ADVERTISEMENT

8 ತಿಂಗಳಿಂದ ನನೆಗುದಿಗೆ ಬಿದ್ದ ಕಟ್ಟಡ ಕಾಮಗಾರಿ

ಮಹದೇಶ್ವರ ಬೆಟ್ಟದಲ್ಲಿ ವಿವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ

ಜಿ.ಪ್ರದೀಪ್ ಕುಮಾರ್
Published 30 ಸೆಪ್ಟೆಂಬರ್ 2018, 19:54 IST
Last Updated 30 ಸೆಪ್ಟೆಂಬರ್ 2018, 19:54 IST
ಅರ್ಧದಲ್ಲೇ ನಿಂತಿರುವ ಕಟ್ಟಡ ಕಾಮಗಾರಿ
ಅರ್ಧದಲ್ಲೇ ನಿಂತಿರುವ ಕಟ್ಟಡ ಕಾಮಗಾರಿ   

ಮಹದೇಶ್ವರ ಬೆಟ್ಟ: ಹಾವೇರಿ ಜಿಲ್ಲೆಯ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ, ಇಲ್ಲಿನ ಪ್ರಾದೇಶಿಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಟ್ಟಡ ಕಾಮಗಾರಿ ಎಂಟು ತಿಂಗಳುಗಳಿಂದ ಸ್ಥಗಿತಗೊಂಡಿದೆ.

₹ 80 ಲಕ್ಷ ವೆಚ್ಚದಲ್ಲಿ 2016ರಲ್ಲಿ ಆರಂಭಗೊಂಡ ಪಾರಂಪರಿಕ ಶೈಲಿಯ ಕಟ್ಟಡಗಳ ಕಾಮಗಾರಿ ಶೇಕಡ 60ರಿಂದ 70ರಷ್ಟು (ಚಾವಣಿವರೆಗೆ ಕೆಲಸ ಆಗಿದೆ) ಮುಗಿದಿದೆ. ಎಂಟು ತಿಂಗಳಿನಿಂದೀಚೆಗೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದರಿಂದ ಕಟ್ಟಡದ ಒಳಗೆ ಹಾಗೂ ಸುತ್ತಮುತ್ತ ಗಿಡಗಂಟಿಗಳು ಬೆಳೆದಿವೆ.ಅನುದಾನದ ಕೊರತೆಯ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ.

2013ರಲ್ಲಿ ಆರಂಭವಾದ ಈ ಸಂಶೋಧನಾ ಕೇಂದ್ರಕ್ಕೆ ತಾತ್ಕಾಲಿಕವಾಗಿ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವೇದಸಂಭ್ರಮ್‌ ವಸತಿಗೃಹದಲ್ಲಿ ಸ್ಥಳಾವಕಾಶ ನೀಡಲಾಗಿತ್ತು.

ADVERTISEMENT

ಮಹದೇಶ್ವರ ಬೆಟ್ಟದ ಪಾಲಾರ್ ರಸ್ತೆಯ ಬಲಭಾಗದ ಗುಡ್ಡದಲ್ಲಿ ಸ್ವಂತ ಕಟ್ಟಡಕ್ಕಾಗಿ ಜಾಗ ಗುರುತಿಸಿ, 2016ರಲ್ಲಿ ಕಟ್ಟಡ ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದಈಗಲೂ ಅದೇ ವಸತಿಗೃಹದಲ್ಲೇ ತರಗತಿಗಳು ನಡೆಯುತ್ತಿವೆ. ಜಾಗದ ಕೊರತೆಯಿಂದಾಗಿ ತರಬೇತುದಾರರು ಕೂಡ ಅಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳಿಗೆ ಕಿರಿಕಿರಿ: ಕೇಂದ್ರಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಅವರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಹಾಗಾಗಿ ದೂರದ ಊರುಗಳಿಂದ ಬಂದು ಇಲ್ಲಿಜಾನಪದ ಕಲೆಗಳ ಬಗ್ಗೆ ಅಧ್ಯಯನ, ಸಂಶೋಧನೆ ಮಾಡಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.

2018–19ನೇ ಸಾಲಿಗೆ ಸುಮಾರು 60ರಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಂದ್ರದ ಮೂಲಗಳು ತಿಳಿಸಿವೆ.

ಕಲಾವಿದರ ಬೇಸರ: ದೇಶದಲ್ಲೇ ಸಾಂಸ್ಕೃತಿಕವಾಗಿ ಸಿರಿವಂತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಜಾನಪದ ವಿ.ವಿಯ ಪ್ರಾದೇಶಿಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಟ್ಟಡ ಕಾಮಗಾರಿ ವಿಳಂಬವಾಗುತ್ತಿರುವುದು ಜಾನಪದ ಕಲಾವಿದರಲ್ಲಿ ಬೇಸರ ಮೂಡಿಸಿದೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿರುವಲಂಬಾಣಿ ಕುಣಿತ, ವೀರಗಾಸೆ ಕುಣಿತ, ಕಂಸಾಳೆ ಪದ, ಸೋಬಾನೆ ಪದ ಮುಂತಾದ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿರುವ ಸಂಶೋಧನಾ ಕೇಂದ್ರಕ್ಕೆ ಐದು ವರ್ಷಗಳಾದರೂ ಸ್ವಂತ ಕಟ್ಟಡ ನಿರ್ಮಾಣ ಆಗದಿರುವುದಕ್ಕೆತೀವ್ರ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

500 ವಿದ್ಯಾರ್ಥಿಗಳಿಗೆ ತರಬೇತಿ

2013ರಿಂದ ಇಲ್ಲಿಯವರೆಗೆ ಈ ಕೇಂದ್ರದಲ್ಲಿ 450ರಿಂದ 500 ವಿದ್ಯಾರ್ಥಿಗಳು ಜಾನಪದ ಕಲೆಗಳಿಗೆ ಸಂಬಂಧಿಸಿದ ತರಬೇತಿ ಪಡೆದಿದ್ದಾರೆ.

‘ತರಬೇತಿ ಪಡೆಯುತ್ತಿರುವವರಿಗೆ ₹ 10 ಸಾವಿರದಿಂದ ₹ 20 ಸಾವಿರದವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ಕಲಾವಿದರಿಗೆ ಡೊಳ್ಳು ಕುಣಿತ, ಬೀಸು ಕಂಸಾಳೆ, ಕಸೂತಿ ಕಲೆಯ ತರಬೇತಿ ನೀಡಲಾಗುತ್ತದೆ’ ಎಂದು ಕೇಂದ್ರದ ಸಂಯೋಜಕ ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.