ADVERTISEMENT

BPL ಕಾರ್ಡ್‌ ರದ್ದು; ಮಾತು ತಪ್ಪಿದ ಭ್ರಷ್ಟ ಸರ್ಕಾರ– ಜೆಡಿಎಸ್ ಆರೋಪ

‘ಪ್ರಜಾವಾಣಿ’ ವರದಿ ‘ಬಿಪಿಎಲ್‌ ಕಾರ್ಡ್‌ ಕಸಿದ ’ಐಟಿ ಪಟ್ಟಿ’‘ ಹಂಚಿಕೊಂಡು ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 12:48 IST
Last Updated 30 ಸೆಪ್ಟೆಂಬರ್ 2024, 12:48 IST
   

ಮಂಡ್ಯ: ‘ಗ್ಯಾರಂಟಿ ಹೆಸರಲ್ಲಿ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿ ದಿವಾಳಿಯಾಗಿರುವ ಕಾಂಗ್ರೆಸ್‌ ಸರ್ಕಾರ, ಈಗ ಇಲ್ಲ ಸಲ್ಲದ ಕುಂಟು ನೆಪಗಳನ್ನು ಒಡ್ಡಿ ಬಿಪಿಎಲ್‌ ಕಾರ್ಡ್‌ಗಳಿಗೆ ಕತ್ತರಿ ಹಾಕುತ್ತಿದೆ’ ಎಂದು ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿದೆ.

‘ಪ್ರಜಾವಾಣಿ’ಯಲ್ಲಿ ಸೋಮವಾರ ಪ್ರಕಟವಾದ ‘ಬಿಪಿಎಲ್‌ ಕಾರ್ಡ್‌ ಕಸಿದ ಐಟಿ ಪಟ್ಟಿ’ ವಿಶೇಷ ವರದಿಯ ಜೊತೆ, ಸಿದ್ದರಾಮಯ್ಯ ಅವರು ಮಾತನಾಡಿದ್ದ ‘ನನಗೂ ಫ್ರೀ, ನಿಮಗೂ ಫ್ರೀ, ಕಾಕಾ ಪಾಟೀಲ್‌ಗೂ ಫ್ರೀ’ ಎಂಬ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸರ್ಕಾರವನ್ನು ಜೆಡಿಎಸ್‌ ತರಾಟೆಗೆ ತೆಗೆದುಕೊಂಡಿದೆ.

‘ಪ್ಯಾನ್‌ -ಆಧಾರ್‌ ಕಾರ್ಡ್‌ ಜೋಡಣೆಯ ಅವಧಿ ಮೀರಿದವರು ಐಟಿ ಇಲಾಖೆಗೆ ₹1 ಸಾವಿರ ದಂಡ ಪಾವತಿಸಿದ್ದರು. ಇದನ್ನೇ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಭ್ರಷ್ಟ ಕಾಂಗ್ರೆಸ್‌ ಸರ್ಕಾರ, ರಾಜ್ಯದಲ್ಲಿ 1,06,152 ಮಂದಿಯ ಬಿಪಿಎಲ್‌ ಕಾರ್ಡ್‌ಗಳನ್ನು ಅನರ್ಹಗೊಳಿಸಿ, ಅವರನ್ನು ಸರ್ಕಾರದ ವಿವಿಧ ಸವಲತ್ತು ಹಾಗೂ ‘ಗ್ಯಾರಂಟಿ’ ಯೋಜನೆಗಳಿಂದ ಕೈಬಿಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ADVERTISEMENT

‘ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ, ಅಕ್ಕಿ ಹಣವನ್ನು ಕೊಡಲು ಕಾಸಿಲ್ಲದೆ ಹೆಣಗಾಡುತ್ತಿರುವ ಕೈಲಾಗದ ಸಿದ್ದರಾಮಯ್ಯ ಸರ್ಕಾರ, ಈಗ ಬಡ ಮಹಿಳೆಯರ ಗೃಹಲಕ್ಷ್ಮಿ ಹಣಕ್ಕೆ ಕತ್ತರಿ ಹಾಕಿ, ಅನ್ನಭಾಗ್ಯಕ್ಕೂ ಕೊಕ್ಕೆ ಹಾಕುತ್ತಿದೆ. ತಾಂತ್ರಿಕ ಸಮಸ್ಯೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ನಿಮ್ಮದು ಮಾತು ತಪ್ಪಿದ, ಭ್ರಷ್ಟ ಸರ್ಕಾರ’ ಎಂದು ಆರೋಪಿಸಿದೆ.

ಜನವಾದಿ ಸಂಘಟನೆ ಆಕ್ರೋಶ

‘ಬಡ ಜನರನ್ನು ‘ಆದಾಯ ಪಾವತಿದಾರರು’ ಎಂದು ತಪ್ಪಾಗಿ ಭಾವಿಸಿ, ಸರ್ಕಾರ ಬಡವರ ಅನ್ನ ಕಸಿದಿದೆ’ ಎಂದು ಜನವಾದಿ ಮಹಿಳಾ ಸಂಘ ಖಂಡನೆ ವ್ಯಕ್ತಪಡಿಸಿದೆ.

‘ಆಧಾರ್‌–ಪಾನ್‌ ಜೋಡಣೆ ತಡವಾಗಿದೆ ಎಂದು ಬಡಜನರಿಂದ ದಂಡ ಕಟ್ಟಿಸಿಕೊಂಡಿದ್ದಲ್ಲದೆ, ಈಗ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿ, ಗಾಯದ ಮೇಲೆ ಬರೆ ಎಳದಿದೆ. ತಕ್ಷಣವೇ ಸರ್ಕಾರ ಅನ್ಯಾಯವನ್ನು ಸರಿಪಡಿಸಿ, ಬಡಜನರಿಗೆ ನ್ಯಾಯ ಕಲ್ಪಿಸಬೇಕು’ ಎಂದು ಜನವಾದಿ ಮಹಿಳಾ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ದೇವಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.