗೆ ಪ್ರಯಾಣಿಸಿದ್ದ ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಚಾಲಕ ಕಂ ನಿರ್ವಾಹಕ ಅರುಣ್ ಅರಕೇರಿ ಸೇರಿದಂತೆ ವಾಯವ್ಯ ಸಾರಿಗೆ ಸಂಸ್ಥೆಯ ಜಮಖಂಡಿ ಘಟಕದ ಸಿಬ್ಬಂದಿ ಮಲ್ಲಪ್ಪ ತಳವಾರ, ಚೇತನ ಕರ್ವೆ, ಸದಾಶಿವ ಕಂಕಣವಾಡಿ, ಲೋಹಿತ್ ದಾಸರ ಅವರನ್ನು ಬಾಗಲಕೋಟೆ ಪೊಲೀಸರ ವಿಶೇಷ ತಂಡ ಶುಕ್ರವಾರ ರಾತ್ರಿ ಬಂಧಿಸಿದೆ.

ಎಲ್ಲರೂ ಮುಷ್ಕರ ನಿರತರಾಗಿದ್ದರೂ ಕೆಲವರು ಮಾತ್ರ ಕರ್ತವ್ಯಕ್ಕೆ ಮರಳಿದ್ದು ಆರೋಪಿಗಳ ಅತೃಪ್ತಿಗೆ ಕಾರಣವಾಗಿತ್ತು. ಜೊತೆಗೆ ಜಮಖಂಡಿ ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿದ್ದರು ಎಂಬ ಕಾರಣಕ್ಕೆ ಅರುಣ್ ಅರಕೇರಿ ಅವರನ್ನು ಉತ್ತರ ಕನ್ನಡ ಜಿಲ್ಲೆ ಭಟ್ಕಳ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದು ಇವರ ಆಕ್ರೋಶ ಹೆಚ್ಚಿಸಿ ಈ ಕೃತ್ಯ ನಡೆಸಲು ಪ್ರೇರೇಪಿಸಿದೆ ಎಂದು ಹೇಳಲಾಗಿದೆ.

ADVERTISEMENT

ಘತ್ತರಗಾ–ಜಮಖಂಡಿ ಬಸ್ ವಿಜಯಪುರ ಮಾರ್ಗವಾಗಿ ಬರುವಾಗ ಅಲ್ಲಿ ಬಸ್ ಹತ್ತಿದ್ದ ಅರುಣ್ ಅರಕೇರಿ, ಬಸ್ ಎಲ್ಲೆಲ್ಲಿ ಸಂಚರಿಸುತ್ತಿದೆ ಎಂಬುದರ ಬಗ್ಗೆ ಸಹೊದ್ಯೋಗಿಗಳಿಗೆ ಮಾಹಿತಿ ನೀಡುತ್ತಿದ್ದರು. ಕೃತ್ಯ ನಡೆಯುವುದಕ್ಕೂ ಮುನ್ನ ಉಳಿದ ನಾಲ್ವರು ಆರೋಪಿಗಳು ಎರಡು ಬೈಕ್‌ಗಳಲ್ಲಿ ಬಬಲೇಶ್ವರಕ್ಕೆ ಪರಿಚಿತರೊಬ್ಬರ ಸಾವಿನ ಅಂತ್ಯಕ್ರಿಯೆಗೆ ತೆರಳಿ ಅದೇ ಮಾರ್ಗದಲ್ಲಿ ಜಮಖಂಡಿಗೆ ವಾಪಸಾಗುತ್ತಿದ್ದರು.

ಈ ವೇಳೆ ಚಿಕ್ಕಲಕಿ ಕ್ರಾಸ್‌ನಲ್ಲಿ ಎಲ್ಲರೂ ಕುಳಿತು ಮದ್ಯ ಸೇವನೆ ಮಾಡಿ ಬಸ್ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬರುತ್ತಿದ್ದಂತೆಯೇ ನಿರ್ಜನ ಪ್ರದೇಶದಲ್ಲಿ ಅಡ್ಡಹಾಕಿ ನಾಲ್ವರೂ ಕಲ್ಲು ಎಸೆದಿದ್ದರು. ಈ ವೇಳೆ ಕುತ್ತಿಗೆ ಭಾಗಕ್ಕೆ ಬಿದ್ದ ಕಲ್ಲೇಟಿನಿಂದ ನಬಿ ತೀವ್ರವಾಗಿ ಗಾಯಗೊಂಡಿದ್ದರು.

ಕಲ್ಲಿನ ದಾಳಿಯ ನಂತರ ಬಸ್‌ ನಿಲ್ಲುತ್ತಿದ್ದಂತೆಯೇ ಅರುಣ್ ಅರಕೇರಿ ಉಳಿದ ಪ್ರಯಾಣಿಕರಂತೆ ಜಮಖಂಡಿಗೆ ಬೇರೆ ವಾಹನದಲ್ಲಿ ತೆರಳಿ ಏನೂ ಆಗಿಲ್ಲವೆಂಬಂತೆ ಮನೆ ಸೇರಿದ್ದರು. ಆರೋಪಿಗಳ ಮೊಬೈಲ್‌ಫೋನ್ ಕರೆ ವಿವರ (ಸಿಡಿಆರ್‌) ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ರಾತ್ರಿ ವೇಳೆಗೆ ಎಲ್ಲರನ್ನೂ ಬಂಧಿಸಿದೆ.

ಕರ್ತವ್ಯ ಪ್ರಜ್ಞೆ ಮೆರೆದ ನಬಿ

’ಕಲ್ಲಿನ ದಾಳಿಗೆ ತುತ್ತಾಗಿ ತೀವ್ರ ಗಾಯಗೊಂಡರೂ ಚಾಲಕ ನಬಿ ರಸೂಲ್ ಸ್ಟೇರಿಂಗ್ ಕೈ ಬಿಡಲಿಲ್ಲ. ರಸ್ತೆ ಪಕ್ಕಕ್ಕೆ ಬಸ್ ನಿಲ್ಲಿಸಿ ಹಾಗೆಯೇ ಸ್ಟೇರಿಂಗ್ ಮೇಲೆ ಕುಸಿದರು. ನಾವೆಲ್ಲರೂ ಸೇರಿ ಅವರನ್ನು ಉಪಚರಿಸಿ ಆಂಬುಲೆನ್ಸ್ ಕರೆಸಿ ಜಮಖಂಡಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿಯಲ್ಲಿಯೇ ಅವರು ಮೃತಪಟ್ಟರು. ಸಾವಿನ ವೇಳೆಯೂ ನಮ್ಮೆಲ್ಲರ ಜೀವದ ಹಿತ ಕಾಯ್ದರು‘ ಎಂದು ಬಸ್‌ನಲ್ಲಿದ್ದ ಪ್ರಯಾಣಿಕರು ಪೊಲೀಸರಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.

ರಸೂಲ್ ಇನ್ನು 10 ತಿಂಗಳು ಕಳೆದಿದ್ದರೆ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದರು. ಮುಷ್ಕರದ ಕಾರಣ 55 ವರ್ಷ ಮೇಲ್ಪಟ್ಟ ಚಾಲಕ–ನಿರ್ವಾಹಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗುವಂತೆ ಸಾರಿಗೆ ಸಂಸ್ಥೆ ನೋಟಿಸ್ ನೀಡಿದ್ದ ಕಾರಣ ಎರಡು ದಿನಗಳ ಹಿಂದೆ ಕೆಲಸಕ್ಕೆ ಮರಳಿದ್ದರು ಎನ್ನಲಾಗಿದೆ.

‘ಈಗ ಗೈರಾದರೆ ನಿವೃತ್ತಿಯ ನಂತರ ಸೌಲಭ್ಯ ಸಿಗುವುದಿಲ್ಲ’ ಎಂದು ಪತಿ ಕರ್ತವ್ಯಕ್ಕೆ ತೆರಳಿದ್ದರು ಎಂದು ನಬಿ ಅವರ ಪತ್ನಿ ಸಾಯಿರಾ ಬಾನು ತಿಳಿಸಿದರು.

***

ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಎಲ್ಲರನ್ನೂ ಬಂಧಿಸಿದ್ದೇವೆ. ಆಲಗೂರು, ಅಥಣಿಯಲ್ಲಿ ಬಸ್‌ಗಳ ಮೇಲೆ ಕಲ್ಲು ಎಸೆದ ಪ್ರಕರಣಗಳ ತನಿಖೆ ನಡೆಸಿದ್ದೇವೆ

-ಲೋಕೇಶ ಜಗಲಾಸರ್, ಬಾಗಲಕೋಟೆ ಎಸ್ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.