ನೆಲಮಂಗಲ: ನೀರಾವರಿ ವಿಷಯವನ್ನೇ ‘ಅಸ್ತ್ರ’ವಾಗಿ ಮುಂದಿಟ್ಟುಕೊಂಡು ಜೆಡಿಎಸ್ 2023ರ ವಿಧಾನಸಭಾ ಚುನಾ
ವಣೆಗೆ ರಣಕಹಳೆಯನ್ನು ಊದಿದೆ. ಏಪ್ರಿಲ್ 16 ರಿಂದ ಆರಂಭವಾದ ‘ಜನತಾ ಜಲಧಾರೆ’ಯ ಸಮಾರೋಪವು ಶುಕ್ರವಾರ ಇಲ್ಲಿಗೆ ಸಮೀಪದ ಬಾವಿಕೆರೆಯಲ್ಲಿ ನಡೆಯಿತು.
ಭಾರಿ ಜನಸ್ತೋಮದ ಹರ್ಷೋದ್ಗಾರದ ನಡುವೆ ಸಂದೇಶ ನೀಡಿದ ಪಕ್ಷದ ಮುಖಂಡರು, ಜೆಡಿಎಸ್ ಕನ್ನಡಿಗರ ಪಕ್ಷ, ಕನ್ನಡಿಗರ ಸ್ವಾಭಿಮಾನದ ಪ್ರತೀಕದ ಪಕ್ಷ. ಕನ್ನಡಿಗರ ಹಕ್ಕುಗಳನ್ನು ಪಡೆಯಲು ಪ್ರಾದೇಶಿಕ ಪಕ್ಷವನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದು ಪ್ರತಿಪಾದಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬೆಳಿಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಬಳಿಕ ತಮ್ಮ ತಂದೆ ಎಚ್.ಡಿ.ದೇವೇಗೌಡ ಮತ್ತು ತಾಯಿ ಚೆನ್ನಮ್ಮ ಅವರ ಆಶೀರ್ವಾದವನ್ನು ಪಡೆದು ಸಂಜೆ ಸಮಾರೋಪದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಎರಡೂ ಬಾರಿಯೂ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದೆ. ಅದರ ಸಹವಾಸದಿಂದ ನಿಮಗಾಗಿ (ಕಾರ್ಯಕರ್ತರು) ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ. ನನ್ನನ್ನು ಬೆಳೆಸಿದ ನೀವು ಯಾವುದೇ ಪದವಿಗೂ ಆಸೆ ಪಡಲಿಲ್ಲ. ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಬಹುಮತದ ಸ್ವತಂತ್ರ ಸರ್ಕಾರ ಅಧಿಕಾರಕ್ಕೆ ತರಲು ಶಪಥ ಮಾಡುತ್ತೇನೆ. ಕನ್ನಡಿಗರ ಭಾವನೆಗೆ ಸ್ಪಂದಿಸುವ ರೀತಿ ರಾಜ್ಯದಲ್ಲಿ ಸಮೃದ್ಧಿಯನ್ನು ತರುವ ಮತ್ತು ಸರ್ವಜನಾಂಗದ ಶಾಂತಿಯ ತೋಟವಾಗಿಸುವ ಸರ್ಕಾರವನ್ನು ತರೋಣ’ ಎಂದು ಹೇಳಿದರು.
‘ಮೈತ್ರಿ ಸರ್ಕಾರದ ಸಹವಾಸ ಬೇಡ.ಕನ್ನಡಿಗರಿಂದ ರಚನೆಯಾದ ಕನ್ನಡಿಗರ ಸರ್ಕಾರ ಬೇಕು. ಜೂನ್, ಜುಲೈ ತಿಂಗಳಲ್ಲಿ ಮತ್ತೊಂದು ಸುತ್ತಿನ ರಥಯಾತ್ರೆ ನಡೆಸುತ್ತೇನೆ. ಹಳ್ಳಿ, ಹಳ್ಳಿಗಳಲ್ಲಿ ರಥಯಾತ್ರೆ ನಡೆಸುತ್ತೇವೆ. ನಾನೇ ಜನರ ಮುಂದೆ ಬರುತ್ತೇನೆ. ನಮ್ಮ ಪಕ್ಷದಿಂದಲೇ ಬೆಳೆದು ಹೋದವರು ಜೆಡಿಎಸ್ ಮುಗಿದೇ ಹೋಯಿತು ಎಂದಿದ್ದರು. ಆದರೆ, ಜನತಾ ಜಲಧಾರೆ ಮಹಾಸಂಕಲ್ಪ ಸಮಾವೇಶ ಅವರಿಗೆ ಉತ್ತರ ಕೊಟ್ಟಿದೆ’ ಎಂದು ತಿರುಗೇಟು ನೀಡಿದರು.
‘ನಾನು ಈ ದೂಳಿನಿಂದ ಫಿನಿಕ್ಸ್‌ನಂತೆ ಮತ್ತೆ ಎದ್ದು ಬರುತ್ತೇನೆ. ನನ್ನ ಕೊನೆಯ ಉಸಿರುವವರೆಗೆ ಜನರ ಸೇವೆ ಮಾಡುತ್ತೇನೆ. ನಿಮ್ಮ ಹೃದಯದಲ್ಲಿ ನನಗೆ ಸ್ಥಾನ ಕೊಡಿ. ಐದು ವರ್ಷಗಳಲ್ಲಿ ಯೋಜನೆಗಳನ್ನು ರೂಪಿಸಿ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ನಾನು ನಿಮ್ಮ ಮುಂದೆ ಎಂದಿಗೂ ಮತ ಕೇಳಲು ಬರುವುದಿಲ್ಲ’ ಎಂದು ಹೇಳಿದರು.
‘ರೈತರ ಸಾಲ ಮನ್ನಾ ಮಾಡಲು ಮುಂದಾದಾಗ ನೋವು ಅನುಭವಿದ್ದು ನನಗೆ ಮಾತ್ರ ಗೊತ್ತು. ಜೆಡಿಎಸ್‌ನಲ್ಲಿ ಟಿಕೆಟ್ ಸಿಗಬೇಕಾದರೆ ಹಣ ಕೊಡಬೇಕು ಎಂದು ಒಬ್ಬರು ಆರೋಪ ಮಾಡಿದರು. ಆದರೆ, ಡಾ. ಅನ್ನದಾನಿ ಬಡವರಾದರೂ ಟಿಕೆಟ್ ಕೊಟ್ಟು ಚುನಾವಣಾ ಖರ್ಚನ್ನು ಪಕ್ಷ ಭರಿಸಿತು. ಮೈಸೂರಿನಲ್ಲಿ ಜೆಡಿಎಸ್‌ಗೆ ಒಂದು ಸ್ಥಾನವೂ ದೊರೆಯುವದಿಲ್ಲ ಎಂದು ಇಲ್ಲೇ ಬೆಳೆದು ಹೋದವರೇ ಹೇಳಿದರು’ ಎಂದು ಟೀಕಿಸಿದರು.
‘ಯಾವ ಟೀಕೆಗಳಿಗೂ ಹೆದರಬೇಕಿಲ್ಲ. ಹೃದಯಪೂರ್ವಕವಾಗಿ ಜನರ ಕೆಲಸ ಮಾಡಿ’ ಎಂದು ಸಂಸದ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಹಾಗೂ ಸೂರಜ್ ರೇವಣ್ಣ ಅವರಿಗೆ ಸಲಹೆ ನೀಡಿದರು.
ಪಟ್ಟನಾಯಕನಹಳ್ಳಿಯ ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ಇಡೀ ನಾಡು ಒಂದು ಪಕ್ಷವಾಗಬೇಕು. ದೇವೇಗೌಡರು ಈ ಪಕ್ಷದ ನೇತೃತ್ವ ವಹಿಸಬೇಕು. ಆಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ’ ಎಂದು ಪ್ರತಿಪಾದಿಸಿದರು.
‘ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಭಿನ್ನಮತ ಮರೆತು ಒಂದು ಪಕ್ಷವಾಗಿ ನೀರಿನ ವಿಚಾರಕ್ಕೆ ಹೋರಾಟ ಮಾಡುತ್ತಾರೆ. ಆದರೆ, ನಮ್ಮಲ್ಲಿ ರಾಜಕೀಯ ಮೇಲಾಟವೇ ಹೆಚ್ಚು. ರಾಜಕೀಯೇತರವಾಗಿ ನಾವೆಲ್ಲ ಯೋಚನೆ ಮಾಡಬೇಕು. ಎಚ್.ಡಿ. ಕುಮಾರಸ್ವಾಮಿ ಅವರು ಅವಕಾಶವಾದಿ ಅಲ್ಲ. ಸ್ವಾಭಿಮಾನಿ. ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಜೋಡೆತ್ತುಗಳಂತೆ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಮೇಕೆದಾಟು ಯೋಜನೆಗೆ ಸಾಕಾರಕ್ಕೆ ಹೋರಾಟ: ದೇವೇಗೌಡ
‘ಸ್ವತಂತ್ರವಾಗಿ ಮೇಕೆದಾಟು ಯೋಜನೆಗಾಗಿ ಜೆಡಿಎಸ್ ಹೋರಾಟ ನಡೆಸಲಿದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
‘ನಮ್ಮ ನೀರನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕು. ರಾಜ್ಯಕ್ಕೆ ಮೇಕೆದಾಟು ಯೋಜನೆ ಮುಖ್ಯವಾಗಿದ್ದು, ಕುಡಿಯುವ ನೀರಿಗೆ ಮುಂದೆ ಸಮಸ್ಯೆಯಾಗುವುದಿಲ್ಲ. ಕಾಂಗ್ರೆಸ್ ಹೋರಾಟ ನಡೆಸಿದರೂ ನಮದು ಅದು ಅನುಕರಣೆಯಲ್ಲ’ ಎಂದರು.
‘ಜಾತ್ಯತೀತ ಆಶಯಗಳಿಗಾಗಿ ಹೋರಾಟ ಮಾಡಬೇಕಾಗಿದೆ. ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ನಮ್ಮ ಪಕ್ಷವನ್ನು ಕುಗ್ಗಿಸುವ ಪ್ರಯತ್ನ ಹಲವು ಬಾರಿ ನಡೆದಿದೆ. ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ನೆಲದಿಂದಲೇ ನಮ್ಮ ಹೋರಾಟ ಆರಂಭವಾಗುತ್ತದೆ. ನನ್ನ ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದೇನೆ. ಹಲವು ಬಾರಿ ನೋವು ಅನುಭವಿಸಿದ್ದೇನೆ. ನಾನು ಎಲ್ಲ ಸಮುದಾಯಗಳಿಗೆ ರಾಜಕೀಯ ಶಕ್ತಿಯನ್ನು ನೀಡಿದ್ದೇನೆ’ ಎಂದರು.
ಚುನಾವಣೆಗಾಗಿ ಅಶ್ವಮೇಧ ಯಾಗ: ಇಬ್ರಾಹಿಂ
‘ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಇಳಿಸಿದ ಕಾಂಗ್ರೆಸ್ ಗೆ ಅಂಟಿಕೊಂಡ ದರಿದ್ರತನ ಇನ್ನೂ ಬಿಟ್ಟಿಲ್ಲ’ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಟೀಕಿಸಿದರು.
‘ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸಂಕಲ್ಪವನ್ನು ಜೆಡಿಎಸ್ ಹೊಂದಿದೆ. 2023ರ ವಿಧಾನಸಭಾ ಚುನಾವಣೆಗಾಗಿ ಅಶ್ವಮೇಧ ಯಾಗ ಆರಂಭಿಸಿದ್ದೇವೆ. ನಮ್ಮ ಕುದುರೆ ಬಿಟ್ಟಿದ್ದೇವೆ. ಅರ್ಜುನನ ಹಾಗೆ ಕುಮಾರಸ್ವಾಮಿ ಇದ್ದಾರೆ. ದೇವೇಗೌಡರು ಕೃಷ್ಣನ ರೀತಿ ಇದ್ದಾರೆ. ರಥ ಓಡಿಸಲು ನಾವು ಸಾಬರು ಇದ್ದೇವೆ’ ಎಂದರು.
‘ನವೆಂಬರ್ ಡಿಸೆಂಬರ್‌ನಲ್ಲಿ ಚುನಾವಣೆ ಬರುತ್ತದೆ. ನೀವೆಲ್ಲರೂ ಸಜ್ಜಾಗಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಜನತಾ ಜಲಧಾರೆ ಮಹಾಸಂಕಲ್ಪ ಸಮಾವೇಶದ ವೈಶಿಷ್ಟ್ಯಗಳು:
* ವಾರಾಣಸಿಯಿಂದ ಬಂದಿದ್ದ 24 ಪಂಡಿತರ ತಂಡದಿಂದ ಆಕರ್ಷಕ ಗಂಗಾ ಆರತಿ
* 65 ಎಕರೆ ಪ್ರದೇಶದಲ್ಲಿ ನಡೆದ ಸಮಾವೇಶ
* ಮಂಡ್ಯ, ಹಾಸನ, ರಾಮನಗರ ಸೇರಿದಂತೆ ನಾಡಿನ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಕಾರ್ಯಕರ್ತರು
* 4 ಸಾವಿರ ಅಡಿ ವಿಸ್ತಾರವಾದ ಜಲಾಶಯ ಮಾದರಿಯ ಬೃಹತ್ ವೇದಿಕೆ.
* ಎಲ್ಲರಿಗೂ ಊಟದ ವ್ಯವಸ್ಥೆ
* ಬೆಳಿಗ್ಗೆಯಿಂದ ನೆಲಮಂಗಲದ ಬಾವಿಕೆರೆಯತ್ತ ಹೆಜ್ಜೆ ಹಾಕಿದ ಕಾರ್ಯಕರ್ತರು. ಜನಸಾಗರ ನೋಡಿ ಹರ್ಷ ವ್ಯಕ್ತಪಡಿಸಿದ ಎಚ್.ಡಿ. ದೇವೇಗೌಡರು.
* ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಾಲೆ ಮತ್ತು ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕಕ್ಕೆ ಮುಕ್ತಿ ನೀಡುವ ಸಂದೇಶ ಸಾರುವ ಕಿರುವಿಡಿಯೊಗಳನ್ನು ಪ್ರದರ್ಶಿಸಲಾಯಿತು.
* ಶಿಕ್ಷಣ, ಆರೋಗ್ಯ, ರೈತ ಚೈತನ್ಯ, ಮಹಿಳಾ ಚೈತನ್ಯ, ಯುವ ಚೈತನ್ಯ ಒಳಗೊಂಡ ಪಂಚರತ್ನ ಯೋಜನೆಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ವ್ಯಕ್ತಿತ್ವ ಮತ್ತು ಸೇವಾ ಕಾರ್ಯ ಬಿಂಬಿಸುವ
ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು.
* ಜನಸಾಗರದತ್ತ ಕೈಬೀಸಿದ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಜೋಡಿ.
* 187 ವಿಧಾನಸಭಾ ಕ್ಷೇತ್ರಗಳಲ್ಲಿ 6000 ಕಿಲೋ ಮೀಟರ್ ಸಂಚರಿಸಿದ ಜನತಾ ಜಲಧಾರೆ ಯಾತ್ರೆ.
* ಗಮನಸೆಳೆದ ನಾಡಗೀತೆಯ ನೃತ್ಯರೂಪಕ. ಭಾವೈಕ್ಯತೆ ಸಂದೇಶ ಸಾರಿದ ನೃತ್ಯ.
*ರಾಷ್ಟೀಯ ಹೆದ್ದಾರಿಯಲ್ಲಿ ಹೆಚ್ಚಿದ ವಾಹನಗಳ ದಟ್ಟಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.