ಬೆಂಗಳೂರು: ‘ಎಚ್.ಡಿ. ಕುಮಾರಸ್ವಾಮಿ ಶಾಸಕರಾಗಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ನಡೆಸಿದ ಜನತಾ ದರ್ಶನದಲ್ಲಿ ನನಗೆ 10 ಸಾವಿರ ಅರ್ಜಿ ಬಂದಿದೆ. ಅರ್ಜಿ ಕೊಟ್ಟವರ ಮೊಬೈಲ್ ಸಂಖ್ಯೆಯೂ ಇದೆ. ಆ ಅರ್ಜಿಗಳನ್ನೆಲ್ಲಾ ಕೌಂಟರ್‌ನಲ್ಲಿ ಸ್ವೀಕರಿಸಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
‘ರಾಜ್ಯ ಸರ್ಕಾರ ಏನೂ ಕೆಲಸ ಮಾಡದ ಕಾರಣ ಮಂಡ್ಯದ ಜನತಾ ದರ್ಶನದಲ್ಲಿ ನನಗೆ ಮೂರೂವರೆ ಸಾವಿರ ಅರ್ಜಿ ಬಂದಿದೆ’ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಶಿವಕುಮಾರ್, ‘ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಏನೂ ಕೆಲಸ ಮಾಡಿಲ್ಲ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಕೇ’ ಎಂದು ಪ್ರಶ್ನಿಸಿದರು.
‘ಕುಮಾರಸ್ವಾಮಿ ಮಾತ್ರ ರಾಜಕಾರಣ ಮಾಡುತ್ತಾರಾ? ನಮಗೂ ರಾಜಕಾರಣ ಮಾಡಲು ಬರುತ್ತದೆ. ಆದರೆ, ನಮಗೆ ರಾಜಕಾರಣ ಮುಖ್ಯ ಅಲ್ಲ, ಜನರ ಸೇವೆ ಮಾಡಬೇಕು ಎಂಬುದು ಮುಖ್ಯ’ ಎಂದರು.
ಮುಡಾ ಅಕ್ರಮದ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಡಾದಲ್ಲಿ ಆಸ್ತಿ ಕಳೆದುಕೊಂಡಿರುವವರು ಅರ್ಜಿ ಸಲ್ಲಿಸಿ ಪರಿಹಾರ ಪಡೆದಿದ್ದಾರೆ. ನಿಯಮದ ಪ್ರಕಾರ ನಿವೇಶನ ಹಂಚಿಕೆಯಾಗಿದೆ. ಈ ರೀತಿ ನಿವೇಶನ ಹಂಚಿಕೆಗೆ ಎಲ್ಲ ಕಡೆ ಅವಕಾಶ ಇದೆ. ಅದೇ ಪ್ರಕಾರ ಮುಡಾದವರು ಪರಿಹಾರ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಕೂಡ ಪ್ರಮಾಣಪತ್ರದಲ್ಲಿ ತಮ್ಮ ಪತ್ನಿಗೆ ಈ ರೀತಿ ಆಸ್ತಿ ಬಂದಿದೆ ಎಂಬ ಮಾಹಿತಿ ಕೊಟ್ಟಿದ್ದಾರೆ’ ಎಂದರು.
‘ಬಿಡಿಎಯಲ್ಲಿ 60:40 ಅನುಪಾತದಲ್ಲಿ ಪರಿಹಾರ ಕೊಡಲಾಗುತ್ತದೆ. ಮುಡಾದಲ್ಲಿ 50:50 ಅನುಪಾತದಲ್ಲಿ ನಿವೇಶನ ಪರಿಹಾರ ಕೊಡಲು ತೀರ್ಮಾನವಾಗಿದೆ. ಅದರ ಪ್ರಕಾರ ಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್‌ನವರು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ದೂರಿದರು.
13ರಂದು ಸಿಎಂ ಕಾರ್ಯಕರ್ತರ ಭೇಟಿ: ‘ಕೆಪಿಸಿಸಿ ಪದಾಧಿಕಾರಿಗಳು, ಕಾರ್ಯಕರ್ತರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 13ರಂದು ಭೇಟಿಯಾಗಲಿದ್ದಾರೆ. ಶೀಘ್ರದಲ್ಲೇ ದಿನಕ್ಕೆ ಇಬ್ಬರು ಸಚಿವರು ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುವ ಕಾರ್ಯಕ್ರಮ ರೂಪಿಸಲಾಗುವುದು. ಯಾವ ಸಚಿವರು, ಯಾವಾಗ ಲಭ್ಯ ಇರಲಿದ್ದಾರೆ ಎನ್ನುವ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು’ ಎಂದು ಶಿವಕುಮಾರ್ ತಿಳಿಸಿದರು.
‘ಪಕ್ಷವನ್ನು ಅಧಿಕಾರಕ್ಕೆ ತಂದಂತಹ ಕಾರ್ಯಕರ್ತರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಕರ್ತವ್ಯ. ಹಲವರು ತಮ್ಮ ಕ್ಷೇತ್ರದ ಜನರ ಸಮಸ್ಯೆ, ಜಮೀನು ಖಾತೆ, ವೈಯಕ್ತಿಕ ಕುಂದುಕೊರತೆಗಳು, ಪಕ್ಷದಲ್ಲಿ ಹುದ್ದೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ನಮ್ಮ ವ್ಯಾಪ್ತಿಯಲ್ಲಿ ಬಗೆಹರಿಸುವಂತಹ ಸಮಸ್ಯೆಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು. ಆಯಾ ಇಲಾಖೆಗಳಿಗೆ ಕಳಿಸುವ ವ್ಯವಸ್ಥೆಯನ್ನೂ ಮಾಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.