ಶ್ರೀರಂಗಪಟ್ಟಣ (ಮಂಡ್ಯ): ತಾಲ್ಲೂಕಿನ ಗಣಂಗೂರಿನಿಂದ ಕೆ.ಶೆಟ್ಟಹಳ್ಳಿವರೆಗೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತ್ಯೇಕಗಾಗಿ ಹೆಜ್ಜೆ ಹಾಕಿದರು
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಸಿ.ಟಿ. ರವಿ, ಮುಖಂಡ ಇಂಡುವಾಳು ಸಚ್ಚಿದಾನಂದ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್ ತಮ್ಮ ಪಕ್ಷ ಕಾರ್ಯಕರ್ತರ ಜತೆ ಮುಂದೆ ಹೆಜ್ಜೆ ಹಾಕಿದರು. ಬಿಜೆಪಿ ಗುಂಪಿನ ಹಿಂದೆ ಪರ್ಲಾಂಗು ದೂರ ಅಂತರದಲ್ಲಿ ಜೆಡಿಎಸ್ ಕಾರ್ಯಕರ್ತರು ಹಿಂಬಾಲಿಸಿದರು. ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸಾಗಿದರು.
ಬಿಜೆಪಿ ಗುಂಪಿನ ಜತೆ ಧ್ವನಿ ವರ್ಧಕದಲ್ಲಿ ಬಿ.ವೈ. ವಿಜಯೇಂದ್ರ ಅವರನ್ನು ಗುಣಗಾನ ಮಾಡುವ ಹಾಡುಗಳು ಕೇಳಿ ಬಂದವು. ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಹೊಗಳು ಹಾಡಿಗಳು ಮೊಳಗಿದವು. ಆಯಾ ಪಕ್ಷಗಳ ಕಾರ್ಯಕರ್ತರು ವಿವಿಧ ಗ್ರಾಮಗಳ ಬಳಿ ತಮ್ಮ ನಾಯಕರಿಗೆ ಹಾರ ಹಾಕಲು ಮುಗಿ ಬಿದ್ದರು. ಜೈಕಾರ ಮೊಳಗಿಸಿದರು.
ನಿಖಿಲ್ ಮೆರವಣಿಗೆ: ಜೆಡಿಎಸ್ ಗುಂಪು ಟಿ.ಎಂ. ಹೊಸೂರು ಗೇಟ್ ಬಳಿ ಬರುತ್ತಿದ್ದಂತೆಯೇ ನಿಖಿಲ್ ಕುಮಾರಸ್ವಾಮಿ ಅವರನ್ನು ಆ ಪಕ್ಷದ ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಸುಮಾರು 100 ಮೀಟರ್ ದೂರ ಮೆರವಣಿಗೆ ಮಾಡಿದರು. ಜೆಡಿಎಸ್ ಪಕ್ಷ ಮತ್ತು ನಾಯಕರು ಪರ ಘೋಷಣೆ ಕೂಗಿದರು.
ಸೆಲ್ಫಿ ಕ್ರೇಜ್: ನಿಖಿಲ್ ಕುಮಾರಸ್ವಾಮಿ ಅವರ ಜತೆ ಸೆಲ್ಫಿ ತೆಗೆಸಿಕೊಳ್ಳಲು ಕಾರ್ಯಕರ್ತರು ಮುಗಿ ಬಿದ್ದರು. ಇದರಿಂದ ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿಯನ್ನು ತಹಬದಿಗೆ ತರುವಷ್ಟರಲ್ಲಿ ನಿಖಿಲ್ ಅವರ ಅಂಗ ರಕ್ಷಕರು ಹೈರಾಣಾದರು. ವಿಜಯೇಂದ್ರ ಅವರಿಗೆ ಹಾರ ಹಾಕಲು, ಅವರ ಜತೆ ಸೆಸೆಲ್ಫಿ ತೆಗೆಸಿಕೊಳ್ಳಲೂ ಕಾರ್ಯಕರ್ತರು ಮುಗಿ ಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.