ಹುಬ್ಬಳ್ಳಿ: ಬಿಜೆಪಿ ಪ್ರಭಾವಿ ನಾಯಕ ಬಿ.ಎಸ್. ಯಡಿಯೂರಪ್ಪ, ಜಾರಕಿಹೊಳಿ ಸಹೋದರರು ಸೇರಿದಂತೆ ಕೆಲ ಸಂಸದರು, ಶಾಸಕರು ಹಾಗೂ ಮುಖಂಡರು ಪಕ್ಷದ ಕಾರ್ಯಕಾರಿಣಿಗೆ ಗೈರಾಗಿರುವುದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ.
ಯಡಿಯೂರಪ್ಪ ಸೇರಿದಂತೆ ಅವರ ಪುತ್ರರಾದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಪಕ್ಷದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಂಜೆಯಾದರೂ ಕಾರ್ಯಕಾರಿಣಿ ನಡೆಯುತ್ತಿರುವ ಜಾಗದತ್ತ ಸುಳಿಯಲಿಲ್ಲ. ಇನ್ನು ಜಾರಕಿಹೊಳಿ ಸಹೋದರರಾದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಸಚಿವರಾದ ಶ್ರೀರಾಮುಲು, ಹಾಲಪ್ಪ ಆಚಾರ್, ಆನಂದ ಸಿಂಗ್, ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಕೆಲ ಶಾಸಕರು ಕಾರ್ಯಕಾರಿಣಿಗೆ ತಡವಾಗಿ ಬಂದರು.
ಕಾರ್ಯಕಾರಿಣಿ ಸಂದರ್ಭದಲ್ಲೇ ಯಡಿಯೂರಪ್ಪ ಅವರು ದುಬೈ ಪ್ರವಾಸ ಕೈಗೊಂಡಿರುವುದು ಹಾಗೂ ಅವರ ಪುತ್ರರು ಕೂಡ ಬಾರದಿರುವುದು ಪಕ್ಷದೊಳಗೆ ಗುಸುಗುಸು ಮಾತುಗಳಿಗೆ ಎಡೆಮಾಡಿಕೊಟ್ಟಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಪಕ್ಷದ ಅಭ್ಯರ್ಥಿಗೆ ಸೋಲುಂಟಾದ ಬಗ್ಗೆ ಕಾರ್ಯಕಾರಿಣಿಯಲ್ಲಿ ಪರಾಮರ್ಶೆ ನಡೆಸಲಾಗುವುದು. ಜೊತೆಗೆ, ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದರು.
ಹಾಗಾಗಿ, ಜಾರಕಿಹೊಳಿ ಸಹೋದರರು ಕಾರ್ಯಕಾರಿಣಿಗೆ ಬಂದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಮುಖಂಡರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.