ಬೆಂಗಳೂರು: ಬಿಜೆಪಿಯಿಂದ ಹೊರ ಬಂದಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ, ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ರಾಜಕೀಯ ಪಕ್ಷವನ್ನು ಆರಂಭಿಸುವುದಾಗಿ ಭಾನುವಾರ ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಬಿಜೆಪಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಸ್ವಂತ ಕೆಲಸ ಬದಿಗೊತ್ತಿ ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ, ನನ್ನ ಕಷ್ಟದ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಹೊರತಾಗಿ ಪಕ್ಷದಯಾರೊಬ್ಬರೂ ಜತೆಗೆ ನಿಲ್ಲಲಿಲ್ಲ’ ಎಂದು ದೂರಿದರು.
‘ನನ್ನ ನಿರ್ಧಾರವನ್ನು ಯಡಿಯೂರಪ್ಪ ಅವರಿಗೆ ತಿಳಿಸಿದ್ದೇನೆ. ದೂರವಾಣಿ ಮೂಲಕ ಅವರೊಂದಿಗೆ ಚರ್ಚಿಸಿದ್ದೇನೆ. ನನಗೆ ಆಗಿರುವ ನೋವನ್ನು ತಿಳಿಸಿದ್ದೇನೆ. ನನ್ನದು ಮತ್ತು ಯಡಿಯೂರಪ್ಪ ಅವರದ್ದು ರಾಜಕಾರಣ ಮೀರಿದ ಸಂಬಂಧ’ ಎಂದು ಹೇಳಿದರು.
‘ಹಲವು ವರ್ಷಗಳ ಕಾಲ ಬಿಜೆಪಿಗಾಗಿ ರಾಜ್ಯದ ಉದ್ದಗಲಕ್ಕೆ ಸುತ್ತಾಡಿದ್ದೆ. ಮೊದಲ ಬಾರಿಗೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ತರುವಲ್ಲಿ ನನ್ನ ಪಾತ್ರವೂ ಇತ್ತು. ಅಧಿಕಾರ ಹಸ್ತಾಂತರ ಮಾಡದ ಜೆಡಿಎಸ್ ವಿರುದ್ಧ ಹೋರಾಡಿ ಸ್ವತಂತ್ರವಾಗಿ ಬಿಜೆಪಿ ಸರ್ಕಾರ ತರುವಲ್ಲೂ ನನ್ನ ಶ್ರಮ ಇತ್ತು. ಆದರೆ, ನಾನು ಜೈಲಿಗೆ ಹೋದಾಗ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಸಮಗ್ರ ಅಭಿವೃದ್ಧಿಯೇ ತಮ್ಮ ಗುರಿ. ಅದಕ್ಕೆ ಪೂರಕವಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೆಲಸ ಮಾಡಲಿದೆ. ಹೊಸ ರಾಜಕೀಯ ಪಕ್ಷ ಆರಂಭಿಸುತ್ತಿರುವುದರಿಂದ ಸರ್ಕಾರ ತಮ್ಮನ್ನು ಗುರಿಯಾಗಿಸಿ ಕೆಲಸ ಮಾಡಬಹುದು. ಆ ಬಗ್ಗೆ ಯೋಚಿಸುವುದಿಲ್ಲ ಎಂದು ರೆಡ್ಡಿ ಹೇಳಿದರು.
ಇತ್ತೀಚಿನ ಬೆಳವಣಿಗೆಗಳಿಂದ ಹಿತೈಷಿಗಳು, ಬೆಂಬಲಿಗರಿಗೆ ನೋವಾಗಿತ್ತು. ಇಂತಹ ಬೆಳವಣಿಗೆಗಳನ್ನು ಸಹಿಸಿಕೊಂಡು ಮುಂದುವರಿಯುವುದು ಬೇಡ ಎಂದು ಎಲ್ಲರೂ ಹೇಳಿದ್ದರು. ಸುಷ್ಮಾ ಸ್ವರಾಜ್ ಅವರಂತಹ ನಾಯಕಿಗಾಗಿ ದುಡಿದ ಕುಟುಂಬ ತಮ್ಮದು. ಈಗ ಸ್ವಂತ ಶಕ್ತಿಯ ಮೇಲೆ ವಿಶ್ವಾಸವಿದೆ. ಅದೇ ಕಾರಣಕ್ಕಾಗಿ ಪಕ್ಷ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಒತ್ತಡ ಹೇರುವುದಿಲ್ಲ: ‘ಬಿ. ಶ್ರೀರಾಮುಲು ನಮ್ಮ ಸಹೋದರನಿದ್ದಂತೆ. ಅವಕಾಶ ಸಿಕ್ಕ ಎಲ್ಲ ಸಂದರ್ಭಗಳಲ್ಲಿ ನನ್ನ ಬದಲಿಗೆ ಅವರಿಗೆ ಅಧಿಕಾರ ನೀಡುವಂತೆ ಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದೆ. ಈಗಲೂ ನಮ್ಮ ಹೊಸ ಪಕ್ಷ ಸೇರುವಂತೆ ಒತ್ತಡ ಹೇರುವುದಿಲ್ಲ. ಅವರಿಗೆ ತೋಚಿದಂತೆ ನಿರ್ಧಾರ ಕೈಗೊಳ್ಳಲಿ’ ಎಂದು ರೆಡ್ಡಿ ಹೇಳಿದರು.
‘ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಕೇಂದ್ರ ಗೃಹ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು. ಅವರು ಏಕೆ ಹಾಗೆ ಹೇಳಿದ್ದರೋ ತಿಳಿಯಲಿಲ್ಲ? ಯಾರು ಹಾಗೆ ಹೇಳಿಸಿದ್ದರು ಎಂಬುದೂ ಗೊತ್ತಾಗಲಿಲ್ಲ. ಆದರೆ, ಆ ಹೇಳಿಕೆಯಿಂದ ತುಂಬಾ ನೋವಾಯಿತು. ಅದೇ ರೀತಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಅನ್ಯಾಯವಾಗಿದೆ’ ಎಂದು ಹೇಳಿದರು.
ಸಂಕಷ್ಟದ ದಿನಗಳಲ್ಲಿ ಕುಟುಂಬವನ್ನು ಮುನ್ನಡೆಸಿದ್ದ ಪತ್ನಿ ಲಕ್ಷ್ಮಿ ಅರುಣಾ ಈಗ ಹೊಸ ರಾಜಕೀಯ ಪಕ್ಷ ಮುನ್ನಡೆಸುವ ವಿಚಾರದಲ್ಲೂ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಶೀಘ್ರದಲ್ಲೇ ಪಕ್ಷದ ಚಿಹ್ನೆ ಮತ್ತು ಬಾವುಟ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
‘ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ’
‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ. ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರು ನೋಂದಾಯಿಸಿದ್ದೇನೆ. ಚುನಾವಣೆ ಎದುರಿಸಲು ಸಿದ್ಧತೆಗಳನ್ನೂ ಆರಂಭಿಸಿದ್ದೇನೆ’ ಎಂದು ಜನಾರ್ದನ ರೆಡ್ಡಿ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.