ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಆಹ್ವಾನಿಸದೇ ಇರುವ ರಾಜ್ಯ ಸರ್ಕಾರದ ನಡೆಗೆ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್,ಕೆಂಪೇಗೌಡರನ್ನು ಸ್ವತಃ ನರೇಂದ್ರ ಮೋದಿ ಅವರೇ ರಾಜಕೀಯಕ್ಕೆ ಎಳೆದು ತಂದಿದ್ದಾರೆ ಎಂದು ಪ್ರಧಾನಿ, ರಾಜ್ಯ ಸರ್ಕಾರ ಹಾಗೂಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದೆ.
ಕೆಂಪೇಗೌಡರು ಬೆಂಗಳೂರು ಸ್ಥಾಪಿಸಿದರೆ, ನಗರದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ, ಪ್ರಧಾನಿ ಹುದ್ದೆಗೇರಿದ್ದ ಏಕೈಕ ಕನ್ನಡಿಗ ದೇವೇಗೌಡ ಅವರಿಗೆ ಆಹ್ವಾನ ನೀಡದೆ ಇರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ ಎಂದೂ ಪ್ರತಿಪಾದಿಸಿದೆ.
ಪ್ರತಿಮೆ ಅಡಿಗಲ್ಲು ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿಗಳನ್ನು ಆಹ್ವಾನಿಸಿದ್ದ ಬಿಜೆಪಿ ಸರ್ಕಾರ, ಪ್ರತಿಮೆ ಅನಾವರಣ ಸಮಾರಂಭಕ್ಕೆ ಅವರನ್ನು ಏಕೆ ಆಹ್ವಾನಿಸಿಲ್ಲ? ಸ್ಥಳೀಯ ಮಟ್ಟದ ಕಾರ್ಯಕ್ರಮವಾಗಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಪ್ರಧಾನಿ ಭಾಗವಹಿಸಿದ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿಗಳನ್ನು ಅಧಿಕೃತವಾಗಿ ಕರೆಯಲೇಬೇಕಿತ್ತು. ಅವರ ಬಗ್ಗೆ ಅನಾದರ ತೋರಿದ್ದು ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ರಾಜಕೀಯ ಕಾರಣಕ್ಕಾಗಿ ಗೌಡರನ್ನು ಕಡೆಗಣಿಸಲಾಗಿದೆ. ಸರ್ಕಾರಿ ಕಾರ್ಯಕ್ರಮ ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮದಂತೆ ಬಿಂಬಿಸಲಾಗಿದೆ.ಸರ್ವ ಜನರನ್ನು ಸಮಾನವಾಗಿ ಕಂಡು ಆದರ್ಶ ಪ್ರಭುವಾಗಿದ್ದ ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆಯುವ ಕೆಲಸವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮಾಡಿರುವುದು ಸ್ಪಷ್ಟ ಎಂದು ಟೀಕಿಸಿದೆ.
ರಾಜ್ಯ ಸರ್ಕಾರ ಪ್ರಧಾನಿ ಅವರ ದಾರಿ ತಪ್ಪಿಸಿದೆ. ದೇವೇಗೌಡರ ಬಗ್ಗೆ ಗೌರವ ಇಟ್ಟುಕೊಂಡಿದ್ದ ಪ್ರಧಾನಿಯನ್ನು ಕನ್ನಡಿಗರು ಸಂಶಯದಿಂದ ನೋಡುವಂತೆ ಮಾಡಲಾಗಿದೆ.ಕೆಂಪೇಗೌಡರು ಬಿಜೆಪಿ ಆಸ್ತಿಯಲ್ಲ, ಕೆಲ ಸಚಿವರ ಜಹಗೀರಲ್ಲ, ಅವರು ಸಮಸ್ತ ಕನ್ನಡಿಗರ ಹೆಮ್ಮೆ. ನಮ್ಮ ಅರಾಧ್ಯದೈವ. ಬೆಂಗಳೂರು ನಗರ ನಮ್ಮೆಲ್ಲರದ್ದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.