ADVERTISEMENT

ಶಸ್ತ್ರ ಕೆಳಗಿಟ್ಟ ರಮೇಶ ಜಾರಕಿಹೊಳಿ

ಬೇಡಿಕೆ ಈಡೇರಿಸಿದ ಕುಮಾರ: ಗಂಡಾಂತರದಿಂದ ಪಾರಾದ ಮೈತ್ರಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 19:30 IST
Last Updated 19 ಸೆಪ್ಟೆಂಬರ್ 2018, 19:30 IST
   

ಬೆಂಗಳೂರು: ಪ್ರತಿಷ್ಠೆ ಕಾರಣಕ್ಕೆ ಕಾಂಗ್ರೆಸ್‌ನ ರಾಜ್ಯ ನಾಯಕರ ವಿರುದ್ಧ ಸಮರ ಸಾರಿ ಉಭಯ ಪಕ್ಷಗಳ ವರಿಷ್ಠರ ನಿದ್ದೆಗೆಡಿಸಿದ್ದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಕೊನೆಗೂ ಶಸ್ತ್ರ ಕೆಳಗಿಟ್ಟಿದ್ದಾರೆ. ಇದರಿಂದಾಗಿ, ಮೈತ್ರಿ ಸರ್ಕಾರ ದೊಡ್ಡ ಬಿಕ್ಕಟ್ಟಿನಿಂದ ಪಾರಾಗಿದೆ.

ಬೆಳಗಾವಿಯ ಆಂತರಿಕ ರಾಜಕಾರಣದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಸ್ತಕ್ಷೇಪ ವಿಪರೀತವಾಗಿದೆ ಎಂದು ಆರೋಪಿಸಿದ್ದ ಸಹೋದರರು, ‘ಇದಕ್ಕೆ ಕಡಿವಾಣ ಹಾಕದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದ್ದರು.

‘ನಾನು ಬಿಜೆಪಿಗೆ ಸೇರುತ್ತಿಲ್ಲ. ಸಮುದಾಯದ ಹಿತದೃಷ್ಟಿಯಿಂದ ಕೆಲವು ಕ್ರಮ ಕೈಗೊಳ್ಳುವಂತೆ ಕೋರಿದ್ದೇನೆ. ಈ ಎಲ್ಲ ಬೇಡಿಕೆಗಳಿಗೆ ಕಾಂಗ್ರೆಸ್‌ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಹೆಚ್ಚೇನೂ ಮಾತನಾಡಬಯಸುವುದಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನನ್ನ ಬೇಡಿಕೆಗಳನ್ನು ಸಿದ್ದರಾಮಯ್ಯ ಅವರ ಮುಂದೆ ಇಟ್ಟಿದ್ದೇನೆ. ಅವರು ಹೈಕಮಾಂಡ್ ಗಮನಕ್ಕೆ ತರುತ್ತಾರೆ’ ಎಂದೂ ಅವರು ಹೇಳಿದರು.

ಈ ಬೆಳವಣಿಗೆಯ ಬೆನ್ನಲ್ಲೇ, ಆಸ್ಪತ್ರೆಗೆ ದಾಖಲಾಗಿರುವ ಶಿವಕುಮಾರ್ ಅವರನ್ನು ಭೇಟಿ ಮಾಡಿದ ರಮೇಶ, ಒಂದು ಗಂಟೆಗೂ ಹೆಚ್ಚು ಕಾಲ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಅಲ್ಲಿಗೆ ಕಾಂಗ್ರೆಸ್‌ ಅಂತರ್ಯುದ್ಧ ಸದ್ಯಕ್ಕೆ ಕೊನೆಗೊಂಡಂತಾಗಿದೆ.

ಮುಖ್ಯಮಂತ್ರಿ ಭೇಟಿಯ ನಂತರ ಸತೀಶ ಜಾರಕಿಹೊಳಿ ಅವರು ತಣ್ಣಗಾಗಿದ್ದರು. ಆದರೆ, ರಮೇಶ ಅವರು ಪಟ್ಟು ಮುಂದುವರಿಸಿದ್ದರು. ರೋಷನ್‌ ಬೇಗ್‌ ಹಾಗೂ ಎಂ.ಟಿ.ಬಿ.ನಾಗರಾಜ್‌ ಅವರು ಬುಧವಾರ ಬೆಳಿಗ್ಗೆ ರಮೇಶ ಅವರನ್ನು ಭೇಟಿ ಮಾಡಿ ಸಂಧಾನ ನಡೆಸಿದ್ದರು. ‘ಪ್ರತಿಷ್ಠೆ ಕಾರಣಕ್ಕೆ ಈಗ ಗಡಿಬಿಡಿ ಮಾಡುವುದು ಬೇಡ. ಐದು ವರ್ಷ ಕಾಯೋಣ. ನಮ್ಮ ಸಾಮ್ರಾಜ್ಯ ರಾಜ್ಯಕ್ಕೂ ವಿಸ್ತರಣೆ ಆಗಲಿದೆ. ಡಿ.ಕೆ.ಶಿವಕುಮಾರ್ ಅವರ ರೀತಿಯಲ್ಲೇ ನಾವು ರಾಜಕಾರಣ ಮಾಡಬಹುದು. ಒಂದು ವೇಳೆ ಬಿಜೆಪಿಗೆ ಸೇರಿದರೆ ನಾವು ಮೂಲೆಗುಂಪು ಆಗುತ್ತೇವೆ’ ಎಂದು ಸತೀಶ ಅವರು ಸಹೋದರನಿಗೆ ಕಿವಿಮಾತು ಹೇಳಿದ್ದರು.

‘ಕಾಂಗ್ರೆಸ್‌ನಲ್ಲಿ ವಿವಿಧ ಘಟಕಗಳ ಮೂಲಕ ವರಿಷ್ಠರನ್ನು ಸಂಪರ್ಕಿಸಬಹುದು. ಆದರೆ, ಬಿಜೆಪಿಯಲ್ಲಿ ಪರಿಸ್ಥಿತಿ ಹಾಗಿಲ್ಲ. ಬಿಜೆಪಿ ರಾಜ್ಯ ಘಟಕದ ಉಸ್ತುವಾರಿಯನ್ನೇ ಭೇಟಿ ಮಾಡುವುದು ಕಷ್ಟ’ ಎಂದು ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಈ ಬೇಡಿಕೆಗಳ ಮೂಲಕ ಪರಿಶಿಷ್ಟ ಪಂಗಡದ ನಾಯಕನಾಗಲು ರಮೇಶ ಹೊರಟಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅವರು ವಾಲ್ಮೀಕಿ/ನಾಯಕ ಸಮುದಾಯಕ್ಕೆ ಸೇರಿದವರು. ಬಳ್ಳಾರಿಯ ಶಾಸಕ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸುವುದು ಅವರ ತಂತ್ರಗಾರಿಕೆಯ ಭಾಗ.

ಮೂವರು ಸಚಿವರ ಕೈಬಿಡಲು ಸಮನ್ವಯ ಸೂತ್ರ

ಸಚಿವ ಸ್ಥಾನ ಸಿಗದೆ ಕುದಿಯುತ್ತಿರುವ ಶಾಸಕರನ್ನು ಸಮಾಧಾನಪಡಿಸಲು ಕಾಂಗ್ರೆಸ್‌ ಸಮನ್ವಯ ಸೂತ್ರ ಸಿದ್ಧಪಡಿಸಿದೆ. ಮೂವರು ಸಚಿವರನ್ನು ಕೈಬಿಟ್ಟು ಅತೃಪ್ತರಿಗೆ ಅವಕಾಶ ಮಾಡಿಕೊಡುವುದು ಆಲೋಚನೆ.

ಕಾಂಗ್ರೆಸ್‌ ಕೋಟಾದಲ್ಲಿ ಆರು ಸಚಿವ ಸ್ಥಾನಗಳು ಖಾಲಿ ಇವೆ. ಆಕಾಂಕ್ಷಿಗಳ ಸಂಖ್ಯೆ 20ಕ್ಕೂ ಅಧಿಕ ಇದೆ. ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಜೇನುಗೂಡಿಗೆ ಕಲ್ಲು ಬಿಸಾಡಿದಂತಾಗುತ್ತದೆ ಎಂಬುದು ಕೈಪಾಳಯದ ಹಿರಿಯ ನಾಯಕರಿಗೂ ಗೊತ್ತು. ಅಕ್ಟೋಬರ್‌ 10ರೊಳಗೆ ಸಂಪುಟ ವಿಸ್ತರಣೆ ಮಾಡಬೇಕು ಎಂಬ ಬಗ್ಗೆ ಗಂಭೀರ ಚಿಂತನೆ ನಡೆದಿದೆ.

ಎಂ.ಟಿ.ಬಿ ನಾಗರಾಜ್‌, ಇ. ತುಕಾರಾಂ ಅಥವಾ ಬಿ.ನಾಗೇಂದ್ರ, ಎಂ.ಬಿ.ಪಾಟೀಲ, ರಾಮಲಿಂಗಾ ರೆಡ್ಡಿ ಅವರನ್ನು ಸಂಪುಟಕ್ಕೆ ಸೇರುವವರ ಪಟ್ಟಿಯಲ್ಲಿ ಇದ್ದಾರೆ. ಸಂಪುಟದಿಂದ ಯಾರನ್ನು ಕೈಬಿಡಲಾಗುತ್ತದೆ ಎಂಬುದು ಸದ್ಯಕ್ಕೆ ನಿರ್ಧಾರವಾಗಿಲ್ಲ.

ವಿಧಾನಸಭೆ ಚುನಾವಣೆ ವೇಳೆ ಪಕ್ಷಕ್ಕೆ ಬಂದ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಬಳ್ಳಾರಿ ಜಿಲ್ಲೆಯ ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ತುಕಾರಾಂ ಹಾಗೂ ಭೀಮಾನಾಯ್ಕ ವಿರೋಧ ವ್ಯಕ್ತಪಡಿಸಿದ್ದಾರೆ.

ವರಿಷ್ಠರ ಮುಂದೆ ನಾಲ್ಕು ಬೇಡಿಕೆ

ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆಯನ್ನೂ ರಮೇಶ ಕೈಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದ (ಎಸ್‌ಟಿ) ಹಿತ ಕಾಯಬೇಕು ಎಂದು ಅವರು ಹಕ್ಕೊತ್ತಾಯ ಮಂಡಿಸಿದ್ದಾರೆ.

ಪರಿಶಿಷ್ಟ ಪಂಗಡದ ನಾಯಕರೊಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ ಶೇ 7.5ಕ್ಕೆ ಏರಿಸಬೇಕು. ಸಮುದಾಯದ ನಾಯಕರೊಬ್ಬರನ್ನು ಕೆಪಿಎಸ್‌ಸಿಗೆ ನೇಮಕ ಮಾಡಬೇಕು. ವಿಧಾನ ಪರಿಷತ್‌ಗೆ ಎಸ್‌ಟಿ ನಾಯಕರೊಬ್ಬರನ್ನು ನೇಮಕ ಮಾಡಬೇಕು ಎಂಬುದು ಅವರ ಬೇಡಿಕೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.