ಬೆಂಗಳೂರು: ಭಾರಿ ಮಳೆಯಿಂದಾಗಿ ಜಕ್ಕೂರಿನ ಜವಾಹರ ಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್) ನೆಲಮಹಡಿಯ ಪ್ರಯೋಗಾಲಯಗಳಿಗೆ ನೀರು ನುಗ್ಗಿದ್ದು, ಸಂಶೋಧನೆಗೆ ಬಳಸುತ್ತಿದ್ದ ಜೀವಕೋಶಗಳು, ಆಕರ ಕೋಶಗಳು, ವೈರಾಣುಗಳ ಮಾದರಿಗಳು ಹಾನಿಗೊಳಗಾಗಿವೆ. ಇದರಿಂದಾಗಿ ದಶಕಗಳಿಂದ ಇಲ್ಲಿ ನಡೆಯುತ್ತಿರುವ ಸಂಶೋಧನೆಗೆ ಧಕ್ಕೆಯಾಗಿದೆ.
ಅಣು ಜೀವವಿಜ್ಞಾನ ಮತ್ತು ವಂಶವಾಹಿ ವಿಜ್ಞಾನದ ಪ್ರಯೋಗಾಲಯವು ಸೇರಿ ಅನೇಕ ಪ್ರಯೋಗಾಲಯಗಳು ಸಂಸ್ಥೆಯ ನೆಲ ಮಹಡಿಯಲ್ಲಿವೆ. ಭಾನುವಾರ ರಾತ್ರಿಪ್ರಯೋಗಾಲಯದೊಳಗೆ ನಾಲ್ಕೈದು ಅಡಿಗಳಷ್ಟು ನೀರು ತುಂಬಿತ್ತು. ಇದರಿಂದಾಗಿ ಅತ್ಯಾಧುನಿಕ ಸೂಕ್ಷ್ಮದರ್ಶಕಗಳು, ಮೈನಸ್ 80 ಸೆಂಟಿಗ್ರೇಡ್‌ವರೆಗೂ ಉಷ್ಣಾಂಶ ಕಾಯ್ದುಕೊಳ್ಳುವ ಶೀತಲೀಕರಣ ಯಂತ್ರಗಳು ಸೇರಿ ಅನೇಕ ಉಪಕರಣಗಳು ಕೆಟ್ಟುಹೋಗಿವೆ.
‘ಹಲವಾರು ವೈಜ್ಞಾನಿಕ ಉಪಕರಣಗಳು ಹಾನಿಗೊಳಗಾಗಿವೆ.ಸಂಶೋಧನಾ ಚಟುವಟಿಕೆಗಳಿಗೆ ಊಹಿಸಲಾಗದಷ್ಟು ನಷ್ಟ ಉಂಟಾಗಿದೆ. 20 ವರ್ಷ ಹಿಂದಿನಿಂದಲೂ ಸಂಗ್ರಹಿಸಿದ್ದ ಜೀವಕೋಶಗಳ ಮಾದರಿಗಳನ್ನು ಕಳೆದುಕೊಂಡಿದ್ದೇವೆ. ನಷ್ಟದ ಪ್ರಮಾಣವನ್ನು ಇನ್ನಷ್ಟೇ ಲೆಕ್ಕ ಹಾಕಬೇಕಿದೆ’’ ಎಂದು ಜೆಎನ್‌ಸಿಎಎಸ್‌ಆರ್ ಅಧ್ಯಕ್ಷ ಪ್ರೊ.ಗಿರಿಧರ ಯು.ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.
ಅನೇಕ ಸಂಶೋಧನೆಗಳು ಅಂತಿಮ ಹಂತದಲ್ಲಿದ್ದವು. ಅವುಗಳನ್ನು ಪೂರ್ಗೊ ಳಿಸುವುದು ಹೇಗೆಂದೇ ತೋಚುತ್ತಿಲ್ಲ ಎಂದು ಇಲ್ಲಿ ಸಂಶೋಧನಾನಿರತ ವಿಜ್ಞಾನಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದರು.
‘ಅಲ್ಝೈಮರ್ಸ್, ಪಾರ್ಕಿನ್ಸನ್, ಎಚ್‌ಐವಿ, ಮಲೇರಿಯಾ, ಅಪಸ್ಮಾರ ಸೇರಿದಂತೆ ಆರು ಪ್ರಮುಖ ಕಾಯಿಲೆಗಳಿಗೆ ಸಂಬಂಧಿಸಿದ ಸಂಶೋಧನೆಗಳು ಇಲ್ಲಿನ ಪ್ರಯೋಗಾಲಯಗಳಲ್ಲಿ ನಡೆಯುತ್ತಿವೆ. ಆಕರ ಕೋಶಗಳ, ಮಿದುಳಿನ ಜೀವಕೋಶಗಳ ಹಾಗೂ ವಂಶವಾಹಿ ಸಂಶೋಧನೆಗೆ ಸಂಬಂಧಿಸಿದ ಜೀವಕೋಶಗಳ ಮಾದರಿಗಳ ಭಾರಿ ಸಂಗ್ರಹ ಇಲ್ಲಿದೆ. ಇವುಗಳನ್ನು ಕಳೆದುಕೊಳ್ಳಬೇಕಾದ ಪ್ರಮೇಯ ಎದುರಾಗಿದೆ’ ಎಂದು ಅಣು ಜೀವವಿಜ್ಞಾನ ಮತ್ತು ವಂಶವಾಹಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ರವಿ ಮಂಜತ್ತಾಯ ಬೇಸರ ವ್ಯಕ್ತಪಡಿಸಿದರು.
‘ನಮ್ಮ ಸಂಸ್ಥೆಯ ಸಂಶೋಧನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿವೆ. ನಮ್ಮ ವಿಜ್ಞಾನಿಗಳೇ ಅಭಿವೃದ್ಧಿಪಡಿಸಿರುವ ರಿಏಜೆಂಟ್‌ಗಳನ್ನು ಕಳೆದುಕೊಂಡಿದ್ದೇವೆ. ಅನೇಕ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ’ ಎಂದರು.
ಇನ್ನೊಬ್ಬ ವಿಜ್ಞಾನಿ ಪ್ರೊ.ಶಿವಪ್ರಸಾದ್, ‘ನೆಲಮಹಡಿಯಲ್ಲಿದ್ದ ಕೆಲವು ಪ್ರಯೋಗಾಲಯಗಳಲ್ಲಿ ಮೂರು– ನಾಲ್ಕು ಅಡಿಗಳಷ್ಟು ನೀರು ನಿಂತಿತ್ತು. ಅನಿವಾರ್ಯವಾಗಿ ಉಪಕರಣಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬೇಕಾಯಿತು. ಅಳಿದುಳಿದ ಮಾದರಿಗಳಲ್ಲಿ ಈಗ ಎಷ್ಟು ಸುಸ್ಥಿತಿಯಲ್ಲಿವೆ ಎಂಬುದು ತಿಳಿಯದು. ಸಂಶೋಧನಾ ಚಟುವಟಿಕೆಯನ್ನು ಸಹಜ ಸ್ಥಿತಿಗೆ ತರಲು ತಿಂಗಳಾನುಗಟ್ಟಲೆ ಶ್ರಮಿಸಬೇಕಿದೆ. ಸದ್ಯ ಹಾನಿಯ ಲೆಕ್ಕಾಚಾರದಲ್ಲಿ ತೊಡಗಿದ್ದೇವೆ’ ಎಂದರು.
‘ಸಂಶೋಧನೆ ಪ್ರಕ್ರಿಯೆಯು ಇನ್ನೇನು ಮುಗಿಯುವ ಹಂತದಲ್ಲಿತ್ತು. ಅಷ್ಟರಲ್ಲಿ ಕೋವಿಡ್ ಎದುರಾಯಿತು. ಕೆಲ ತಿಂಗಳ ಹಿಂದಷ್ಟೇ ಸಂಶೋಧನೆ ಪುನರಾರಂಭ ಮಾಡಿದ್ದೆವು. ಪ್ರವಾಹ ನಮ್ಮ ಶ್ರಮವನ್ನೆಲ್ಲ ನೀರುಪಾಲು ಮಾಡಿದೆ. ದಿಕ್ಕೇ ತೋಚದ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಸಂಶೋಧನಾ ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.
ಮುಖ್ಯಮಂತ್ರಿ ಭೇಟಿ– ನೆರವಿನ ಭರವಸೆ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೆಎನ್‌ಸಿಎಎಸ್‌ಆರ್ ಪ್ರಾಂಗಣಕ್ಕೆ ಮಂಗಳವಾರ ಭೇಟಿ ನೀಡಿ, ಪ್ರವಾಹದಿಂದ ಆಗಿರುವ ಹಾನಿಯನ್ನು ಪರಿಶೀಲಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ಸಿ.ಎನ್.ಆರ್.ರಾವ್ ಜೊತೆಗೂ ಸಮಾಲೋಚನೆ ನಡೆಸಿದರು.
‘ಭವಿಷ್ಯದಲ್ಲಿಇಲ್ಲಿ ಪ್ರವಾಹ ತಡೆಯಲು ರಾಜಕಾಲುವೆ ವಿಸ್ತರಿಸಬೇಕು ಅಥವಾ ಪ್ರಾಂಗಣದೊಳಗೆ ನೀರು ನುಗ್ಗದಂತೆ ತಡೆಯಲು ಪರ್ಯಾಯ ಕಾಲುವೆ ರಚಿಸಬೇಕು’ ಎಂದು ಪ್ರೊ.ಗಿರಿಧರ ಕುಲಕರ್ಣಿ ಅವರು ಮುಖ್ಯಮಂತ್ರಿಯವರನ್ನು ಕೋರಿದರು.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು. ‘ಇದು ದೇಶದ ಪ್ರಮುಖ ಸಂಶೋಧನಾ ಕೇಂದ್ರ. ಈ ಸಂಸ್ಥೆಯ ರಕ್ಷಣೆ ನಮ್ಮ ಕರ್ತವ್ಯ. ಇಲ್ಲಿನ ಸಂಶೋಧನಾ ಚಟುವಟಿಕೆಗೆ ಭವಿಷ್ಯದಲ್ಲಿ ತೊಂದರೆಯಾಗದಂತೆ ಕಾಳಜಿ ವಹಿಸುತ್ತೇವೆ’ ಎಂದು ಬೊಮ್ಮಾಯಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.