ಬೆಂಗಳೂರು: ‘ಜಂತಕಲ್ ಮೈನಿಂಗ್ ಕಂಪನಿಗೆ ಅಕ್ರಮವಾಗಿ ಗಣಿಗಾರಿಕೆ ಪರವಾನಿಗೆ ನೀಡಿದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಲೋಕಾಯುಕ್ತ ರಿಜಿಸ್ಟ್ರಾರ್ ಅವರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಬಸವಾಪಟ್ಟಣ ಹೋಬಳಿಯ ಕಬ್ಬಾಳ ಗ್ರಾಮದ ಮಾಹಿತಿ ಹಕ್ಕು ಕಾರ್ಯಕರ್ತ ಹರೀಶ ಹಳ್ಳಿ ಅರ್ಜಿದಾರರಾಗಿದ್ದು, ಇದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಅರ್ಜಿಯಲ್ಲಿ ಕಾನೂನು ಇಲಾಖೆಯ ಕಾರ್ಯದರ್ಶಿ, ಲೋಕಾಯುಕ್ತ ರಿಜಿಸ್ಟ್ರಾರ್ ಮತ್ತು ಮುಖ್ಯಮಂತ್ರಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಏನಿದು ಪ್ರಕರಣ?: ‘ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಜಂತಕಲ್ ಎಂಟರ್‌ಪ್ರೈಸಸ್‌ಗೆ ಗಣಿಗಾರಿಕೆ ನಡೆಸಲು ಪರವಾನಿಗೆ ನವೀಕರಿಸಿದ್ದು ಕಾನೂನು ಬಾಹಿರ. ಇದರಿಂದ ರಾಜ್ಯದ ಬೊಕ್ಕಸಕ್ಕೆ ₹ 250 ಕೋಟಿಯಷ್ಟು ನಷ್ಟ ಉಂಟಾಗಿದೆ’ ಎಂದು ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವರದಿ ನೀಡಿದ್ದರು.
ಈ ಸಂಬಂಧ ಕುಮಾರಸ್ವಾಮಿ ವಿರುದ್ಧ 2015ರಲ್ಲಿ ಲೋಕಾಯುಕ್ತ ಹಾಗೂ 2017ರಲ್ಲಿ ಎಸ್ಐಟಿಯಲ್ಲಿ ದೂರು ದಾಖಲಾಗಿತ್ತು. ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.