ADVERTISEMENT

ಜನಾರ್ದನರೆಡ್ಡಿ ಹೇಳಿಕೆಯೇ ಮುಳುವಾಯಿತು!

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2018, 9:15 IST
Last Updated 6 ನವೆಂಬರ್ 2018, 9:15 IST
   

ಬಳ್ಳಾರಿ: ‘ನಾಲ್ಕು ವರ್ಷ ನನ್ನನ್ನು ಜೈಲಿನಲ್ಲಿಟ್ಟು ನನ್ನ ಮಕ್ಕಳಿಂದ ದೂರ ಮಾಡಿದ್ದಕ್ಕಾಗಿಯೇ ಆ ದೇವರು ಸಿದ್ದರಾಮಯ್ಯ ಅವರ ಮಗನನ್ನು ಕಿತ್ತುಕೊಂಡ’ ಎಂದು ಉಪಚುನಾವಣೆಗೆ ಮುನ್ನ ಜಿ.ಜನಾರ್ದನರೆಡ್ಡಿ ವಾಹಿನಿಯೊಂದಕ್ಕೆ ನೀಡಿದ್ದ ಹೇಳಿಕೆಯೇ ಬಿಜೆಪಿ ಗೆಲುವಿಗೆ ಮುಳುವಾಯಿತು ಎಂಬ ಚರ್ಚೆಯೂ ಕ್ಷೇತ್ರದಲ್ಲಿ ನಡೆದಿದೆ. ಬಹಿರಂಗವಾಗಿ ಹೆಸರು ಹೇಳಲು ಬಯಸದ ಆ ಪಕ್ಷದ ಮುಖಂಡರೂ ಸೋಲಿಗೇ ಈ ಕಾರಣವನ್ನೇ ಮುಂದೊಡ್ಡುತ್ತಿದ್ದಾರೆ.

ಬಳ್ಳಾರಿಯ ಗಡಿಭಾಗದಲ್ಲಿ, ಮೊಳಕಾಲ್ಮೂರು ತಾಲ್ಲೂಕಿನಲ್ಲಿ ರೆಡ್ಡಿ ಹೇಳಿಕೆ ನೀಡಿದ್ದರು. ಅದನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌್.ಯಡಿಯೂರಪ್ಪ ಒಪ್ಪಿರಲಿಲ್ಲ. ಅದಕ್ಕೂ ಮುನ್ನ, ಇಡೀ ಕ್ಷೇತ್ರದ ರಾಜಕೀಯ ವಲಯದಲ್ಲಿ ರೆಡ್ಡಿ ಹೇಳಿಕೆಯು ಸಿದ್ದರಾಮಯ್ಯ ಪರವಾದ ಅನುಕಂಪದ ಅಲೆ ಏಳಲು ಕಾರಣವಾಗಿತ್ತು. ಅದು ಉಗ್ರಪ್ಪನವರ ಕಡೆಗೂ ದಾಟಲು ಹೆಚ್ಚು ಕಾಲ ಬೇಕಾಗಲಿಲ್ಲ.

ಈ ಸಂಗತಿಯನ್ನು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರವೂ ತನ್ನ ಬಲ ಹೆಚ್ಚಿಕೊಳ್ಳಲು ಬಳಸಿಕೊಂಡಿತ್ತು. ‘ಅಕ್ರಮ ಗಣಿಗಾರಿಕೆಯಿಂದಾಗಿಯೇ ರೆಡ್ಡಿ ಜೈಲು ಸೇರಿದರು. ಯಾವ ನ್ಯಾಯಾಧೀಶರೂ ಸೂಕ್ತ ಸಾಕ್ಷಿ ಆಧಾರಗಳಿಲ್ಲದೆ ಯಾವ ಅಮಾಯಕರನ್ನೂ ಜೈಲಿಗೆ ಕಳಿಸಲ್ಲ. ಸಿದ್ದರಾಮಯ್ಯ ಏನು ಹೈಕೋರ್ಟ್‌ ನ್ಯಾಯಾಧೀಶರೇ?’ ಎಂದೂ ಕಾಂಗ್ರೆಸ್‌ ಮುಖಂಡರು ಪ್ರಶ್ನಿಸಿದ್ದರು. ಇದು ಕ್ಷೇತ್ರದಲ್ಲಿ ಹೆಚ್ಚು ಚರ್ಚೆಗೆ ದಾರಿ ಮಾಡಿತ್ತು. ‘ರೆಡ್ಡಿ ಒಬ್ಬ ಅನಾಗರಿಕ ವ್ಯಕ್ತಿ. ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲಾರೆ ಎಂದಿದ್ದ ಸಿದ್ದರಾಮಯ್ಯ, ರೆಡ್ಡಿ ಮಕ್ಕಳಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಆಶಿಸಿದ್ದರು.

ADVERTISEMENT

‘ರೆಡ್ಡಿ ಸಿದ್ದರಾಮಯ್ಯ ಮಗನ ಸಾವಿನ ಕುರಿತು ಅಮಾನವೀಯ ಹೇಳಿಕೆ ನೀಡಿದರು ಎಂಬ ಅಭಿಪ್ರಾಯವು ಜನವಲಯದಲ್ಲಷ್ಟೇ ಅಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲೂ ಹೆಚ್ಚು ಚರ್ಚೆಗೆ ದಾರಿ ಮಾಡಿತ್ತು. ಅದುವರೆಗೂ ಬಿಜೆಪಿ ಪರವಾಗಿದ್ದ ಅಲೆಯನ್ನು ರೆಡ್ಡಿ ಹೇಳಿಕೆಯು ವಿರೋಧಿ ಅಲೆಯನ್ನಾಗಿ ಪರಿವರ್ತಿಸಿತ್ತು. ಅಲ್ಲಿಂದಲೇ ನಮ್ಮ ಸೋಲು ಆರಂಭವಾಯಿತು’ ಎಂದು ಬಿಜೆಪಿ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.

‘ನಮ್ಮ ಅಭ್ಯರ್ಥಿ ಶಾಂತಾ ಅವರ ವ್ಯಕ್ತಿತ್ವದ ಕುರಿತು ಯಾರಲ್ಲೂ ಭಿನ್ನಾಭಿಪ್ರಾಯವಿರಲಿಲ್ಲ. ಮತದಾರರೂ ಬಳ್ಳಾರಿಯ ಮಗಳು ಎಂದೇ ಒಮ್ಮೆ ಆರಿಸಿ ಕಳಿಸಿದ್ದರು. ಈ ಬಾರಿಯೂ ಅಂಥದ್ದೇ ಫಲಿತಾಂಶಕ್ಕಾಗಿ ನಾವೆಲ್ಲ ದುಡಿಯುತ್ತಿದ್ದಾಗಲೇ ರೆಡ್ಡಿ ಪಕ್ಷಕ್ಕೆ ಸೋಲು ತರುವಂಥ ಹೇಳಿಕೆಯನ್ನು ನೀಡಿದರು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.