ADVERTISEMENT

ಜಯಲಲಿತಾ ಜಪ್ತಿ ಆಸ್ತಿಯ ವಾರಸುದಾರಿಕೆ ಕೋರಿದ್ದ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 22:30 IST
Last Updated 15 ಜುಲೈ 2023, 22:30 IST
ಜಯಲಲಿತಾ
ಜಯಲಲಿತಾ   

ಬೆಂಗಳೂರು: ‘ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ಬಹುಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳನ್ನು ಕಾನೂನುಬದ್ಧ ವಾರಸುದಾರರಾದ ನಮಗೆ ನೀಡಬೇಕು’ ಎಂದು ಜಯಲಲಿತಾ ಅವರ ಸಹೋದರರ ಮಕ್ಕಳಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ‌ ವಜಾಗೊಳಿಸಿದೆ.

ಜಯಲಲಿತಾ ಸಹೋದರ ಜಯಕುಮಾರ್‌ ಅವರ ಮಕ್ಕಳಾದ ಜೆ. ದೀಪಕ್‌ ಮತ್ತು ಜೆ. ದೀಪಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಎ.ಮೋಹನ್‌ ವಿಚಾರಣೆ ನಡೆಸಿ ವಜಾಗೊಳಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಕ್ಕೆ ವಿರುದ್ಧವಾದ ಅರ್ಥವನ್ನು ಈ ನ್ಯಾಯಾಲಯ ನೀಡಲಾಗದು. ಜಯಲಲಿತಾ ಅವರ ಕಾನೂನುಬದ್ಧ ಸಂಬಂಧಿಗಳ ಕುರಿತು ವ್ಯಾಖ್ಯಾನ ಮಾಡಲು ಈ ನ್ಯಾಯಾಲಯ ವ್ಯಾಪ್ತಿ ಹೊಂದಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

‘ಎಲ್ಲಾ ಆಸ್ತಿಗಳನ್ನು ಅಕ್ರಮವಾಗಿ ಸಂಪಾದಿಸಲಾಗಿದೆ. ಹೀಗಾಗಿ, ಅವುಗಳನ್ನು ವಶಪಡಿಸಿಕೊಳ್ಳಲು ಆದೇಶಿಸಲಾಗಿದೆ. ಹೀಗಾಗಿ, ಈ ಆಸ್ತಿಗಳು ಸರ್ಕಾರಕ್ಕೆ ಸೇರುತ್ತವೆಯೇ ವಿನಃ ಅರ್ಜಿದಾರರಿಗೆ ಅಲ್ಲ’ ಎಂದು ಸ್ಪಷ್ಟಪಡಿಸಲಾಗಿದೆ.

‘ಅರ್ಜಿದಾರರು ಕಾನೂನಾತ್ಮಕವಾಗಿ ಜಯಲಲಿತಾ ವಾರಸುದಾರರೇ ಆಗಿದ್ದರೂ ವಾಸ್ತವದಲ್ಲಿ ಜಯಲಲಿತಾ ಅವರಿಂದ ರಾಜ್ಯ ಸರ್ಕಾರ ವಶಪಡಿಸಿಕೊಂಡಿರುವ ಮತ್ತು ಜಪ್ತಿ ಮಾಡಿರುವ ವಸ್ತುಗಳನ್ನು ಪಡೆಯಲು ಅರ್ಹರು ಎಂದು ಹೇಳಲಾಗದು’ ಎಂದು ತಿಳಿಸಿದೆ.

‘ಜಯಲಲಿತಾ ಮತ್ತು ಇತರೆ ಆರೋಪಿಗಳಾದ ವಿ.ಕೆ. ಶಶಿಕಲಾ ನಟರಾಜನ್, ವಿ.ಎನ್‌. ಸುಧಾಕರನ್‌ ಮತ್ತು‌ ಜೆ. ಇಳವರಸಿ ಅವರಿಗೆ ಸೇರಿದ ಆಸ್ತಿಗಳನ್ನು ಪ್ರತ್ಯೇಕಿಸಲಾಗಿಲ್ಲ. ಎಲ್ಲಾ ಆರೋಪಿಗಳು ಒಟ್ಟಿಗೆ ಸೇರಿ ಬೇನಾಮಿ ಕಂಪನಿಗಳನ್ನು ಆರಂಭಿಸಿ ಅಕ್ರಮ ಹಣವನ್ನು ಅವುಗಳಲ್ಲಿ ಹೂಡಿಕೆ ಮಾಡಿ ಆಸ್ತಿ ಗಳಿಸಿದ್ದರು ಎಂದು ಹೇಳಲಾಗಿದೆ. ಹಾಗಾಗಿ, ಜಯಲಲಿತಾ ಸಾವಿನ ಕಾರಣದಿಂದ ಅವರ ವಿರುದ್ಧದ ಆರೋಪ ಕೈಬಿಟ್ಟರೂ ಅಕ್ರಮ ಮಾರ್ಗದ ಮೂಲಕ ಸಂಪಾದಿಸಿರುವ ಆಸ್ತಿಯನ್ನು ಜಯಲಲಿತಾ ಅವರ ಕಾನೂನಾತ್ಮಕ ವಾರಸುದಾರರಿಗೆ ನೀಡಲಾಗದು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.