ಬೆಂಗಳೂರು: ಸರ್ಕಾರ ರಚಿಸಿಯೇ ತೀರಬೇಕು ಎಂಬ ಶಪಥ ಮಾಡಿರುವ ಬಿಜೆಪಿ ನಾಯಕರು ‘ಆಪರೇಷನ್ ಕಮಲ’ಕ್ಕಾಗಿ ಹರಸಾಹಸ ಮುಂದುವರಿಸಿದ್ದು, ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮಿತ್ರ ಪಕ್ಷಗಳ ನಾಯಕರು ಶತಪ್ರಯತ್ನ ನಡೆಸುತ್ತಿದ್ದಾರೆ.
‘ಕಾಂಗ್ರೆಸ್–ಜೆಡಿಎಸ್‌ನ 18ಕ್ಕೂ ಹೆಚ್ಚು ಶಾಸಕರನ್ನು ಮುಂಬೈ ವಿಮಾನ ಹತ್ತಿಸುವುದು ಖಚಿತ, ಸರ್ಕಾರ ಬಿದ್ದೇ ಬೀಳುತ್ತದೆ’ ಎಂದು ಬಿಜೆಪಿ ನಾಯಕರು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ‘ಅಧಿಕಾರದ ದಾಹ ಮಿತಿ ಮೀರಿರುವ ಬಿಜೆಪಿ ನಾಯಕರು ಹಬ್ಬಿಸುತ್ತಿ
ರುವ ವದಂತಿ ಇದು. ಯಾರೊಬ್ಬರೂ ಪಕ್ಷ ಬಿಟ್ಟು ಹೋಗುವುದಿಲ್ಲ’ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ನೂತನ ಸರ್ಕಾರ ರಚಿಸುವ ಹೊಣೆಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೆಗಲಿಗೇರಿಸುವ ಕುರಿತು ಬುಧವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅದರ ಬೆನ್ನಲ್ಲೇ, ‘18ಕ್ಕೂ ಹೆಚ್ಚು ಶಾಸಕರನ್ನು ಹೈಜಾಕ್ ಮಾಡಲು ಯಡಿಯೂರಪ್ಪ ಯತ್ನಿಸುತ್ತಿದ್ದಾರೆ. ಅದನ್ನು ನಿಲ್ಲಿಸದಿದ್ದರೆ ಬಿಜೆಪಿ ವಿರುದ್ಧ ದಂಗೆ ಏಳಲು ರಾಜ್ಯದ ಜನರಿಗೆ ಕರೆ ನೀಡಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗಳು
ಗುರುವಾರ ಇಡೀ ದಿನ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಗಳು, ದೋಸ್ತಿ ಸರ್ಕಾರದಲ್ಲಿ ‘ಕಂಪನ’ ಆರಂಭವಾಗಿರುವುದರ ಸೂಚಕ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
‘18ಕ್ಕೂ ಹೆಚ್ಚು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಶಸ್ತ್ರ ಕೆಳಗಿಟ್ಟಿರುವುದಾಗಿ ಹೇಳುತ್ತಿರುವ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲೇ ಕಾಂಗ್ರೆಸ್ ಶಾಸಕರು ನಮ್ಮತ್ತ ಬರಲಿದ್ದಾರೆ. ಎರಡು– ಮೂರು ದಿನಗಳಲ್ಲಿ ರಾಜಕೀಯ ಕ್ರಾಂತಿ ಆಗಲಿದೆ’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.
‘ಗುರುವಾರ ಸಂಜೆಯೇ ಹೊರಡಬೇಕಾಗಿತ್ತು. ಆದರೆ, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಸರತ್ತನ್ನು ಮುಖ್ಯಮಂತ್ರಿ ಮುಂದುವರಿಸಿದ್ದಾರೆ. ಇದರಿಂದ ತುಸು ಹಿನ್ನಡೆಯಾಗಿದೆ’ ಎಂದು ಅವರು ತಿಳಿಸಿದರು.
ಆದರೆ, ಈ ಮಾತುಗಳನ್ನು ಕಾಂಗ್ರೆಸ್ ನಾಯಕರು ಸುತರಾಂ ಅಲ್ಲಗಳೆಯುತ್ತಾರೆ.
‘ಜಾರಕಿಹೊಳಿ ಸಹೋದರರು ಎತ್ತಿದ್ದ ಆಕ್ಷೇಪಗಳನ್ನು ಆಲಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪರಿಸ್ಥಿತಿ ತಿಳಿಯಾಗಿದೆ. ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಲಾಬಿ ನಡೆಸುತ್ತಿರುವುದು ಹೌದು. ಆದರೆ, ಮೈತ್ರಿ ಸರ್ಕಾರ ಪತನಗೊಳಿಸುವ ಮಟ್ಟಕ್ಕೆ ನಮ್ಮ ಶಾಸಕರು ಹೋಗುವುದಿಲ್ಲ. ಅದೆಲ್ಲವೂ ಬಿಜೆಪಿಯ ಕಟ್ಟುಕತೆ’ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದರು.
‘ಕೆಲವು ಶಾಸಕರು ಬೆಂಗಳೂರಿನಲ್ಲಿದ್ದಾರೆ. ಕೆಲವರು ಕ್ಷೇತ್ರಗಳಲ್ಲಿದ್ದಾರೆ. ಅವರೆಲ್ಲರೂ ಸಂಪರ್ಕದಲ್ಲೇ ಇದ್ದಾರೆ. ಬಿಜೆಪಿ ಆಮಿಷ ಒಡ್ಡುತ್ತಿರುವುದಾಗಿ ಅವರೇ ಹೇಳಿಕೆ ನೀಡಿದ್ದಾರೆ. ಪಕ್ಷ ತೊರೆಯುವುದೇ ಆದಲ್ಲಿ, ಬಿಜೆಪಿಯ ಆಮಿಷವನ್ನು ಬಹಿರಂಗಪಡಿಸುವ ಪ್ರಮೇಯವೇ ಇರಲಿಲ್ಲ’ ಎಂದೂ ಅವರು ಹೇಳಿದರು.
‘ಸಂಪುಟ ವಿಸ್ತರಣೆ ಬಳಿಕ ಸಣ್ಣ ಪುಟ್ಟ ಅಸಮಾಧಾನ ಹೊರಬೀಳಬಹುದು. ಅಂತಹ ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಅದಕ್ಕೆ ಅವಕಾಶ ಕೊಡದೇ ಇರಲು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಈ ಹಂತದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವುದು ಹೌದು. ಸದ್ಯಕ್ಕಂತೂ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ’ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.
ಶಾಸಕರ ಹೈಜಾಕ್‌ಗೆ ಬಿಜೆಪಿ ಸಂಚು: ಕುಮಾರಸ್ವಾಮಿ ಆರೋಪ
ಕಾಂಗ್ರೆಸ್‌ನ ಸಿ.ಎಸ್. ಶಿವಳ್ಳಿ, ಜೆಡಿಎಸ್ ನ ಸುರೇಶಗೌಡ ಸೇರಿದಂತೆ 18 ಶಾಸಕರನ್ನು ಹೈಜಾಕ್ ಮಾಡಲು ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
‘18 ಶಾಸಕರು ಬಿಜೆಪಿಗೆ ಬರಲು ಅಣಿಯಾಗಿದ್ದಾರೆ. ಎಲ್ಲರನ್ನೂ ಮುಂಬೈ ಹಾಗೂ ಪುಣೆಗೆ ಕರೆದೊಯ್ಯುತ್ತಿದ್ದೇವೆ. ನೀವಿಬ್ಬರೂ ರೆಡಿಯಾಗಿ ಎಂದು ಶಿವಳ್ಳಿ ಮತ್ತು ಸುರೇಶಗೌಡರಿಗೆ ನಿನ್ನೆ ರಾತ್ರಿ ಬಿಜೆಪಿಯವರು ಕರೆ ಮಾಡಿದ್ದಾರೆ. ಶಿವಳ್ಳಿ ಅವರ ರೂಮಿಗೆ ರಾತ್ರಿ 12 ಗಂಟೆಗೆ ಹೋಗಿದ್ದಾರೆ. ಬಂದು ಬಿಡಪ್ಪ, ₹5 ಕೋಟಿಯನ್ನು ನಿಮ್ಮ ಊರಿಗೆ ತಲುಪಿಸಿ ಬಿಡುತ್ತೇವೆ ಎಂಬ ಆಮಿಷ ಒಡ್ಡಿದ್ದಾರೆ’ ಎಂದು ದೂರಿದರು.
‘ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಮುಂಬೈನಿಂದ ಮಿಲಿಟರಿ ರಕ್ಷಣೆಯಲ್ಲಿ ಬೆಂಗಳೂರಿಗೆ ಕರೆತಂದು ಸರ್ಕಾರ ಬೀಳಿಸುತ್ತಾರಂತೆ. ಇಂತಹ ವ್ಯರ್ಥ ಪ್ರಯತ್ನವನ್ನು ಯಡಿಯೂರಪ್ಪ ಕೈಬಿಡಬೇಕು’ ಎಂದು ಅವರು ಎಚ್ಚರಿಕೆ ನೀಡಿದರು.
‘ದಂಗೆಯ ಮುಂಚಿನ ದಿನಗಳು’
‘ಸಮ್ಮಿಶ್ರ ಸರ್ಕಾರಕ್ಕೆ ಇದೇ ರೀತಿ ತೊಂದರೆ ನೀಡಿದರೆ ನಾನು ಸುಮ್ಮನಿರುವುದಿಲ್ಲ. ಬಿಜೆಪಿ ವಿರುದ್ಧ ದಂಗೆ ಏಳುವಂತೆ ನಾಡಿನ ಜನರಿಗೆ ಕರೆ ಕೊಡುತ್ತೇವೆ’ ಎಂದು ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ವಿಷಯದಲ್ಲಿ ಬಿಜೆಪಿಯವರು ಹುಡುಗಾಟ ಆಡುವುದನ್ನು ನಿಲ್ಲಿಸಬೇಕು. ಅವರೊಬ್ಬರೇ ಅಧಿಕಾರದಲ್ಲಿ ಇರಬೇಕಾ’ ಎಂದು ಕಿಡಿಕಾರಿದರು.
ಇದಕ್ಕೆ ಬೆಂಗಳೂರಿನಲ್ಲಿ ತಿರುಗೇಟು ಕೊಟ್ಟಿರುವ ಬಿಜೆಪಿ ನಾಯಕರು, ಜನ ದಂಗೆ ಏಳಬೇಕು ಎಂದು ಕರೆ ನೀಡಿರುವ ಮುಖ್ಯಮಂತ್ರಿ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಲೆಕ್ಕಾಚಾರ
ದೋಸ್ತಿಗಳ ಲೆಕ್ಕಾಚಾರ
* ನಾವೆಲ್ಲರೂ ಇಲ್ಲೇ ಇದ್ದೇವೆ. ಯಾರೂ ಮುಂಬೈಗೆ ಹೋಗುವುದಿಲ್ಲ. ಯಾವ ಬಿಜೆಪಿ ನಾಯಕರೂ ಸಂಪರ್ಕಿಸಿಲ್ಲ. ನಮ್ಮ ಸಮಸ್ಯೆಗಳು ಹಂತಹಂತವಾಗಿ ಬಗೆಹರಿಯಲಿವೆ
-ರಮೇಶ ಜಾರಕಿಹೊಳಿ, ಪೌರಾಡಳಿತ ಸಚಿವ
* ಪಕ್ಷ ತೊರೆಯಲು ಕಾಂಗ್ರೆಸ್ ಶಾಸಕರು ನಿರ್ಧರಿಸಿದ್ದಾರೆ. ಆ ಪಕ್ಷದ ನಾಯಕರು ಶಾಸಕರನ್ನು ಹಿಡಿದಿಟ್ಟುಕೊಳ್ಳಲು ದಿಡ್ಡಿ ಬಾಗಿಲು ಹಾಕಿಕೊಳ್ಳಲಿ
-ಆರ್. ಅಶೋಕ್, ಬಿಜೆಪಿ ಶಾಸಕ
* 22 ಶಾಸಕರು ಒಳಗೊಳಗೆ ಕುದಿಯುತ್ತಿದ್ದಾರೆ. ರಾಜಭವನದ ಕದ ತಟ್ಟಲಿದ್ದಾರೆ ಎಂಬುದೆಲ್ಲ ಮಾಧ್ಯಮಗಳ ಸೃಷ್ಟಿ. ಅವೆಲ್ಲವೂ ಸುಳ್ಳು.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.