ADVERTISEMENT

ಈಗಿನ ಹುಸಿ ರಾಷ್ಟ್ರೀಯತೆ ಹೊರಗಿನಿಂದ ಬಂದದ್ದು: ವಿಮರ್ಶಕ ರಾಜೇಂದ್ರ ಚೆನ್ನಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 19:03 IST
Last Updated 8 ಜನವರಿ 2023, 19:03 IST
ಗೋಷ್ಠಿಯಲ್ಲಿ ಕುಮಾರಸ್ವಾಮಿ ಬೆಜ್ಜಿಹಳ್ಳಿ, ಮಾವಳ್ಳಿ ಶಂಕರ್, ರಾಜೇಂದ್ರ ಚೆನ್ನಿ, ಮುನೀರ್ ಕಾಟಿಪಳ್ಳ, ಪ್ರಿಯಾಂಕ ಮಾವನ್ಕರ್ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಗೋಷ್ಠಿಯಲ್ಲಿ ಕುಮಾರಸ್ವಾಮಿ ಬೆಜ್ಜಿಹಳ್ಳಿ, ಮಾವಳ್ಳಿ ಶಂಕರ್, ರಾಜೇಂದ್ರ ಚೆನ್ನಿ, ಮುನೀರ್ ಕಾಟಿಪಳ್ಳ, ಪ್ರಿಯಾಂಕ ಮಾವನ್ಕರ್ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಈಗ ಎಲ್ಲೆಡೆ ವ್ಯಕ್ತವಾಗುತ್ತಿರುವ ಹುಸಿ ರಾಷ್ಟ್ರೀಯತೆ ಕೂಡ ಹೊರಗಿನಿಂದಲೇ ಬಂದದ್ದು. ನಮ್ಮ ಪ್ರೀತಿಗೆ ಪಾತ್ರವಾದದ್ದು ದೇಶವೇ ಹೊರತು ರಾಷ್ಟ್ರವಲ್ಲ’ ಎಂದು ವಿಮರ್ಶಕ ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ಜನಸಾಹಿತ್ಯ ಸಮ್ಮೇಳನದಲ್ಲಿ ಸೌಹಾರ್ದತೆ ಮತ್ತು ಕನ್ನಡತನ ಕುರಿತು ಮಾತನಾಡಿದ ಅವರು, ‘ನಮ್ಮ ಚರಿತ್ರೆ ಕೇವಲ ಆಕ್ರಮಣ ಮತ್ತು ದ್ವೇಷದ ಚರಿತ್ರೆಯಲ್ಲ. ಕೊಡು– ಕೊಳ್ಳುವಿಕೆ ಮತ್ತು ಚಲನಶೀಲ ಚರಿತ್ರೆಯಾಗಿದೆ. ಆದರೆ, ಅದು ಕೇವಲ ದುರಾಕ್ರಮಣಗಳ ಚರಿತ್ರೆ ಎಂದು ಬಿಂಬಿಸಲಾಗುತ್ತಿದೆ. ಆ ಮೂಲಕ ಹೊರಗಿನವರ ಮೇಲೆ ಹುಸಿ ಆರೋಪ ಹೊರಿಸಲಾಗುತ್ತಿದೆ. ಹಾಗೆ ನೋಡಿದರೆ ಈಗಿನ ಹುಸಿ ರಾಷ್ಟ್ರೀಯತೆ ಕೂಡ ಹೊರಗಿನದ್ದೆ’ ಎಂದರು.

’ಕನ್ನಡತನ ಒಳಗಿರುವ ಸೌಹಾರ್ದತೆ ಸುಲಿದ ಬಾಳೆಹಣ್ಣಿನಂತೆ ಬಂದಿದ್ದಲ್ಲ. ಅನೇಕ ಘರ್ಷಣೆಗಳ ಮೂಲಕ, ಧರ್ಮವನ್ನು ಪ್ರಶ್ನೆ ಮಾಡುವ ಮೂಲಕ ಬಂದಿದೆ. ಸೌಹಾರ್ದತೆಯ ನೆಲೆಯಲ್ಲಿ ಕನ್ನಡತನವನ್ನು ಮರು ವಿಶ್ಲೇಷಣೆ ಮಾಡುವ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿ, ‘ಮುಸ್ಲಿಮರು ಈಗ ನವ ಬಹಿಷ್ಕೃತರಾಗಿದ್ದೇವೆ. ಅಮಾಯಕ ಮುಸ್ಲಿಂ ಕೊಲೆಯಾದರೂ ಅನ್ಯ ಧರ್ಮೀಯರು ಬಂದು ಸಾಂತ್ವನ ಹೇಳುವುದಿರಲಿ, ಮುಖವನ್ನೇ ನೋಡುತ್ತಿಲ್ಲ. ಆಡಳಿತ ಪಕ್ಷದವರಂತೂ ಬರುವುದಿಲ್ಲ, ವಿರೋಧ ಪಕ್ಷದವರೂ ತಲೆ ಹಾಕುತ್ತಿಲ್ಲ. ಕೋಮುದ್ವೇಷಕ್ಕೆ ಇತ್ತೀಚೆಗೆ ಮೂವರು ಅಮಾಯಕ ಮುಸ್ಲಿಂ ಯುವಕರು ಹತ್ಯೆಯಾದರು. ಅವರಿಗೆ ಸರ್ಕಾರದಿಂದ ಪರಿಹಾರವನ್ನು ಕೊಡಲೇ ಇಲ್ಲ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಪರಿಹಾರ ಕೊಟ್ಟು ಅದೇ ದಿನ ವಾಪಸ್ ಪಡೆದುಕೊಂಡರು. ಇವೆಲ್ಲವೂ ಮುಸ್ಲಿಮರನ್ನು ಸಮಾಜದಿಂದ ಹೊರಗಿಡುವ ಪ್ರಯತ್ನವೇ ಆಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ದಲಿತರ ನೋವಿನ ಕಥೆಗಳನ್ನು ಹೇಳುವ ಸಾಹಿತ್ಯ ಸಾಕಷ್ಟಿದೆ. ಮುಸ್ಲಿಮರ ನೋವನ್ನು ಹೇಳುವ ಸಾಹಿತ್ಯವೇ ರಚನೆಯಾಗುತ್ತಿಲ್ಲ. ಅಲ್ಲಿಯೂ ಮುಸ್ಲಿಮರು ಅಸ್ಪೃಶ್ಯರಾಗಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲೂ ಮುಸ್ಲಿಮರನ್ನು ದೂರ ಇಡಲಾಯಿತು. ಅದಕ್ಕೆ ಪ್ರತಿರೋಧವಾಗಿ ಈ ಸಮ್ಮೇಳನ ಆಯೋಜಿಸಿರುವುದು ಸ್ವಲ್ಪ ಸಾಂತ್ವನ ದೊರೆತಂತಾಗಿದೆ’ ಎಂದರು.

ದಲಿತ ಸಂರ್ಘರ್ಷ ಸಮಿತಿ ರಾಜ್ಯ ಸಂಚಾಲಕ (ಅಂಬೇಡ್ಕರ್ ವಾದ) ಮಾವಳ್ಳಿ ಶಂಕರ್, ‘ನಾಯಿಮರಿಗಳ ಹೆಸರಿನಲ್ಲಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು ಕಚ್ಚಾಡುತ್ತಿದ್ದಾರೆ. ಮುಖ್ಯವಾಗಿ ಜಾತಿವಾದ ಎಂಬ ರೇಬಿಸ್‌ ತೊಡೆದು ಹಾಕುವ ಬಗ್ಗೆ ಎಲ್ಲರೂ ಯೋಚಿಸಬೇಕು’ ಎಂದರು.

**

ನಿರ್ಣಯ: ಎಲ್ಲ ಸಮುದಾಯಗಳ ಒಳಗೊಳ್ಳುವಿಕೆ ಇರಲಿ

* ಕನ್ನಡ ಸಾಹಿತ್ಯ ಸಮ್ಮೇಳನಗಳೂ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್‌ ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯಗಳ ಒಳಗೊಳ್ಳಬೇಕು. ಅದರಲ್ಲೂ ದಲಿತರು, ದಮನಿತರು, ಆದಿವಾಸಿಗಳು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಒಳಗೊಳ್ಳುವಿಕೆ ಇರಲೇಬೇಕು.

* ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ ಸಂಸ್ಥೆಗಳ ಸ್ವಾಯತ್ತತೆಯನ್ನು ಸರ್ಕಾರ ಕಾಪಾಡಿಕೊಳ್ಳಬೇಕು.

* ಸಾಹಿತ್ಯ ಸಂಸ್ಥೆಗಳಿಗೆ ಪದಾಧಿಕಾರಿಗಳನ್ನು ನೇಮಿಸುವಾಗ ಸರ್ಕಾರ ಎಚ್ಚರ ವಹಿಸಿ ಅರ್ಹರನ್ನು ನೇಮಿಸಬೇಕು.

* ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ, ರಂಗಾಯಣದ ನಿರ್ದೇಶಕರ ನೇಮಕಾತಿ ಸರ್ಕಾರದ ನಿಲುವಿಗೆ ಖಂಡನೆ.

* ಸರ್ಕಾರದ ಕೋಮುವಾದಿ ನಡೆಗೆ ಖಂಡನೆ.

* ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಇರಬೇಕು.

* ರಾಜ್ಯದ ಎಲ್ಲ ಭಾಷೆಗಳನ್ನೂ ರಕ್ಷಿಸಲು ಸಮಗ್ರ ಭಾಷಾ ನೀತಿ ರೂಪಿಸಬೇಕು.

* ಕನ್ನಡ ನೆಲದ ಮೇಲೆ ಹಿಂದಿ ಹೇರಿಕೆಗೆ ತೀವ್ರ ವಿರೋಧ.

* ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು.

* ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಗಡಿನಾಡ ಕನ್ನಡಿಗರ ರಕ್ಷಣೆ ಮಾಡಬೇಕು.

* ನಂದಿನಿಯೂ ಸೇರಿದಂತೆ ರಾಜ್ಯದ ಸಂಸ್ಥೆಗಳನ್ನು ಉತ್ತರ ಭಾರತದ ಸಂಸ್ಥೆಗಳ ಜತೆಗೆ ವಿಲೀನ ಮಾಡಬಾರದು.

* ಕೃಷ್ಣಾ, ಕಾವೇರಿ, ಮಹದಾಯಿ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಅಂತರ ರಾಜ್ಯ ವ್ಯಾಜ್ಯಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ನ್ಯಾಯಾಂಗ ಹೋರಾಟ ನಡೆಸಬೇಕು. ಈ ನದಿಗಳ ನೀರಿನ ಬಳಕೆಗೆ ಯೋಜನೆಗಳನ್ನು ರೂಪಿಸಿ ಅವುಗಳ ಅನುಷ್ಠಾನಕ್ಕೆ ಹಣ ಒದಗಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.