ADVERTISEMENT

ನಾನೇ ಬಿಎಸ್‌ವೈ ನಿವಾಸಕ್ಕೆ ಕಳಿಸಿದ್ದೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 19:23 IST
Last Updated 22 ಸೆಪ್ಟೆಂಬರ್ 2018, 19:23 IST

ಹಾಸನ: ‘ನಾಗಮಂಗಲ ಶಾಸಕ ಸುರೇಶ್‌ಗೌಡ ಅವರನ್ನು ಬಿ.ಎಸ್‌.ಯಡಿಯೂರಪ್ಪ ನಿವಾಸಕ್ಕೆ ಕಳಿಸಿದ್ದೇ ನಾನು. ಇವರಿಬ್ಬರ ಸಂಭಾಷಣೆಯ ಧ್ವನಿ ಮುದ್ರಿಕೆ ನನ್ನ ಬಳಿ ಇದೆ. ಸಮಯ ಬಂದಾಗ ಬಹಿರಂಗಪಡಿಸುವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇಲ್ಲಿ ಶನಿವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಯಡಿಯೂರಪ್ಪ ಏನು ಹೇಳುತ್ತಾರೆ ಕೇಳಿ ಎಂದು ನಾನೇ ಹೇಳಿದ್ದೆ. ನಮ್ಮ ಶಾಸಕರೊಂದಿಗೆ ಯಾರ‍್ಯಾರು ಏನೇನು ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿಯೂ ನನ್ನ ಬಳಿ ಇದೆ. ಬಿಜೆಪಿ ನಾಯಕರ ವರ್ತನೆ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವೆ’ ಎಂದರು.

‘ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಸೇರಿ ಕಾಂಗ್ರೆಸ್‌ನ ಕೆಲ ಶಾಸಕರು ನನ್ನ ಗಮನಕ್ಕೆ ತಂದೇ ಮುಂಬೈಗೆ ಹೋಗಿದ್ದಾರೆ. ಭಾನುವಾರ ವಾಪಸಾಗಲಿದ್ದಾರೆ. ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ‌’ ಎಂದರು.

ADVERTISEMENT

‘ಯಡಿಯೂರಪ್ಪನವರು ಸೋಮವಾರ ಏನೋ ಸಿಹಿ ಸುದ್ದಿ ಕೊಡುತ್ತಾರಂತೆ. ಅದ್ಯಾವ ಸುದ್ದಿ ಎಂಬುದನ್ನು ನೋಡೋಣ’ ಎಂದು ವ್ಯಂಗ್ಯವಾಡಿದರು. ‘ಉದಯಗೌಡ ಶ್ರೀಲಂಕಾದಲ್ಲಿ ವಾಸ್ತವ್ಯ ಹೂಡಿರುವ ಹೋಟೆಲ್ ಕೊಠಡಿ ಸಂಖ್ಯೆ ಕೂಡ ನನಗೆ ಗೊತ್ತಿದೆ’ ಎಂದು ತಿಳಿಸಿದರು.

‘ಮೈತ್ರಿ ಸರ್ಕಾರ ಸುಭದ್ರವಾಗಿದೆ. ಆದರೆ, ನನ್ನ ಅಭಿವೃದ್ಧಿಯ ವೇಗಕ್ಕೆ ಕಡಿವಾಣ ಹಾಕಲು ಕೆಲವರು ಪ್ರಯತ್ನಿಸುತ್ತಿದ್ದಾರೆ’ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಜೆಡಿಎಸ್‌ ಶಾಸಕರ ಒಗ್ಗಟ್ಟು ಪ್ರದರ್ಶನ

ಹಾಸನ: ಎಚ್.ಡಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ಶನಿವಾರ ರಾತ್ರಿ ನಗರದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ 35 ಶಾಸಕರು ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಶಾಸಕರಾದ ‌ನಾರಾಯಣಗೌಡ ಹಾಗೂ ಗೌರಿಶಂಕರ್ ಅನುಮತಿ ಪಡೆದು ಗೈರಾಗಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.

ಪಕ್ಷದ ಸಂಘಟನೆ, ಲೋಕಸಭೆ ಚುನಾವಣಾ ಸಿದ್ಧತೆ ಬಗ್ಗೆ ಚರ್ಚೆ ನಡೆಯಿತು. ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮುಂದುವರಿಸಲಾಗುವುದು ಎಂದು ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಇಷ್ಟು ದೂರದಲ್ಲಿ ಸಭೆ ನಡೆದರೂ ಎಲ್ಲ ಶಾಸಕರೂ ಭಾಗಿಯಾಗಿದ್ದಾರೆ. ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.